ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಏರುಗತಿಯಲ್ಲಿ ಚಿನ್ನದ ದರ

ಕೋವಿಡ್‌–19 ಹೆಚ್ಚಳ, ರೂಪಾಯಿ ಮೌಲ್ಯ ಇಳಿಕೆ ಪರಿಣಾಮ
Last Updated 18 ಏಪ್ರಿಲ್ 2021, 18:12 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತೆ ಏರುಮುಖವಾಗಿದೆ. ಬೆಂಗಳೂರಿನಲ್ಲಿ ಏಪ್ರಿಲ್‌ 1ರಿಂದ 17ರವರೆಗೆ ಚಿನ್ನವು 10 ಗ್ರಾಂಗೆ ₹ 3,360ರಷ್ಟು ಹಾಗೂ ಬೆಳ್ಳಿ ದರ ಕೆ.ಜಿ.ಗೆ ₹ 6,200ರಷ್ಟು ಏರಿಕೆ ದಾಖಲಿಸಿದೆ. ಏಪ್ರಿಲ್‌ 1ರಂದು ಬೆಂಗಳೂರಿನಲ್ಲಿ10 ಗ್ರಾಂ ಚಿನ್ನದ ದರ ₹ 45,440 ಇತ್ತು. ಈಗ 10 ಗ್ರಾಂ ಚಿನ್ನದ ದರವು ₹ 48,800ಕ್ಕೆ ಏರಿಕೆಯಾಗಿದೆ. ಬೆಳ್ಳಿ ದರ ಕೆ.ಜಿ.ಗೆ ₹ 63,400 ಇತ್ತು. ಈಗ ಅದು ₹ 69,600ಕ್ಕೆ ಏರಿದೆ.

‘ಚಿನ್ನದ ದರ ಏರಿಕೆಗೆ ಕಾರಣಗಳು ಹಲವು. ಕೋವಿಡ್‌–19 ಸಾಂಕ್ರಾಮಿಕ ವೇಗವಾಗಿ ಹರಡುತ್ತಿರುವುದು, ರೂಪಾಯಿ ಮೌಲ್ಯ ಇಳಿಕೆ ಹಾಗೂ ಆರ್ಥಿಕ ಬೆಳವಣಿಗೆಯ ಕುರಿತ ಅನಿಶ್ಚಿತತೆಯು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿವೆ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ ವಿದ್ಯಾಸಾಗರ್‌ ತಿಳಿಸಿದರು.

‘ಕಳೆದ ವರ್ಷ ಕೋವಿಡ್‌–19 ಹರಡಲು ಆರಂಭವಾದ ಬಳಿಕ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ₹ 5,200ರವರೆಗೂ ಏರಿಕೆ ಆಗಿತ್ತು. ಎರಡನೇ ಅಲೆಯ ಸಂದರ್ಭದಲ್ಲಿಯೂ ಚಿನ್ನದ ಬೆಲೆ ಏರಿಕೆ ಕಾಣಲಾರಂಭಿಸಿದೆ. ಕಳೆದ 10 ವರ್ಷಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಸುಮಾರು ಶೇ 20ರಿಂದ ಶೇ 30ರವರೆಗೂ ಹೆಚ್ಚಾಗಿದೆ. ಆರ್ಥಿಕತೆಯು ಸ್ಥಿರವಾಗಿಲ್ಲದಿದ್ದರೆ ಅಲ್ಪಾವಧಿಯಲ್ಲಿ ಇನ್ನೂ ಶೇ 10ರಷ್ಟು ಏರಿಕೆ ಆಗುವ ನಿರೀಕ್ಷೆ ಇದೆ. ಪ್ರತಿ ಗ್ರಾಂಗೆ ₹ 300ರಿಂದ ₹ 400ರವರೆಗೂ ಏರಿಕೆ ಆಗಬಹುದು’ ಎಂದು ಅವರು ಹೇಳಿದರು.

ರೂಪಾಯಿ ಕುಸಿತ: ‘ಕೋವಿಡ್‌ನ ಎರಡನೇ ಅಲೆಯು ಆರಂಭವಾದಾಗಿ ನಿಂದ ಈವರೆಗೆ ಡಾಲರ್ ಎದುರು ರೂಪಾಯಿ ಮೌಲ್ಯವು ಸುಮಾರು ₹ 2ರಷ್ಟು ಇಳಿಕೆ ಆಗಿದೆ. ಇದರಿಂದಾಗಿ ಚಿನ್ನದ ದರ ಹೆಚ್ಚಾಗುತ್ತಿದೆ. ಹಿಂದಿನಿಂದಲೂ ಚಿನ್ನವು ಆಪದ್ಧನ ಎಂದು ಪರಿಗಣಿತವಾಗಿರುವುದರಿಂದ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುವವರು ಸಹ ಚಿನ್ನದ ಖರೀದಿಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇದರಿಂದಲೂ ಬೆಲೆ ಹೆಚ್ಚುತ್ತಿದೆ’ ಎಂದರು.

ಸದ್ಯದ ಅನಿಶ್ಚಿತ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆಗೇ ಕಷ್ಟಪಡುತ್ತಿರುವ ಮಧ್ಯಮವರ್ಗಕ್ಕೆ ಚಿನ್ನ ಖರೀದಿಸುವ ಆಲೋಚನೆ ಮಾಡುವುದೇ ಕಷ್ಟ ಎಂಬಂತಾಗಿದೆ. ಭವಿಷ್ಯದ ದೃಷ್ಟಿಯಿಂದ ಚಿನ್ನದ ಗಟ್ಟಿ ಖರೀದಿಸುವುದು ಉತ್ತಮವಾದರೂ ಈ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ವೈಯಕ್ತಿಕ ಹಣಕಾಸು ಸಲಹೆಗಾರರು ಹೇಳುತ್ತಾರೆ.

‘ಕೋವಿಡ್‌ ಬರುವುದಕ್ಕೂ ಮೊದಲು ನಮ್ಮಲ್ಲಿ ಚಿನ್ನಾಭರಣಗಳಿಗೆ ಮಾತ್ರವೇ ಬೇಡಿಕೆ ಇತ್ತು. ಆದರೆ, ಈಗ ಚಿನ್ನದ ಗಟ್ಟಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮದುವೆ ಸಮಾರಂಭಗಳಿಗೆ ಚಿನ್ನಾಭರಣ ಖರೀದಿಸುವುದು ಕಡಿಮೆ ಆಗುತ್ತಲೇ ಇದೆ’ ಎಂದು ವರ್ತಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT