ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪತ್ತು ತೆರಿಗೆ: ಸಮಿತಿ ರಚನೆ

ಜಿಎಸ್‌ಟಿ ಮಂಡಳಿಯಲ್ಲಿ ಚರ್ಚೆ l ತಂಡದಲ್ಲಿ 7 ಮಂದಿ ಸಚಿವರು
Last Updated 28 ಸೆಪ್ಟೆಂಬರ್ 2018, 19:47 IST
ಅಕ್ಷರ ಗಾತ್ರ

ನವದೆಹಲಿ: ನೈಸರ್ಗಿಕ ಪ್ರಕೋಪಗಳಿಗೆ ತುತ್ತಾಗುವ ರಾಜ್ಯಗಳಿಗೆ ಪರಿಹಾರ ಒದಗಿಸಲು ಹೊಸ ವಿಪತ್ತು ತೆರಿಗೆ ವಿಧಿಸುವುದನ್ನು ಪರಿಶೀಲಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ಏಳು ಸಚಿವರ ಸಮಿತಿ ರಚಿಸಿದೆ.

ಭಾರಿ ಮಳೆ, ಪ್ರವಾಹ, ಭೂಕಂಪ, ಚಂಡಮಾರುತದಂತಹ ನೈಸರ್ಗಿಕ ಪ್ರಕೋಪಗಳಿಗೆ ಸಿಲುಕಿ ಅಗಾಧ ಪ್ರಮಾಣದ ಆಸ್ತಿಪಾಸ್ತಿ ನಷ್ಟಕ್ಕೆ ಗುರಿಯಾಗುವ ರಾಜ್ಯಗಳ ನೆರವಿಗೆ ಸಂಪನ್ಮೂಲ ಸಂಗ್ರಹಿಸಲು ‘ವಿಪತ್ತು ತೆರಿಗೆ’ ವಿಧಿಸುವ ಸಾಧ್ಯತೆಯನ್ನು ಈ ಸಮಿತಿ ಪರಿಶೀಲಿಸಲಿದೆ.

ಪ್ರವಾಹಕ್ಕೆ ಗುರಿಯಾಗಿ ಅಪಾರ ನಷ್ಟ ಕಂಡಿರುವ ಕೇರಳವು, ನಷ್ಟ ಸರಿದೂಗಿಸಲು ಮತ್ತು ಪುನರ್‌ವಸತಿ ಯೋಜನೆಗಳನ್ನು ಜಾರಿಗೆ ತರಲು ರಾಜ್ಯದ ಒಳಗೆ ಸರಕು ಮತ್ತು ಸೇವೆಗಳ ಮೇಲೆ ಸೀಮಿತ ಅವಧಿಗೆ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ವಿಧಿಸಲು ಅನುಮತಿ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿತ್ತು.

ಈ ಬೇಡಿಕೆಯನ್ನು ಚರ್ಚೆಗೆ ಪರಿಗಣಿಸಿದ ಮಂಡಳಿಯು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈಶಾನ್ಯ ಮತ್ತು ಕರಾವಳಿ ಪ್ರದೇಶದ ರಾಜ್ಯಗಳ ಹಣಕಾಸು ಸಚಿವರು ಈ ಸಮಿತಿಯಲ್ಲಿ ಇರಲಿದ್ದಾರೆ.

ಸಮಿತಿಯು, ಮಂಡಳಿಯು ಮುಂದಿಟ್ಟಿರುವ ಐದು ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ. ನೈಸರ್ಗಿಕ ಪ್ರಕೋಪಕ್ಕೆ ತುತ್ತಾದ ರಾಜ್ಯದಲ್ಲಿ ಮಾತ್ರ ಇಂತಹ ತೆರಿಗೆ ವಿಧಿಸಬೇಕೆ ಅಥವಾ ದೇಶದಾದ್ಯಂತ ಜಾರಿಗೆ ತರಬೇಕೆ. ಇಂತಹ ತೆರಿಗೆಯನ್ನು ಕೇವಲ ವಿಲಾಸಿ ಅಥವಾ ಆರೋಗ್ಯಕ್ಕೆ ಹಾನಿಕರ ಎಂದು ಪರಿಭಾವಿಸುವ ಉತ್ಪನ್ನಗಳಿಗೆ ಮಾತ್ರ ಅನ್ವಯಿಸಬೇಕೆ ಎಂಬುದನ್ನು ಪರಿಶೀಲಿಸಲಿದೆ. ಇಂತಹ ತೆರಿಗೆ ವಿಧಿಸಲು ಜಿಎಸ್‌ಟಿ ಕಾನೂನಿನಲ್ಲಿ ಅವಕಾಶ ಇರುವುದನ್ನೂ ಪರಿಗಣನೆಗೆ ತೆಗೆದುಕೊಳ್ಳಲಿದೆ.

‘ಏಳು ಮಂದಿ ಸದಸ್ಯರ ಸಮಿತಿಯು ಕೆಲವೇ ವಾರಗಳಲ್ಲಿ ತನ್ನ ಶಿಫಾರಸುಗಳನ್ನು ನೀಡಲಿದೆ. ಜಿಎಸ್‌ಟಿ ಮಂಡಳಿಯು ಅನುಮತಿ ನೀಡಿದರೆ ವಿಶೇಷ ತೆರಿಗೆ ವಿಧಿಸಲು ಜಿಎಸ್‌ಟಿ ಕಾಯ್ದೆಯಲ್ಲಿ ಅವಕಾಶ ಇದೆ’ ಎಂದು ಜೇಟ್ಲಿ ಹೇಳಿದ್ದಾರೆ.

‘ನೈಸರ್ಗಿಕ ಪ್ರಕೋಪಗಳಿಗೆ ನಲುಗಿರುವ ರಾಜ್ಯಗಳಿಗೆ ನೆರವಾಗಲು ತಾತ್ಪೂರ್ತಿಕ ನೆಲೆಯಲ್ಲಿ ಮಂಡಳಿಯು ವಿಶೇಷ ತೆರಿಗೆ ವಿಧಿಸಬಹುದಾಗಿದೆ. ಸಭೆಯಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಲಾಗಿಲ್ಲ. ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 1ರಷ್ಟು ತೆರಿಗೆ ವಿಧಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ’ ಎಂದು ಕೇರಳದ ಹಣಕಾಸು ಸಚಿವ ಥಾಮಸ್‌ ಇಸಾಕ್‌ ಹೇಳಿದ್ದಾರೆ.

ವರಮಾನ ಕೊರತೆ
ವರಮಾನ ಕೊರತೆ ‘ಜಿಎಸ್‌ಟಿ ಜಾರಿಯ ಮೊದಲ ವರ್ಷದಲ್ಲಿ ರಾಜ್ಯಗಳಿಗೆ ಶೇ 16ರಷ್ಟು ವರಮಾನ ಕೊರತೆ ಎದುರಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಕೊರತೆಯುಶೇ 13ಕ್ಕೆ ಇಳಿದಿದೆ. ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್‌, ಸಿಕ್ಕಿಂ ಮತ್ತು ಆಂಧ್ರಪ್ರದೇಶ ರಾಜ್ಯಗಳು ಮಾತ್ರ ಹೆಚ್ಚಿನ ವರಮಾನ ಪಡೆದಿದೆ.

ಕರ್ನಾಟಕದ ನಷ್ಟ: ಗರಿಷ್ಠ ಪ್ರಮಾಣದ ವರಮಾನ ನಷ್ಟಕ್ಕೆ ಗುರಿಯಾದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ(ಶೇ 20) ಸೇರಿದೆ. 2017–18ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ₹ 41,147 ಕೋಟಿ ನೆರವು ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT