ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಎಣ್ಣೆ ದರ ಇನ್ನಷ್ಟು ತಗ್ಗಿಸಿ: ಅಡುಗೆ ಎಣ್ಣೆ ಉದ್ಯಮದ ಪ್ರತಿನಿಧಿಗಳಿಗೆ ಕೇಂದ್ರ

ಲೀಟರಿಗೆ ₹12ರವರೆಗೆ ಕಡಿಮೆ ಮಾಡಲು ಕೇಂದ್ರ ಸೂಚನೆ
Published 2 ಜೂನ್ 2023, 15:23 IST
Last Updated 2 ಜೂನ್ 2023, 15:23 IST
ಅಕ್ಷರ ಗಾತ್ರ

ನವದೆಹಲಿ: ಅಡುಗೆ ಎಣ್ಣೆಗಳ ಮೇಲಿನ ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ಲೀಟರಿಗೆ ಇನ್ನೂ ₹8ರಿಂದ ₹12ರವರೆಗೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರವು ಅಡುಗೆ ಎಣ್ಣೆ ಉದ್ಯಮದ ಪ್ರತಿನಿಧಿಗಳಿಗೆ ಸೂಚನೆ ನೀಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ದರದಲ್ಲಿ ಆಗಿರುವ ಇಳಿಕೆಗೆ ಅನುಗುಣವಾಗಿ ದೇಶದಲ್ಲಿಯೂ ದರ ಕಡಿಮೆ ಮಾಡುವಂತೆ ತಿಳಿಸಿದೆ.

ಅಡುಗೆ ಎಣ್ಣೆಗಳ ಬೆಲೆಯನ್ನು ಇನ್ನಷ್ಟು ಇಳಿಕೆ ಮಾಡುವ ಸಂಬಂಧ ತಿಂಗಳಲ್ಲಿ ನಡೆದ ಎರಡನೇ ಸಭೆ ಇದಾಗಿದೆ. ಆಹಾರ ಇಲಾಖೆಯ ಕಾರ್ಯದರ್ಶಿ ಸಂಜೀವ್‌ ಚೋಪ್ರಾ ಅವರು ನಡೆಸಿದ ಸಭೆಯಲ್ಲಿ ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ, ಇಂಡಿಯನ್ ವೆಜಿಟೆಬಲ್‌ ಆಯಿಲ್ ಪ್ರೊಡ್ಯೂಸರ್ಸ್‌ ಅಸೋಸಿಯೇಷನ್‌ ಹಾಗೂ ಉದ್ಯಮ ವಲಯದ ಪ್ರತಿನಿಧಿಗಳು ಭಾಗವಹಿಸಿದ್ದರು.

ಕೆಲವು ಕಂಪನಿಗಳು ದರವನ್ನು ಕಡಿಮೆ ಮಾಡಿಲ್ಲ. ಆ ಕಂಪನಿಗಳ ಎಂಆರ್‌ಪಿ ಇತರ ಬ್ರ್ಯಾಂಡ್‌ಗಳಿಗಿಂತಲೂ ಹೆಚ್ಚಿದೆ. ಹೀಗಾಗಿ ಆ ಕಂಪನಿಗಳಿಗೂ ದರ ಇಳಿಕೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯು ಸಭೆಯ ಬಳಿಕ ಹೇಳಿದೆ.

ತಯಾರಕರು ಮತ್ತು ಸಂಸ್ಕರಣೆ ಮಾಡುವವರು ಅಡುಗೆ ಎಣ್ಣೆಗಳ ವಿತರಕರಿಗೆ ವಿಧಿಸುವ ದರವನ್ನು ಕೂಡ ತಕ್ಷಣದಿಂದ ಜಾರಿಗೆ ಬರುವಂತೆ ಕಡಿಮೆ ಮಾಡಬೇಕು ಎಂದು ಸಚಿವಾಲಯ ತಿಳಿಸಿದೆ.

ತಯಾರಕರು ಹಾಗೂ ಸಂಸ್ಕರಣೆ ಮಾಡುವವರು ವಿತರಕರಿಗೆ ವಿಧಿಸುವ ಬೆಲೆಯನ್ನು ಕಡಿಮೆ ಮಾಡಿದಾಗಲೆಲ್ಲ ಅದರ ಪ್ರಯೋಜನವು ಗ್ರಾಹಕರಿಗೆ ವರ್ಗಾವಣೆ ಆಗಬೇಕು. ಆ ಬಗ್ಗೆ ಸಚಿವಾಲಯಕ್ಕೆ ನಿರಂತರವಾಗಿ ಮಾಹಿತಿ ನೀಡುತ್ತಿರಬೇಕು ಎಂದೂ ಹೇಳಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ದರ ಇಳಿಕೆ ಆಗುತ್ತಿದ್ದಂತೆಯೇ ತ್ವರಿತವಾಗಿ ಅದು ಬಳಕೆದಾರರಿಗೆ ವರ್ಗಾವಣೆ ಆಗುವಂತೆ ಉದ್ಯಮವು ನೋಡಿಕೊಳ್ಳಬೇಕು. ಬೆಲೆ ಇಳಿಕೆಗೆ ವಿಳಂಬ ಧೋರಣೆ ಅನುಸರಿಸುವಂತಿಲ್ಲ ಎಂದು ಸಚಿವಾಲಯ ಹೇಳಿದೆ.

ಕಚ್ಚಾ ಸಾಮಗ್ರಿಗಳ ದರ ಹೆಚ್ಚಳ ಮತ್ತು ಸಾಗಣೆ ವೆಚ್ಚ ಹೆಚ್ಚಳವನ್ನೂ ಒಳಗೊಂಡು ಜಾಗತಿಕ ವಿದ್ಯಮಾನಗಳಿಂದಾಗಿ 2021–22ರಲ್ಲಿ ಜಾಗತಿಕ ಮತ್ತು ದೇಶಿ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ದರವು ಏರುಮುಖವಾಗಿತ್ತು. ಆದರೆ 2022ರ ಜೂನ್‌ ತಿಂಗಳ ಮಧ್ಯಭಾಗದಿಂದ ಜಾಗತಿಕ ಮಾರುಕಟ್ಟೆಯಲ್ಲಿ ದರ ಇಳಿಮುವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಎರಡು ತಿಂಗಳಿನಲ್ಲಿ ವಿವಿಧ ಅಡುಗೆ ಎಣ್ಣೆಗಳ ದರವು ಪ್ರತಿ ಟನ್‌ಗೆ 150–200 ಡಾಲರ್‌ವರೆಗೆ ಇಳಿಕೆ ಕಂಡಿದೆ.

ಪ್ರಮುಖ ಬ್ರ್ಯಾಂಡ್‌ಗಳು ಸಂಸ್ಕರಿಸಿದ ಸೂರ್ಯಕಾಂತಿ ಮತ್ತು ಸೋಯಾ ಎಣ್ಣೆಗಳ ಮೇಲಿನ ದರವನ್ನು ಪ್ರತಿ ಲೀಟರಿಗೆ ಈಗಾಗಲೇ ₹5–₹15ರವರೆಗೆ ಇಳಿಕೆ ಮಾಡಿವೆ. ಸಾಸಿವೆ ಮತ್ತು ಇತರ ಎಣ್ಣೆಗಳ ದರವನ್ನೂ ಇದೇ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತಗ್ಗಿದ ದರ ದರ ಇಳಿಕೆ ಪ್ರಯೋಜನವನ್ನು ತ್ವರಿತವಾಗಿ ಗ್ರಾಹಕರಿಗೆ ವರ್ಗಾಯಿಸಲು ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT