ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಷ್ಟು ಬೇಕು ಆರ್ಥಿಕ ಪುನಶ್ಚೇತನದ ಪ್ಯಾಕೇಜ್: ಸಂಸತ್ತಿನ ಸ್ಥಾಯಿ ಸಮಿತಿ

Last Updated 28 ಜುಲೈ 2021, 11:32 IST
ಅಕ್ಷರ ಗಾತ್ರ

ನವದೆಹಲಿ: ಸಾಂಕ್ರಾಮಿಕದಿಂದಾಗಿ ತೊಂದರೆಗೆ ಒಳಗಾದ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ಆರ್ಥಿಕ ಉತ್ತೇಜನಾ ಕ್ರಮಗಳು ‘ಸಾಕಾಗುವುದಿಲ್ಲ’ ಎಂದು ಸಂಸತ್ತಿನ ಸ್ಥಾಯಿ ಸಮಿತಿಯೊಂದು ಹೇಳಿದೆ.

ಕೈಗಾರಿಕೆಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಯು ಕೋವಿಡ್‌ನಿಂದಾಗಿ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳ ಮೇಲೆ ಆಗಿರುವ ಪರಿಣಾಮದ ಕುರಿತು ವರದಿ ಸಿದ್ಧಪಡಿಸಿದೆ. ಕೋವಿಡ್‌ನ ಮೊದಲ ಅಲೆಯ ನಂತರ ಚೇತರಿಕೆಯ ಹಾದಿಯಲ್ಲಿದ್ದ ಆರ್ಥಿಕತೆಯ ಮೇಲೆ ಎರಡನೆಯ ಅಲೆಯು ತೀವ್ರ ಪರಿಣಾಮ ಬೀರಿದೆ. ಮುಖ್ಯವಾಗಿ ಎಂಎಸ್‌ಎಂಇ ವಲಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಿದೆ ಎಂದು ವರದಿ ಹೇಳಿದೆ.

‘ಕೇಂದ್ರ ಸರ್ಕಾರವು ಪ್ಯಾಕೇಜ್‌ ಮೂಲಕ ಕೈಗೊಂಡ ಕ್ರಮಗಳು ಸಾಲ ಕೊಡುವುದಕ್ಕೆ ಹೆಚ್ಚು ಗಮನ ನೀಡಿದ್ದವು, ಕೆಲವು ದೂರಗಾಮಿ ಕ್ರಮಗಳು ಅದರಲ್ಲಿ ಇದ್ದವು. ಆದರೆ ಅವು ತಕ್ಷಣದ ಪರಿಹಾರವಾಗಿ ವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚಿಸುವ, ನಗದು ಹರಿವು ಸುಧಾರಿಸುವ ಕ್ರಮಗಳಾಗಿರಲಿಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ.

ಅರ್ಥ ವ್ಯವಸ್ಥೆಗೆ ನೆರವಾಗುವ ನಿಟ್ಟಿನಲ್ಲಿ ಬೇಡಿಕೆಯನ್ನು, ಹೂಡಿಕೆಯನ್ನು, ರಫ್ತು ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ವಿಸ್ತೃತ ಆರ್ಥಿಕ ಪ್ಯಾಕೇಜ್‌ಅನ್ನು ಕೇಂದ್ರವು ತಕ್ಷಣವೇ ಘೋಷಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. ಎಂಎಸ್‌ಎಂಇ ವಲಯಕ್ಕೆ ನಗದು ಲಭ್ಯತೆಯನ್ನು ಖಾತರಿಪಡಿಸಬೇಕು ಎಂದು ಹೇಳಿದೆ.

ತುರ್ತು ಸಾಲ ಖಾತರಿ ಯೋಜನೆಯ ಯಶಸ್ಸಿನ ಪ್ರಮಾಣ ಹೆಚ್ಚಾಗಿದ್ದರೂ, ಯೋಜನೆಯ ಒಟ್ಟು ಮೊತ್ತದ ಶೇಕಡ 50ರಷ್ಟನ್ನು ಮಾತ್ರ ಎಂಎಸ್‌ಎಂಇ ವಲಯಕ್ಕೆ ಸಾಲವಾಗಿ ನೀಡಲಾಗಿದೆ ಎಂದು ಸಮಿತಿ ಬೊಟ್ಟುಮಾಡಿದೆ. ಎಂಎಸ್‌ಎಂಇ ವಲಯಕ್ಕೆ ಸಾಲ ನೀಡುವ ವಿಚಾರದಲ್ಲಿ ಬ್ಯಾಂಕ್‌ಗಳು ಹೆಚ್ಚು ಉದಾರವಾಗಿ ನಡೆದುಕೊಳ್ಳಬೇಕು, ಸಾಲ ಮಂಜೂರಾದ ನಂತರದಲ್ಲಿ ವಿಳಂಬ ಮಾಡದೆ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಸಲಹೆ ಮಾಡಿದೆ.

ಮುಖ್ಯಾಂಶಗಳು

* ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಎಂಎಸ್‌ಎಂಇ ಉದ್ದಿಮೆಗಳಿಗೆ ಆಗಬೇಕಿರುವ ಪಾವತಿಗಳು ವಿಳಂಬ ಆಗದಂತೆ ನೋಡಿಕೊಳ್ಳಲು ಕಠಿಣ ನಿಯಮಗಳು ಬೇಕು.‌

* ಎಂಎಸ್‌ಎಂಇ ವಲಯಕ್ಕೆ ಆಗಿರುವ ನೈಜ ನಷ್ಟ ಅರ್ಥ ಮಾಡಿಕೊಳ್ಳಲು, ಈ ವಲಯದ ಪುನಶ್ಚೇತನಕ್ಕೆ ಯೋಜನೆ ಸಿದ್ಧಪಡಿಸಲು ವಿಸ್ತೃತ ಅಧ್ಯಯನದ ಅಗತ್ಯ ಇದೆ.

* ಎಂಎಸ್‌ಎಂಇ ವಲಯಕ್ಕೆ ಸೇರಿದ ಶೇಕಡ 25ರಷ್ಟು ಸಾಲ ಖಾತೆಗಳಿಗೆ ಹಣ ಮರುಪಾವತಿ ಆಗದಿರಬಹುದು. ದುಡಿಯುವ ಬಂಡವಾಳವು ಬ್ಯಾಂಕ್‌ಗಳಿಂದ ಸುಲಭಕ್ಕೆ ಸಿಗುತ್ತಿಲ್ಲವಾದ ಕಾರಣ ಈ ಉದ್ದಿಮೆಗಳು ಕಷ್ಟ ಅನುಭವಿಸುತ್ತಿವೆ ಎಂಬ ವಿಚಾರವನ್ನು ಉದ್ದಿಮೆಗಳ ಸಂಘಟನೆಗಳು ಸಮಿತಿಯ ಗಮನಕ್ಕೆ ತಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT