ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್ಸಿಲ್‌ ಶಾರ್ಪ್‌ನರ್‌, ಜೋನಿ ಬೆಲ್ಲ ಮೇಲಿನ ಜಿಎಸ್‌ಟಿ ಇಳಿಕೆ

ಮಂಡಳಿ ನಿರ್ಧಾರ, ಜನತೆಗೆ ಸ್ವಲ್ಪ ನಿರಾಳ
Last Updated 18 ಫೆಬ್ರುವರಿ 2023, 20:22 IST
ಅಕ್ಷರ ಗಾತ್ರ

ನವದೆಹಲಿ : ದ್ರವ ರೂಪದ ಬೆಲ್ಲದ (ಜೋನಿ ಬೆಲ್ಲ) ಮತ್ತು ಪೆನ್ಸಿಲ್ ಶಾರ್ಪ್‌ನರ್‌ ಮೇಲಿನ ತೆರಿಗೆ ಪ್ರಮಾಣ ಕಡಿಮೆ ಮಾಡಲು ಜಿಎಸ್‌ಟಿ ಮಂಡಳಿಯು ಶನಿವಾರ ಒಪ್ಪಿಗೆ ನೀಡಿದೆ.

ಜೋನಿ ಬೆಲ್ಲದ ಮೇಲೆ ಸದ್ಯ ಶೇ 18ರಷ್ಟು ತೆರಿಗೆ ಇದ್ದು, ಪ್ಯಾಕ್‌ ಮಾಡಿರುವ ಮತ್ತು ಲೇಬಲ್‌ ಇರುವ ಜೋನಿ ಬೆಲ್ಲಕ್ಕೆ ಶೇ 5ರಷ್ಟು ಮತ್ತು ಪ್ಯಾಕ್‌ ಮಾಡದೇ ಇರುವ ಜೋನಿ ಬೆಲ್ಲಕ್ಕೆ ಶೂನ್ಯ ತೆರಿಗೆ ವಿಧಿಸಲು ಮಂಡಳಿಯು ನಿರ್ಧರಿಸಿದೆ. ಪೆನ್ಸಿಲ್‌ ಶಾರ್ಪ್‌ನರ್‌ ಮೇಲಿನ ಜಿಎಸ್‌ಟಿಯನ್ನು ಶೇ 18 ರಿಂದ ಶೇ 12ಕ್ಕೆ ಇಳಿಸಲು ನಿರ್ಧರಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ನಡೆದ ಮಂಡಳಿಯ ಸಭೆಯುಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಯಲ್ಲಿ (ಜಿಎಸ್‌ಟಿಆರ್‌–9) ವಿಳಂಬ ಆಗುವುದಕ್ಕೆ ವಿಧಿಸುವ ಶುಲ್ಕವನ್ನು ಕಡಿಮೆ ಮಾಡಲು ಮಂಡಳಿಯು ಶಿಫಾರಸು ಮಾಡಿದೆ. ಹಣಕಾಸು ವರ್ಷವೊಂದರಲ್ಲಿ ₹20 ಕೋಟಿ ಮೊತ್ತದ ವರೆಗಿನ ವಹಿವಾಟು ನಡೆಸುವವರಿಗೆ 2022-23ರಿಂದ ಇದು ಅನ್ವಯಿಸಲಿದೆ.

ಜಿಎಸ್‌ಟಿಯಲ್ಲಿ ನೋಂದಣಿ ಮಾಡಿಕೊಂಡಿರುವವರು ಹಣಕಾಸು ವರ್ಷದಲ್ಲಿ ₹5 ಕೋಟಿಯವರೆಗಿನ ವಹಿವಾಟು ನಡೆಸುತ್ತಿದ್ದರೆ ತಡವಾಗಿ ವಾರ್ಷಿಕ ರಿಟರ್ನ್ಸ್‌ ಸಲ್ಲಿಸುವುದಕ್ಕೆ ಒಂದು ದಿನಕ್ಕೆ ₹50 ಶುಲ್ಕ ಕಟ್ಟಬೇಕಾಗುತ್ತದೆ. ₹5 ಕೋಟಿಗಿಂತೂ ಹೆಚ್ಚಿನ ಮೊತ್ತದ ವಹಿವಾಟು ನಡೆಸುತ್ತಿದ್ದರೆ ಒಂದು ದಿನದ ಶುಲ್ಕವು ₹20 ಹಾಗೂ ₹20 ಕೋಟಿ ಮೊತ್ತದವರೆಗಿನ ವಹಿವಾಟು ನಡೆಸುವವರಿಗೆ ದಿನಕ್ಕೆ ₹100 ಶುಲ್ಕ ನಿಗದಿಪಡಿಸಲು ಶಿಫಾರಸು ಮಾಡಲಾಗಿದೆ.

ಸದ್ಯ, ವಾರ್ಷಿಕ ರಿಟರ್ನ್ಸ್‌ ತಡವಾಗಿ ಸಲ್ಲಿಸುವುದಕ್ಕೆ ಪ್ರತಿ ದಿನಕ್ಕೆ ₹200 ಶುಲ್ಕ ವಿಧಿಸಲಾಗುತ್ತಿದೆ (ಗರಿಷ್ಠ ಎಂದರೆ, ವಾರ್ಷಿಕ ವಹಿವಾಟಿನ ಶೇ 0.5ರಷ್ಟು ತೆರಿಗೆ ವಿಧಿಸಬಹುದಾಗಿದೆ).

ಜಿಎಸ್‌ಟಿಆರ್‌–4, ಜಿಎಸ್‌ಟಿಆರ್‌–9 ಮತ್ತು ಜಿಎಸ್‌ಟಿಆರ್‌–10 ರಿಟರ್ನ್ಸ್‌ಗಳನ್ನು ಸಲ್ಲಿಸದೇ ಇರುವವರಿಗೆ ಕರಸಮಾಧಾನ ಯೋಜನೆಯಡಿ ವಿಳಂಬ ಶುಲ್ಕ ಕಡಿಮೆ ಮಾಡಲು ಸಹ ಮಂಡಳಿ ಶಿಫಾರಸು ಮಾಡಿದೆ.

ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿ ರಚಿಸುವ ಕುರಿತು ಸಚಿವರ ತಂಡವು ನೀಡಿರುವ ವರದಿಯನ್ನು ಕೆಲವು ಮಾರ್ಪಾಡುಗಳೊಂದಿಗೆ ಒಪ್ಪಿಕೊಳ್ಳಲಾಗಿದೆ. ಈ ಸಂಬಂಧ ಜಿಎಸ್‌ಟಿ ಕಾಯ್ದೆಯಲ್ಲಿ ಮಾಡುವ ಅಂತಿಮ ಕರಡು ತಿದ್ದುಪಡಿಯನ್ನು ರಾಜ್ಯಗಳ ಹಣಕಾಸು ಸಚಿವರ ಪ್ರತಿಕ್ರಿಯೆಗೆ ನೀಡಲಾಗುವುದು ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ.

ಪಾನ್ ಮಸಾಲಾ, ಗುಟ್ಕಾ ಮತ್ತು ಅಗಿಯುವ ತಂಬಾಕು ಉತ್ಪನ್ನಗಳಿಂದ ತೆರಿಗೆ ಸೋರಿಕೆ ಆಗುವುದನ್ನು ತಡೆಯಲು ಮತ್ತು ವರಮಾನ ಸಂಗ್ರಹ ಹೆಚ್ಚಿಸುವ ಕುರಿತು ಸಚಿವರ ತಂಡವು ನೀಡಿರುವ ಶಿಫಾರಸುಗಳನ್ನು ಮಂಡಳಿಯು ಒಪ್ಪಿಕೊಂಡಿದೆ.

ಇದೊಂದು ಸಕಾರಾತ್ಮಕ ಬೆಳವಣಿಗೆ ಆಗಿದೆ. ಜಿಎಸ್‌ಟಿ ನ್ಯಾಯಮಂಡಳಿಗಾಗಿ ದೀರ್ಘಾವಧಿಯ ಕಾಯುವಿಕೆಯು ಶೀಘ್ರವೇ ಕೊನೆಯಾಗುವ ಭರವಸೆಯನ್ನು ಉದ್ಯಮ ವಲಯ ಹೊಂದಿದೆ ಎಂದು ಕೆಪಿಎಂಜಿ ಸಂಸ್ಥೆಯ ತೆರಿಗೆ ಪಾಲುದಾರ ಅಭಿಷೇಕ್‌ ಜೈನ್‌ ಹೇಳಿದ್ದಾರೆ.

ಜಿಎಸ್‌ಟಿ ಪರಿಹಾರ ಬಾಕಿ ಪಾವತಿಗೆ ನಿರ್ಧಾರ

ಜಿಎಸ್‌ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಬಾಕಿ ಉಳಿಸಿಕೊಂಡಿರುವ ಅಷ್ಟೂ ಮೊತ್ತವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ.

ಕರ್ನಾಟಕವನ್ನೂ ಒಳಗೊಂಡು ಒಟ್ಟು 23 ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಬಾಕಿ ₹16,982 ಕೋಟಿ ಪಾವತಿ ಆಗಲಿದೆ. ಇದರಲ್ಲಿ ಕರ್ನಾಟಕದ ಪಾಲು ₹1,934 ಕೋಟಿ ಇದೆ.

ಪರಿಹಾರ ನಿಧಿಯಲ್ಲಿ ಹಣ ಇಲ್ಲದೇ ಇರುವುದರಿಂದ ಸದ್ಯದ ಮಟ್ಟಿಗೆ ಕೇಂದ್ರ ಸರ್ಕಾರದ ಸಂಪ‍ನ್ಮೂಲದಿಂದಲೇ ಪರಿಹಾರದ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲಾಗುವುದು. ಭವಿಷ್ಯದಲ್ಲಿ ಪರಿಹಾರ ಸೆಸ್‌ ಸಂಗ್ರಹದಿಂದ ಆ ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂದು ನಿರ್ಮಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT