ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಪೊ ದರ ಏರಿಕೆ: ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

ಠೇವಣಿಗಳ ಮೇಲಿನ ಬಡ್ಡಿ ಹೆಚ್ಚಳದ ನಿರೀಕ್ಷೆ
Last Updated 8 ಜೂನ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ಐದು ವಾರಗಳಲ್ಲಿ ಎರಡನೆಯ ಬಾರಿಗೆ ಆರ್‌ಬಿಐ ರೆಪೊ ದರ ಜಾಸ್ತಿ ಮಾಡಿದೆ. ಇದರ ಪರಿಣಾಮವಾಗಿ ಬ್ಯಾಂಕ್‌ ನಿಶ್ಚಿತ ಠೇವಣಿಗಳ (ಎಫ್‌.ಡಿ.) ಬಡ್ಡಿ ದರ ಜಾಸ್ತಿಯಾಗಬಹುದು ಎಂಬ ನಿರೀಕ್ಷೆ ಮನೆ ಮಾಡಿದೆ.

ಇದರ ಜೊತೆಯಲ್ಲೇ, ಈಗಿನ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರಿಗೆ ಹೆಚ್ಚಿನ ಲಾಭ ಪಡೆಯಲು ಇತರ ಆಯ್ಕೆಗಳೂ ಇವೆ ಎಂದು ವೈಯಕ್ತಿಕ ಹಣಕಾಸು ತಜ್ಞರು ಹೇಳಿದ್ದಾರೆ.

‘ಬಂಡವಾಳ ಮಾರುಕಟ್ಟೆಗಳು ಈಗಿನ ರೆಪೊ ದರ ಹೆಚ್ಚಳವನ್ನು ನಿರೀಕ್ಷಿಸಿದ್ದವು. 10 ವರ್ಷಗಳ ಅವಧಿಯ ಸರ್ಕಾರಿ ಸಾಲಪತ್ರವು ಈಗ ಶೇಕಡ 7.48ರಷ್ಟು ಲಾಭಾಂಶ ಕೊಡುತ್ತಿದೆ. ಸಣ್ಣ ಹೂಡಿಕೆದಾರರಿಗೆ ಉಳಿತಾಯದ ಹಣ ತೊಡಗಿಸಲು ಇದು ಒಂದು ಒಳ್ಳೆಯ ಅವಕಾಶ’ ಎಂದು ಪ್ರೈಮ್‌ ಇನ್ವೆಸ್ಟರ್‌ ಡಾಟ್ ಇನ್ ಸಂಸ್ಥೆಯ ಸಹಸಂಸ್ಥಾ‍ಪಕಿ ವಿದ್ಯಾ ಬಾಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಸರ್ಕಾರದ ಸಾಲಪತ್ರಗಳು ಮಾತ್ರವೇ ಅಲ್ಲದೆ, ರಾಜ್ಯ ಸರ್ಕಾರಗಳು ಹೊರಡಿಸುವ ‘ರಾಜ್ಯ ಅಭಿವೃದ್ಧಿ ಸಾಲಪತ್ರ’ಗಳಲ್ಲಿ ಕೂಡ ಹಣ ತೊಡಗಿಸುವುದು ಈಗ ಆಕರ್ಷಕ ಎಂದು ಅವರು ತಿಳಿಸಿದರು.

ಸರ್ಕಾರಿ ಸಾಲಪತ್ರಗಳಲ್ಲಿ ಸಣ್ಣ ಹೂಡಿಕೆದಾರರು ನೇರವಾಗಿ ಹಣ ತೊಡಗಿಸುವುದು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಆರ್‌ಬಿಐ, ‘ರಿಟೇಲ್ ಡೈರೆಕ್ಟ್’ ಯೋಜನೆಯನ್ನು ಈಗಾಗಲೇ ರೂಪಿಸಿದೆ. ಅದರ ಮೂಲಕ ಸಾಲಪತ್ರಗಳಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ.

ಷೇರು ಮಾರುಕಟ್ಟೆಯಲ್ಲಿ ಇನ್ನೂ ಇರುವ ಅಸ್ಥಿರತೆ, ವಿದೇಶಿ ಬಂಡವಾಳದ ಹೊರಹರಿವು ನಿಂತಿಲ್ಲದಿರುವುದನ್ನು ಪರಿಗಣಿಸಿ, ನೇರವಾಗಿ ಷೇರುಗಳಲ್ಲಿ ಹಣ ತೊಡಗಿಸುವವರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.

ಸಣ್ಣ ಹೂಡಿಕೆದಾರರು ಸಾಲಪತ್ರ ಆಧಾರಿತ ಅಲ್ಟ್ರಾ ಶಾರ್ಟ್ ಡ್ಯುರೇಷನ್ ಮ್ಯೂಚುವಲ್‌ ಫಂಡ್‌ಗಳಲ್ಲಿಯೂ ಹಣ ತೊಡಗಿಸಬಹುದು. ಮೂರರಿಂದ ಐದು ವರ್ಷಗಳ ಗುರಿಯನ್ನು ಇರಿಸಿಕೊಂಡು ಇದರಲ್ಲಿ ಹಣ ತೊಡಗಿಸಬೇಕು ಎಂದು ಹಣಕಾಸು ಶಿಕ್ಷಣ ಸಂಸ್ಥೆ ಫಿನ್‌ಸೇಫ್‌ನ ಸಂಸ್ಥಾಪಕಿ ಮೃಣ್ ಅಗರ್ವಾಲ್ ಮಾಹಿತಿ ನೀಡಿದರು.

‘ಹೆಚ್ಚು ಸಾಲ ಮಾಡಿರುವ ಕಂಪನಿಗಳು ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಹೀಗಾಗಿ, ಈಗಾಗಲೇ ಕನಿಷ್ಠ ಲಾಭದಲ್ಲಿರುವ ಕಂಪನಿಗಳು ಬಡ್ಡಿ ದರ ಏರಿಕೆಯ ಪರಿಣಾಮವಾಗಿ ನಷ್ಟ ಅನುಭವಿಸುವಂತೆ ಆಗಬಹುದು. ರಿಯಲ್ ಎಸ್ಟೇಟ್, ವಾಹನ ತಯಾರಿಕಾ ಕ್ಷೇತ್ರ, ಬಂಡವಾಳ ಸರಕು ಉತ್ಪಾದನಾ ಕ್ಷೇತ್ರದಲ್ಲಿ ಸಾಲ ಪ್ರಮಾಣ ಹೆಚ್ಚು. ಇಲ್ಲಿ ಹೂಡಿಕೆ ಮಾಡುವವರು ಎಚ್ಚರಿಕೆ ವಹಿಸಬೇಕು’ ಎಂದು ಹೂಡಿಕೆ ತಜ್ಞ ಪ್ರಮೋದ ಶ್ರೀಕಾಂತ ದೈತೋಟ ಹೇಳಿದರು.

‘ಹೂಡಿಕೆ ಮಾಡಲು ಮೀಸಲಾದ ಹಣದಲ್ಲಿ ಶೇಕಡ 10ರಷ್ಟನ್ನು ಈಗ ಉಳಿತಾಯ ಖಾತೆಯಲ್ಲಿ ಇರಿಸಿಕೊಳ್ಳಿ. ಷೇರು ಮಾರುಕಟ್ಟೆಯಲ್ಲಿ ಕುಸಿತ ನಿಂತು, ಹೂಡಿಕೆಗೆ ಒಳ್ಳೆಯ ಅವಕಾಶ ಬಂದಾಗ ಈ ಹಣವನ್ನು ಬಳಸಿಕೊಳ್ಳಬಹುದು’ ಎಂದು ಮಣಿಪಾಲ್ ಅಕಾಡೆಮಿ ಆಫ್‌ ಬ್ಯಾಂಕಿಂಗ್‌ನ ಪ್ರೊಫೆಸರ್ ವಸಂತ್ ಹೆಗಡೆ ಹೇಳಿದರು.

ಹೂಡಿಕೆಗೆ ತಜ್ಞರ ಸಲಹೆ
* ಸರ್ಕಾರಿ ಸಾಲಪತ್ರಗಳು ಉತ್ತಮ

* ರಾಜ್ಯ ಸರ್ಕಾರಗಳು ಹೊರಡಿಸುವ ‘ರಾಜ್ಯ ಅಭಿವೃದ್ಧಿ ಸಾಲಪತ್ರ’ (ಎಸ್‌ಡಿಎಲ್‌) ಕೂಡ ಉತ್ತಮ ಆಯ್ಕೆ

* ಸಾಲ ಹೆಚ್ಚಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ; ಇರಲಿ ಎಚ್ಚರಿಕೆ

* ಮಾರುಕಟ್ಟೆಯಲ್ಲಿ ಕುಸಿತ ನಿಂತ ನಂತರ ಹೂಡಿಕೆಗೆ ಸಿಗಲಿದೆ ಅವಕಾಶ

*
ಸಾಲ ಕಡಿಮೆ ಇರುವ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್‌ಗಳು ಈಗ ಉತ್ತಮ ಲಾಭ ತಂದುಕೊಡಬಲ್ಲವು.
-ಪ್ರಮೋದ ಶ್ರೀಕಾಂತ ದೈತೋಟ, ಹೂಡಿಕೆ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT