ಮಂಗಳವಾರ, ಆಗಸ್ಟ್ 20, 2019
21 °C
ಉದ್ದಿಮೆ ದಿಗ್ಗಜರ ಜತೆ ಸಚಿವೆ ನಿರ್ಮಲಾ ಸಭೆ

ಆರ್ಥಿಕ ವೃದ್ಧಿಗೆ ಒತ್ತು; ಸರ್ಕಾರದ ಭರವಸೆ

Published:
Updated:
Prajavani

ನವದೆಹಲಿ (ಪಿಟಿಐ): ಕೈಗಾರಿಕಾ ವಲಯದ ಪುನಶ್ಚೇತನ ಮತ್ತು ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲು ಸದ್ಯದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರವು ಉದ್ಯಮ ಪ್ರಮುಖರಿಗೆ ಭರವಸೆ ನೀಡಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೈಗಾರಿಕಾ ವಲಯ ಮತ್ತು ಒಟ್ಟಾರೆ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗುರುವಾರ ಇಲ್ಲಿ ಕೈಗಾರಿಕೋದ್ಯಮಿಗಳ ಜತೆ ಸಭೆ ನಡೆಸಿ ಚರ್ಚೆ ನಡೆಸಿದರು.

‘ಸರ್ಕಾರ ಶೀಘ್ರದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಈ ಬಗ್ಗೆ  ನಿರ್ಮಲಾ ಸೀತಾರಾಮನ್‌ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಪರಿಹಾರ ಕಂಡುಕೊಳ್ಳಲು ವಿಳಂಬ ಮಾಡುವುದಿಲ್ಲವೆಂದು ಅವರು ಭರವಸೆ ನೀಡಿದ್ದಾರೆ’ ಎಂದು ಜೆಎಸ್‌ಡಬ್ಲ್ಯು ಗ್ರೂಪ್‌ನ ಅಧ್ಯಕ್ಷ ಸಜ್ಜನ್‌ ಜಿಂದಾಲ್‌ ಹೇಳಿದ್ದಾರೆ.

‘ಕೈಗಾರಿಕೆಗಳಿಗೆ ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವುದನ್ನು ಸಭೆಯಲ್ಲಿ ಸಚಿವೆ ಗಮನಕ್ಕೆ ತರಲಾಯಿತು’ ಎಂದು ಪಿರಾಮಲ್‌ ಎಂಟರ್‌ಪ್ರೈಸಸ್‌ ಅಧ್ಯಕ್ಷ ಅಜಯ್‌ ಪಿರಾಮಲ್‌ ಹೇಳಿದ್ದಾರೆ.

‘ಬ್ಯಾಂಕ್‌ಗಳಲ್ಲಿ ನಗದು ಕೊರತೆ ಇಲ್ಲ. ಸಾಲ ವಿತರಣೆಯು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸಂಬಂಧಿಸಿದಂತೆ ನಗದು ಬಿಕ್ಕಟ್ಟು ಇದೆ. ಇದು ವಾಹನ, ಗೃಹ ಸಾಲ ಖರೀದಿ ಮತ್ತು ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಈ ಬಿಕ್ಕಟ್ಟು ಪರಿಹರಿಸಲು ಸರ್ಕಾರ ಕಾರ್ಯೋನ್ಮುಖವಾಗುವುದನ್ನು ಎದುರು ನೋಡಲಾಗುತ್ತಿದೆ’ ಎಂದು ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಕಂಪನಿಗಳು ಹಣ ವೆಚ್ಚ ಮಾಡದಿರುವುದಕ್ಕೆ ಸಂಬಂಧಿಸಿದಂತೆ ಕಂಪನಿ ಕಾಯ್ದೆಯಲ್ಲಿ ಇರುವ ದಂಡನಾ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದೂ ಸರ್ಕಾರ ಸಭೆಯಲ್ಲಿ ಭರವಸೆ ನೀಡಿದೆ. ‘ಸಿಎಸ್‌ಆರ್‌’ ವೆಚ್ಚಕ್ಕೆ ಸಂಬಂಧಿಸಿದ ಅಜಾಗರೂಕತೆ ಕಾರಣಕ್ಕೆ ಜೈಲು ಶಿಕ್ಷೆ ವಿಧಿಸುವುದನ್ನು ಕೈಬಿಡಬೇಕು ಎಂದು ಉದ್ಯಮವು ಸರ್ಕಾರವನ್ನು ಒತ್ತಾಯಿಸಿತ್ತು.

Post Comments (+)