ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉರ್ಜಿತ್‌ ರಾಜೀನಾಮೆ ಕೇಳಿರಲಿಲ್ಲ’

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿಕೆ
Last Updated 18 ಡಿಸೆಂಬರ್ 2018, 19:36 IST
ಅಕ್ಷರ ಗಾತ್ರ

ನವದೆಹಲಿ: ’ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಹುದ್ದೆಗೆ ರಾಜೀನಾಮೆ ನೀಡುವಂತೆ ಉರ್ಜಿತ್‌ ಪಟೇಲ್‌ ಅವರನ್ನು ಕೇಂದ್ರ ಸರ್ಕಾರ ಯಾವತ್ತೂ ಕೇಳಿಲ್ಲ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿರುವುದಾಗಿ ಉರ್ಜಿತ್ ತಿಳಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಧ್ಯೆ ಮೂಡಿರುವ ಭಿನ್ನಾಭಿಪ್ರಾಯವೇ ರಾಜೀನಾಮೆ ನೀಡುವಂತೆ ಮಾಡಿದೆಎನ್ನುವುದು ತಜ್ಞರ ವಿಶ್ಲೇಷಣೆಯಾಗಿದೆ.

ಆಜ್‌ ತಕ್‌ ಸುದ್ದಿವಾಹಿನಿಯ ‘ಅಜೆಂಡಾ ಆಜ್‌ ತಕ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ದುರ್ಬಲ ಬ್ಯಾಂಕ್‌ಗಳ ಮೇಲಿನ ನಿಯಂತ್ರಣ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಎದುರಿಸುತ್ತಿರುವ ನಗದುತನ ಸಮಸ್ಯೆ, ಎಂಎಸ್‌ಎಂಇ ಸಾಲ ನೀಡಿಕೆ ವಿಷಯಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ತನ್ನ ನಿಲುವು ಸಡಿಲಿಸಬೇಕು ಎನ್ನುವ ಕೇಂದ್ರ ಸರ್ಕಾರದ ಬೇಡಿಕೆಗಳನ್ನು ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ.

ಹೆಚ್ಚುವರಿ ನಿಧಿ ಬೇಡ:‘ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‌ಬಿಐನ ಹೆಚ್ಚುವರಿ ನಿಧಿಯಲ್ಲಿ ಬಿಡಿಗಾಸು ಸಹ ಸರ್ಕಾರಕ್ಕೆ ಬೇಡ’ ಎಂದು ಜೇಟ್ಲಿ ಪುನರುಚ್ಚರಿಸಿದ್ದಾರೆ.

‘ಕೇಂದ್ರೀಯ ಬ್ಯಾಂಕ್‌ ಹೊಂದಿರಲೇಬೇಕಾದ ಮೀಸಲು ನಿಧಿಯ ಪ್ರಮಾಣ ಎಷ್ಟಿರಬೇಕು ಎನ್ನುವ ಬಗ್ಗೆ ಆರ್‌ಬಿಐ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆರ್‌ಬಿಐನ ಮೀಸಲು ನಿಧಿಯ ಸೂಕ್ತ ಪ್ರಮಾಣ ನಿರ್ಧರಿಸಲು ನಿರ್ದೇಶಕ ಮಂಡಳಿ ರಚಿಸಲು ಉದ್ದೇಶಿಸಿರುವ ಪರಿಣತರ ಸಮಿತಿ ಕೆಲವೇ ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ’ ಎಂದು ಜೇಟ್ಲಿ ತಿಳಿಸಿದ್ದಾರೆ.

‘ನೋಟು ರದ್ದತಿ: ಮುದ್ರಣಾ ವೆಚ್ಚ ಏರಿಕೆ’
ಕೇಂದ್ರ ಸರ್ಕಾರ ನೋಟು ರದ್ದತಿ ಘೋಷಿಸಿದ ವರ್ಷದಲ್ಲಿ (2016–17) ಮಾತ್ರವೇ ನೋಟುಗಳ ಮುದ್ರಣ ವೆಚ್ಚದಲ್ಲಿ ಏರಿಕೆಯಾಗಿತ್ತು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

2015–16ರಲ್ಲಿ ಮುದ್ರಣ ವೆಚ್ಚ ₹ 3,421 ಕೋಟಿ ಇತ್ತು. ಅದು ನೋಟು ರದ್ದಾದ ವರ್ಷದಲ್ಲಿ ₹ 7,965 ಕೋಟಿಗೆ ಏರಿಕೆಯಾಗಿತ್ತು. ನಂತರ 2017–18ರಲ್ಲಿ ಮುದ್ರಣಾ ವೆಚ್ಚ ₹ 4,912 ಕೋಟಿಗೆ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಹೊಸ ನೋಟುಗಳ ಮುದ್ರಣಕ್ಕೆ ಆಗಿರುವ ವೆಚ್ಚವನ್ನು ಆರ್‌ಬಿಐ ಪ್ರತ್ಯೇಕವಾಗಿ ನಮೂದಿಸಿಲ್ಲ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT