ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ನೇ ವೇತನ ಆಯೋಗ: ಕೇಂದ್ರ ಸರ್ಕಾರದ ನೌಕರರ ಡಿಎ ಶೇ 3ರಷ್ಟು ಹೆಚ್ಚಳ

Last Updated 31 ಮಾರ್ಚ್ 2022, 1:03 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿ ಭತ್ಯೆಯನ್ನು(ಡಿಎ) ಶೇಕಡ 3ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಶೇಕಡ 3ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ದೊರೆತಿದೆ.

ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಇದರ ಲಾಭ ದೊರೆಯಲಿದೆ.

ಪ್ರಸ್ತುತ ಮೂಲ ವೇತನದ ಶೇಕಡ 31ರಷ್ಟು ಮೊತ್ತವನ್ನು ತುಟ್ಟಿ ಭತ್ಯೆ ಅಥವಾ ಪರಿಹಾರವಾಗಿ ನೀಡಲಾಗುತ್ತಿದ್ದು, ಸರ್ಕಾರದ ಅನುಮೋದನೆಯ ಬಳಿಕ ಡಿಎ ಶೇಕಡ 34ಕ್ಕೆ ಏರಿಕೆಯಾದಂತಾಗಿದೆ.

ತುಟ್ಟಿ ಭತ್ಯೆ ಹೆಚ್ಚಿಸುವ ಈ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕ ₹9,544.50 ಕೋಟಿ ಹೊರೆಯಾಗುವುದಾಗಿ ಸರ್ಕಾರ ತಿಳಿಸಿದೆ.

ಡಿಎ ಹೆಚ್ಚಳವು ಕೇಂದ್ರ ಸರ್ಕಾರದ 47.68 ಲಕ್ಷ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ 2022ರ ಜನವರಿ 1ರಿಂದಲೇಅನ್ವಯವಾಗಲಿದೆ.

ತುಟ್ಟಿಭತ್ಯೆ ಮತ್ತು ಹಣದುಬ್ಬರ

ತುಟ್ಟಿಭತ್ಯೆಗೂ ಹಣದುಬ್ಬರ ಅಥವಾ ಬೆಲೆ ಏರಿಕೆಗೂ ನೇರವಾದ ನಂಟು ಇದೆ. ಸರ್ಕಾರಿ ನೌಕರರ ಒಟ್ಟು ವೇತನದಲ್ಲಿ ಮೂಲವೇತನ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆ ಮುಂತಾದವುಗಳ ಜೊತೆಗೇ ತುಟ್ಟಿಭತ್ಯೆಯೂ ಸೇರಿರುತ್ತದೆ. ತುಟ್ಟಿಭತ್ಯೆ ಹೊರತುಪಡಿಸಿದ ಇತರ ಭತ್ಯೆಗಳು ನಿರ್ದಿಷ್ಟ ಖರ್ಚು ವೆಚ್ಚಗಳಿಗೆ ಸಂಬಂಧಪಟ್ಟಿದ್ದು ಅವುಗಳನ್ನು ಮೂಲವೇತನದ ಒಂದು ನಿಗದಿತ ಶೇಕಡಾ ಭಾಗ ಅಥವಾ ನಿರ್ದಿಷ್ಟ ಮೊತ್ತದ ರೂಪದಲ್ಲಿ ನೀಡಲಾಗುತ್ತದೆ.

ಇಂತಹ ಭತ್ಯೆಗಳು ಪದೇ ಪದೇ ಹೆಚ್ಚಳವಾಗುವುದಿಲ್ಲ. ವ್ಯಕ್ತಿಯ ಜೀವನ ನಿರ್ವಹಣಾ ವೆಚ್ಚಕ್ಕೆ ಪೂರಕವಾಗಿ ತುಟ್ಟಿಭತ್ಯೆಯನ್ನು ಬೆಲೆ ಸೂಚ್ಯಂಕ ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಅಂದರೆ ಜನವರಿ ಮತ್ತು ಜುಲೈ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ. ಒಂದು ವೇಳೆ ತುಟ್ಟಿಭತ್ಯೆ ಇಲ್ಲದಿದ್ದಲ್ಲಿ ಮುಂದಿನ ವೇತನ ಪರಿಷ್ಕರಣೆಯವರೆಗೆ ಹತ್ತು ವರ್ಷಗಳ ಕಾಲ ವಾರ್ಷಿಕ ವೇತನ ಬಡ್ತಿ ಹೊರತಾಗಿ ಸಂಬಳ ಅಥವಾ ಪಿಂಚಣಿಯಲ್ಲಿ ಯಾವುದೇ ಹೆಚ್ಚಳವಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT