ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ತ್ರೈಮಾಸಿಕದಲ್ಲಿ ಶೇ 59ರಷ್ಟು ಇಳಿಕೆ: ₹ 90,917 ಕೋಟಿ ಜಿಎಸ್‌ಟಿ ಸಂಗ್ರಹ

Last Updated 1 ಜುಲೈ 2020, 14:07 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿ ಸಂಗ್ರಹವು ಜೂನ್‌ನಲ್ಲಿ ₹ 90,917 ಕೋಟಿಗಳಷ್ಟಾಗಿದ್ದು, ಮೇನಲ್ಲಿ ಸಂಗ್ರಹವಾಗಿದ್ದ ₹ 62,009 ಕೋಟಿಗೆ ಹೋಲಿಸಿದರೆ ಏರಿಕೆಯಾಗಿದೆ.ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಎಸ್‌ಟಿ ಸಂಗ್ರಹವು ಶೇ 59ರಷ್ಟು ಕುಸಿತ ಕಂಡಿದೆ.

ಕೋವಿಡ್‌ ನಿಯಂತ್ರಿಸಲು ದೇಶದಾದ್ಯಂತ ಮಾರ್ಚ್‌ 25ರಿಂದ ಲಾಕ್‌ಡೌನ್‌ ಜಾರಿಗೊಳಿಸಲಾಯಿತು. ಹೀಗಾಗಿ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಉಂಟಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆರ್ಥಿಕತೆಯ ಮೇಲೆ ಕೋವಿಡ್‌ ಬೀರುತ್ತಿರುವ ಪರಿಣಾಮ, ರಿಟರ್ನ್ಸ್‌ ಸಲ್ಲಿಕೆ ಮತ್ತು ತೆರಿಗೆ ಪಾವತಿಯ ಗಡುವು ವಿಸ್ತರಣೆ ಮಾಡಿರುವುದರಿಂದಾಗಿ ಹಣಕಾಸು ವರ್ಷದಲ್ಲಿ ವರಮಾನ ಸಂಗ್ರಹದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿದೆ. ಆದರೆ ಕಳೆದ ಮೂರು ತಿಂಗಳಿನಿಂದ ಜಿಎಸ್‌ಟಿ ಸಂಗ್ರಹವು ಚೇತರಿಕೆ ಕಾಣುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಕರ್ನಾಟಕ, ಪಂಜಾಬ್‌, ಛತ್ತೀಸಗಡ, ಮಧ್ಯಪ್ರದೇಶ, ಬಿಹಾರ, ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ಸಿಕ್ಕಿಂ, ಮಣಿಪುರ, ಮಿಜೋರಾಂ, ತ್ರಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಜೂನ್‌ನಲ್ಲಿ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಕಂಡುಬಂದಿದೆ.

ಕೇಂದ್ರ ಸರ್ಕಾರವು, ಸಮಗ್ರ ಜಿಎಸ್‌ಟಿಯಲ್ಲಿ₹ 13,325 ಕೋಟಿ ಸಿಜಿಎಸ್‌ಟಿ ಮತ್ತು ₹ 11,117 ಕೋಟಿ ಎಸ್‌ಜಿಸ್‌ಟಿ ಇತ್ಯರ್ಥಪಡಿಸಿದೆ.

‘ಜೂನ್‌ ತಿಂಗಳ ಅಂಕಿ–ಅಂಶವು ತೆರಿಗೆ ಸಂಗ್ರಹದಲ್ಲಿ ಚೇತರಿಕೆ ಕಂಡುಬರುತ್ತಿದೆ ಎನ್ನುವುದನ್ನು ಸೂಚಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚೇತರಿಕೆ ಕಾಣಲಿದೆ’ ಎಂದು ಡೆಲಾಯ್ಟ್‌ ಇಂಡಿಯಾದ ಪಾಲುದಾರ ಎಂ.ಎಸ್‌. ಮನು ಹೇಳಿದ್ದಾರೆ.

‘ಕೆಲವು ತಯಾರಿಕಾ ರಾಜ್ಯಗಳ ಜೂನ್‌ ತಿಂಗಳ ಸಂಗ್ರಹ ಹೆಚ್ಚಾಗುತ್ತಿದೆ. ಉಪಭೋಗದ ರಾಜ್ಯಗಳ ವರಮಾನ ಸಂಗ್ರಹ ಇಳಿಕೆಯಾಗಿದೆ’ ಎಂದೂ ತಿಳಿಸಿದ್ದಾರೆ.

ತಿಂಗಳ ವಿವರ (ಕೋಟಿಗಳಲ್ಲಿ)

ಏಪ್ರಿಲ್- ₹ 32,294,ಮೇ ₹ 62,009,ಜೂನ್ ₹ 90,917,

ಯಾವುದರಿಂದ ಎಷ್ಟು ಸಂಗ್ರಹ?

ಸಿಜಿಎಸ್‌ಟಿ ₹18,980,ಎಸ್‌ಜಿಎಸ್‌ಟಿ ₹23,970,ಐಜಿಎಸ್‌ಟಿ ₹40,302,ಸೆಸ್‌ ₹7,665.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT