ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದ ಜತೆ ಸಂಘರ್ಷಕ್ಕೆ ಜಿಎಸ್‌ಟಿ ‘ಸರಕು’

ಕರ್ನಾಟಕಕ್ಕೆ ವಾರ್ಷಿಕ ₹24 ಸಾವಿರ ಕೋಟಿ ವರಮಾನ ನಷ್ಟ
Published : 12 ಸೆಪ್ಟೆಂಬರ್ 2024, 23:03 IST
Last Updated : 12 ಸೆಪ್ಟೆಂಬರ್ 2024, 23:03 IST
ಫಾಲೋ ಮಾಡಿ
Comments

ನವದೆಹಲಿ: ‘ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದಾಗಿ ಅತಿ ಹೆಚ್ಚು ನಷ್ಟ ಅನುಭವಿಸಿದ್ದು ಕರ್ನಾಟಕ. ರಾಜ್ಯಕ್ಕೆ ವಾರ್ಷಿಕ ₹24 ಸಾವಿರ ಕೋಟಿ ನಷ್ಟ ಉಂಟಾಗುತ್ತಿದೆ. ಜಿಎಸ್‌ಟಿ ವ್ಯವಸ್ಥೆಯ ಕಾರಣದಿಂದ ಆಗುವ ವರಮಾನ ನಷ್ಟಕ್ಕೆ ಪರಿಹಾರ ನೀಡುವ ವ್ಯವಸ್ಥೆಯನ್ನು ನಿಲ್ಲಿಸಿದ್ದರಿಂದ ರಾಜ್ಯವು ಎರಡು ವರ್ಷಗಳಲ್ಲಿ ₹45,142 ಕೋಟಿ ಕಳೆದುಕೊಂಡಿದೆ’ ಎಂದು ಕರ್ನಾಟಕ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಜಿಎಸ್‌ಟಿ ಪಾಲು ಹಂಚಿಕೆ ಹಾಗೂ ಪರಿಹಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದೊಂದಿಗೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಅಣಿಯಾಗಿದೆ. 

ರಾಜ್ಯಗಳಿಗೆ ತೆರಿಗೆ ಪಾಲು ಮತ್ತು ಇತರೆ ಸಹಾಯಾನುದಾನಗಳ ಪ್ರಮಾಣ ನಿರ್ಧರಿಸುವ ಸಂಬಂಧ ರಾಜ್ಯಗಳ ಜತೆಗೆ ಸಮಾಲೋಚನಾ ಸಭೆ ಆರಂಭಿಸಿರುವ 16ನೇ ಹಣಕಾಸು ಆಯೋಗವು, ರಾಜ್ಯಕ್ಕೆ ಇತ್ತೀಚೆಗೆ ಭೇಟಿ ನೀಡಿತ್ತು.

‘ಜಿಎಸ್‌ಟಿಯಿಂದಾಗಿ ರಾಜ್ಯದ ವರಮಾನಕ್ಕೆ ಭಾರಿ ಹೊಡೆತ ಬಿದ್ದಿದೆ. ಈ ಘೋರ ಅನ್ಯಾಯವನ್ನು ಸರಿಪಡಿಸಬೇಕು. ಈ ವ್ಯವಸ್ಥೆಯು ರಾಜ್ಯದ ವಿತ್ತೀಯ ಸಾಮರ್ಥ್ಯದ ಮೇಲೆ ರಚನಾತ್ಮಕ ಪರಿಣಾಮ ಬೀರುವಂತಾಗಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಆಯೋಗ ಶಿಫಾರಸುಗಳನ್ನು ಮಾಡಬೇಕು’ ಎಂದು ರಾಜ್ಯ ಸರ್ಕಾರ ಗಮನ ಸೆಳೆದಿತ್ತು.

ಆಗ ಆಯೋಗವು, ‘ಜಿಎಸ್‌ಟಿ ಸಂಬಂಧಿಸಿದ ವಿಷಯವನ್ನು ಜಿಎಸ್‌ಟಿ ಮಂಡಳಿಯಲ್ಲೇ ಇತ್ಯರ್ಥ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿತ್ತು. ತೆರಿಗೆಯೇತರ ಆದಾಯವನ್ನು ರಾಜ್ಯಗಳ ತೆರಿಗೆ ಬಾಬ್ತಿನ ವ್ಯಾಪ್ತಿಗೆ ತರುವ ವಿಚಾರ ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಆಯೋಗ ಸ್ಪಷ್ಟಪಡಿಸಿತ್ತು.

ಇದರ ಬೆನ್ನಲ್ಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಜಿಎಸ್‌ಟಿ ಮಂಡಳಿ ಸಭೆಯಲ್ಲೂ ಪ್ರಬಲವಾಗಿ ವಾದ ಮಂಡಿಸಿದ್ದಾರೆ. 

ರಾಜ್ಯದ ವಾದವೇನು? 

* ಜಿಎಸ್‌ಟಿ ಜಾರಿಗೆ ಬರುವ ಮೊದಲು ಐದು ವರ್ಷಗಳಲ್ಲಿ ರಾಜ್ಯದ ಆದಾಯವು ಸರಾಸರಿ ಶೇ 13.7ರಷ್ಟು ಬೆಳವಣಿಗೆ ಹೊಂದಿತ್ತು. ಜಿಎಸ್‌ಟಿಯಲ್ಲಿ ಎಲ್ಲ ರಾಜ್ಯಗಳಿಗೆ ಶೇ 14ರಷ್ಟು ಪಾಲು ನೀಡುವುದು ಹಾಗೂ ಕೊರತೆಗೆ ಪರಿಹಾರ ನೀಡುವುದು ಕೆಲವು ರಾಜ್ಯಗಳಿಗೆ ಬಹಳ ಉದಾರವಾಗಿರಬಹುದು. ಆದರೆ, ರಾಜ್ಯದ ವಿಚಾರದಲ್ಲಿ ಇದು ಉದಾರ ಕೊಡುಗೆ ಅಲ್ಲ. ರಾಜ್ಯದ ಆದಾಯದ ಬೆಳವಣಿಗೆಯನ್ನು ಶೇ 14ರಷ್ಟು ಎಂದು ಭಾವಿಸಿದರೆ, 2023-24ರಲ್ಲಿ ರಾಜ್ಯಕ್ಕೆ ₹95,211 ಕೋಟಿ ಬರಬೇಕಿತ್ತು. ಸಿಕ್ಕಿದ್ದು ₹71,261 ಕೋಟಿ ಮಾತ್ರ. ಇದರಿಂದ ರಾಜ್ಯಕ್ಕೆ ₹23,950 ಕೋಟಿ ನಷ್ಟವಾಗಿದೆ. ಇದು ರಾಜ್ಯದ ಲೋಪದಿಂದ ಆಗಿದ್ದಲ್ಲ. ರಾಜ್ಯದ ಆರ್ಥಿಕ ಬೆಳವಣಿಗೆ ಹಾಗೂ ತೆರಿಗೆ ಉತ್ತಮ ಆಡಳಿತದ ಹೊರತಾಗಿಯೂ ಭಾರಿ ಅನ್ಯಾಯವಾಗಿದೆ. 

* ಕರ್ನಾಟಕದ ಆರ್ಥಿಕ ಬೆಳವಣಿಗೆ ದರ ಹಾಗೂ ತೆರಿಗೆ ಸಂಗ್ರಹ ಬೆಳವಣಿಗೆ ದರವು ರಾಷ್ಟ್ರೀಯ ಬೆಳವಣಿಗೆ ದರಕ್ಕಿಂತ ಜಾಸ್ತಿ ಇದೆ. ರಾಷ್ಟ್ರೀಯ ಜಿಎಸ್‌ಟಿ ಪೂಲ್‌ಗೆ ನಮ್ಮ ಕೊಡುಗೆ ಗಣನೀಯವಾಗಿ ಹೆಚ್ಚುತ್ತಿದೆ. ಆದರೆ, ಜಿಎಸ್‌ಟಿಯಿಂದಾಗಿ ನಾವು ಸಂಗ್ರಹಿಸುವ ತೆರಿಗೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

* 2021–22ರಲ್ಲಿ ರಾಜ್ಯದ ಜಿಎಸ್‌ಡಿಪಿ ಬೆಳವಣಿಗೆ ದರ ಶೇ 9.8ರಷ್ಟು ಆಗಿತ್ತು. ಆಗ ರಾಷ್ಟ್ರೀಯ ಜಿಡಿಪಿ ಬೆಳವಣಿಗೆ ದರ ಶೇ 9.1ರಷ್ಟು ಇತ್ತು. ರಾಜ್ಯದ ಜಿಎಸ್‌ಟಿ ಸಂಗ್ರಹವು ಶೇ 27ರಷ್ಟು ಜಾಸ್ತಿ ಆಗಿದೆ. 2022–23ರಲ್ಲಿ ರಾಜ್ಯದ ಜಿಎಸ್‌ಡಿಪಿ ಶೇ 8.1ರಷ್ಟು ಬೆಳವಣಿಗೆ ದಾಖಲಿಸಿತು. ಅಖಿಲ ಭಾರತ ಜಿಡಿಪಿ ಶೇ 7.2ರಷ್ಟು ಇತ್ತು. ಅಖಿಲ ಭಾರತ ಜಿಎಸ್‌ಟಿ ಸಂಗ್ರಹದ ಶೇ 21ಕ್ಕೆ ಹೋಲಿಸಿದರೆ ರಾಜ್ಯದ ಸಂಗ್ರಹ ಶೇ 28ರಷ್ಟು ಹೆಚ್ಚಳವಾಗಿದೆ. 2023–24ರಲ್ಲಿ ರಾಜ್ಯದ ಜಿಎಸ್‌ಡಿಪಿ ಬೆಳವಣಿಗೆ ಶೇ 6.6. ಅಖಿಲ ಭಾರತ ಜಿಡಿಪಿ ಬೆಳವಣಿಗೆ ಶೇ 7.3. ರಾಜ್ಯದ ಜಿಎಸ್‌ಟಿ ಸಂಗ್ರಹ ಶೇ 18.3ರಷ್ಟು ಜಾಸ್ತಿಯಾಗಿದ್ದರೆ, ಅಖಿಲ ಭಾರತ ಮಟ್ಟದಲ್ಲಿ ಶೇ 15ರಷ್ಟು ಮಾತ್ರ ಹೆಚ್ಚಳ ಆಗಿದೆ. ಕರ್ನಾಟಕದ ಆರ್ಥಿಕತೆ ಮತ್ತು ಜಿಎಸ್‌ಟಿ ಕಾರ್ಯಕ್ಷಮತೆಯು ಈ ಮೂರು ವರ್ಷಗಳಲ್ಲಿ ರಾಷ್ಟ್ರೀಯ ಕಾರ್ಯಕ್ಷಮತೆಗಿಂತ ಹೆಚ್ಚಾಗಿದೆ ಎಂಬುದು ಇಲ್ಲಿ ಸ್ಪಷ್ಟ.

* ಆರ್ಥಿಕತೆ ಹಾಗೂ ಜಿಎಸ್‌ಟಿ ಸಂಗ್ರಹದಲ್ಲಿ ರಾಷ್ಟ್ರೀಯ ಬೆಳವಣಿಗೆಗಿಂತ ಹೆಚ್ಚಿರುವ ಕಾರಣ, ಒಟ್ಟು ರಾಷ್ಟ್ರೀಯ ಸಂಗ್ರಹಕ್ಕೆ ರಾಜ್ಯದ ಕೊಡುಗೆಯು 2021–22ರಲ್ಲಿ ಶೇ 8.74 ಇದ್ದಿದ್ದು, 22–23ಕ್ಕೆ ಶೇ 9.27ಕ್ಕೆ ಏರಿಕೆಯಾಗಿದೆ. 2023–24ರಲ್ಲಿ ಶೇ 9.54ಕ್ಕೆ ಹಿಗ್ಗಿದೆ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಜತೆಗೆ, ನಮ್ಮ ಕೊಡುಗೆಯು ಇತರರಿಗಿಂತ ಹೆಚ್ಚುತ್ತಿದೆ. ಆದರೆ, ಐಜಿಎಸ್‌ಟಿ ಸೆಟ್ಲ್‌ಮೆಂಟ್‌ ಮೂಲಕ ರಾಜ್ಯಕ್ಕೆ ಸಿಗುತ್ತಿರುವ ‍ಪಾಲು ಬಹಳ ಕಡಿಮೆ. ಇನ್ನೊಂದೆಡೆ, ರಾಷ್ಟ್ರೀಯ ಜಿಎಸ್‌ಟಿ ಸಂಗ್ರಹಕ್ಕೆ ರಾಜ್ಯವು ತನ್ನ ಜಿಎಸ್‌ಡಿಪಿಯ ಹೆಚ್ಚು ಹೆಚ್ಚು ಪಾಲು ನೀಡುತ್ತಿದೆ. ಇದು ಕಳವಳಕಾರಿ ಸಂಗತಿಯೂ ಹೌದು. 

ಜಿಎಸ್‌ಟಿಗೆ ಹೆಚ್ಚಿನ ಪಾಲು ನೀಡುತ್ತಿರುವ ರಾಜ್ಯಕ್ಕೆ ಸಿಗುತ್ತಿರುವುದು ಅತ್ಯಲ್ಪ. ಇದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹಣಕಾಸು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ.
–ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT