ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಸಂಗ್ರಹ: ಫೆಬ್ರುವರಿಯಲ್ಲಿ ಶೇ 18ರಷ್ಟು ಏರಿಕೆ

Last Updated 1 ಮಾರ್ಚ್ 2022, 14:51 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಫೆಬ್ರುವರಿಯಲ್ಲಿ ₹ 1.33 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಆದ ವರಮಾನ ಸಂಗ್ರಹಕ್ಕೆ ಹೋಲಿಸಿದರೆ ಶೇಕಡ 18ರಷ್ಟು ಹೆಚ್ಚಳ ಆಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ವ್ಯವಸ್ಥೆಯ ಅಡಿ ಐದನೆಯ ಬಾರಿ ₹ 1.30 ಲಕ್ಷ ಕೋಟಿಗಿಂತ ಹೆಚ್ಚು ವರಮಾನ ಸಂಗ್ರಹ ಆದಂತಾಗಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಸೆಸ್ ಸಂಗ್ರಹವು ₹ 10 ಸಾವಿರ ಕೋಟಿಗಿಂತ ಹೆಚ್ಚಾಗಿದೆ. ಇದು ಆಟೊಮೊಬೈಲ್ ಸೇರಿದಂತೆ ಕೆಲವು ಪ್ರಮುಖ ವಲಯಗಳಲ್ಲಿ ಚೇತರಿಕೆ ಕಂಡುಬಂದಿರುವುದನ್ನು ಸೂಚಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ ₹ 1.40 ಲಕ್ಷ ಕೋಟಿ ತಲುಪಿತ್ತು.

ಫೆಬ್ರುವರಿಯಲ್ಲಿ ಸಂಗ್ರಹ ಆಗಿರುವ ಜಿಎಸ್‌ಟಿ ವರಮಾನದಲ್ಲಿ ಕೇಂದ್ರ ಜಿಎಸ್‌ಟಿ ಪಾಲು ₹ 24,435 ಕೋಟಿ, ರಾಜ್ಯ ಜಿಎಸ್‌ಟಿ ಪಾಲು ₹ 30,779 ಕೋಟಿ ಹಾಗೂ ಏಕೀಕೃತ ಜಿಎಸ್‌ಟಿ ಪಾಲು ₹ 67,471 ಕೋಟಿ (ಇದರಲ್ಲಿ ಆಮದು ವಸ್ತುಗಳ ಮೇಲಿನ ತೆರಿಗೆಯೂ ಸೇರಿದೆ).

ಫೆಬ್ರುವರಿಯಲ್ಲಿ 28 ದಿನಗಳು ಮಾತ್ರ ಇರುವ ಕಾರಣ ವರಮಾನ ಸಂಗ್ರಹವು ಜನವರಿಗೆ ಹೋಲಿಸಿದರೆ ಸಹಜವಾಗಿಯೇ ತುಸು ಕಡಿಮೆ ಇರುತ್ತದೆ ಎಂದು ಸಚಿವಾಲಯ ಹೇಳಿದೆ.

ಫೆಬ್ರುವರಿಯಲ್ಲಿ ಆಗಿರುವ ವರಮಾನ ಸಂಗ್ರಹವನ್ನು ಓಮೈಕ್ರಾನ್‌ ತಡೆಯಲು ವಿವಿಧ ರಾಜ್ಯಗಳು ಹೇರಿದ್ದ ಭಾಗಶಃ ಲಾಕ್‌ಡೌನ್‌, ವಾರಾಂತ್ಯದ ಕರ್ಫ್ಯೂ, ರಾತ್ರಿ ಕರ್ಫ್ಯೂ ಮತ್ತು ಇತರ ಹಲವು ನಿರ್ಬಂಧಗಳ ಹಿನ್ನೆಲೆಯಲ್ಲಿ ನೋಡಬೇಕು ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT