ನವದೆಹಲಿ: ಭಾರತದಲ್ಲಿ ಕಾರ್ಯಾಚರಣೆ ನಡೆಸುವ ಹತ್ತು ಅಂತರರಾಷ್ಟ್ರೀಯ ವಿಮಾನಯಾನ ಕಂಪನಿಗಳಿಗೆ ₹10 ಸಾವಿರ ಕೋಟಿ ಜಿಎಸ್‌ಟಿ ಬಾಕಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯವು (ಡಿಜಿಜಿಐ) ಷೋಕಾಸ್ ನೋಟಿಸ್ ನೀಡಿದೆ.
‘ಇಲಾಖೆ ನೀಡಿರುವ ಈ ನೋಟಿಸ್ ಭಾರತದ ವಿಮಾನಯಾನ ವಲಯದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ಈ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರವು ಕ್ರಮವಹಿಸಬೇಕಿದೆ’ ಎಂದು ಅಂತರ ರಾಷ್ಟ್ರೀಯ ವಾಯು ಸಾರಿಗೆ ಸಂಘ (ಟಿಎಟಿಎ) ಒತ್ತಾಯಿಸಿದೆ.
ಭಾರತೀಯ ವಿಮಾನಯಾನ ಕಂಪನಿಗಳು ಸೇರಿದಂತೆ ಜಗತ್ತಿನ 330ಕ್ಕೂ ಹೆಚ್ಚು ಕಂಪನಿಗಳು ಈ ಸಂಘದಡಿ ಕಾರ್ಯ ನಿರ್ವಹಿಸುತ್ತವೆ.
‘ವಿದೇಶದಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪನಿಗಳು ಭಾರತದಲ್ಲಿ ತನ್ನ ಶಾಖೆಗಳನ್ನು ತೆರೆದಿವೆ. ಈ ಶಾಖೆಗಳು ಕೇಂದ್ರ ಕಚೇರಿಯಿಂದ ಪಡೆದ ಆಮದು ಸೇವೆಗೆ ಜಿಎಸ್‌ಟಿ ಅನ್ವಯವಾಗಲಿದೆ’ ಎಂದು ಡಿಜಿಜಿಐ ಹೇಳಿದೆ.