ಶನಿವಾರ, ಆಗಸ್ಟ್ 15, 2020
26 °C

ಕೌಟುಂಬಿಕ ಉಳಿತಾಯ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ನಂತರ ಸಾಮಾನ್ಯ ಕುಟುಂಬವೊಂದು ದಿನಬಳಕೆಯ ಸರಕುಗಳಿಗೆ ಮಾಡುವ ತಿಂಗಳ ವೆಚ್ಚದಲ್ಲಿ ಉಳಿತಾಯ ಕಂಡು ಬಂದಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಗ್ರಾಹಕರು ‍ಪ್ರತಿ ತಿಂಗಳೂ ಮಾಡುವ ವೆಚ್ಚದ ಅಂಕಿ ಅಂಶಗಳ ವಿಶ್ಲೇಷಣೆ ಆಧರಿಸಿ  ಈ ತೀರ್ಮಾನಕ್ಕೆ ಬರಲಾಗಿದೆ.

2017ರ ಜುಲೈ 1ರಿಂದ ದೇಶದಾದ್ಯಂತ ಜಿಎಸ್‌ಟಿ ಜಾರಿಗೆ ಬಂದಿದೆ. ಸರಕು ಮತ್ತು ಸೇವೆಗಳ ಮೇಲೆ ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದೆ.

ಈ ಹಿಂದಿನ ತೆರಿಗೆ ಮೇಲಿನ ತೆರಿಗೆ ಹೊರೆ ನಿವಾರಣೆಯಾಗಿದೆ. ಇದರಿಂದ ದಿನ ಬಳಕೆಯ ಸರಕುಗಳ ಬೆಲೆಗಳು ಅಗ್ಗವಾಗಿದ್ದು ಗ್ರಾಹಕರ ಪಾಲಿಗೆ ಪ್ರತಿ ತಿಂಗಳೂ ಉಳಿತಾಯ ಆಗುತ್ತಿದೆ. ಜಿಎಸ್‌ಟಿ ಮುಂಚಿನ ಮತ್ತು ನಂತರದ ಕೌಟುಂಬಿಕ ವೆಚ್ಚ ಪರಿಗಣಿಸಿದರೆ 83 ಉತ್ಪನ್ನಗಳ ಮೇಲಿನ ತೆರಿಗೆ ದರಗಳು ಕಡಿಮೆಯಾಗಿವೆ.

ಬೇಳೆಕಾಳು, ದವಸ ಧಾನ್ಯ, ಖಾದ್ಯ ತೈಲ, ಸೌಂದರ್ಯ ಪ್ರಸಾಧನ, ಕೇಶತೈಲ, ಟೂತ್‌ಪೇಸ್ಟ್‌, ಸೋಪ್‌, ವಾಷಿಂಗ್‌ ಪೌಡರ್‌, ಪಾದರಕ್ಷೆಗಳ ಬೆಲೆ ಇಳಿದಿದೆ. ಜಿಎಸ್‌ಟಿ ಜಾರಿಗೆ ಬಂದ ನಂತರ ಸಕ್ಕರೆ, ಚಾಕ್ಲೇಟ್‌, ಸೌಂದರ್ಯ ಪ್ರಸಾಧನ, ಸಾಬೂನು,  ವಾಷಿಂಗ್‌ ಪೌಡರ್‌, ಪೀಠೋಪಕರಣ  ಸೇರಿದಂತೆ ಗೃಹ ಬಳಕೆಯ ಇತರ ಸರಕುಗಳಿಗೆ ಕುಟುಂಬವೊಂದು ₹ 8,400 ವೆಚ್ಚ ಮಾಡಿದರೆ ₹ 320 ರಷ್ಟು ಉಳಿತಾಯ ಆಗುತ್ತಿದೆ ಎಂದು ಹಣಕಾಸು ಸಚಿವಾಲಯವು ಉದಾಹರಣೆ ಸಹಿತ ವಿವರಣೆ ನೀಡಿದೆ.

ಜಿಎಸ್‌ಟಿ ಜಾರಿಗೆ ಬರುವ ಮುಂಚೆ ಈ ಮೊತ್ತದ ವೆಚ್ಚಕ್ಕೆ ₹ 830 ತೆರಿಗೆ ಪಾವತಿಸಲಾಗುತ್ತಿತ್ತು. ಜಿಎಸ್‌ಟಿ ಜಾರಿಗೆ ಬಂದ ನಂತರದ ತೆರಿಗೆ ಹೊರೆ ₹ 510ಕ್ಕೆ ಇಳಿದಿದೆ. ಇದರಿಂದ ₹ 320 ಉಳಿತಾಯ ಆಗುತ್ತಿದೆ ಎಂದು ತಿಳಿಸಿದೆ.

ಈ ಹಿಂದೆ ಶೇ 2.50 ರಿಂದ ಶೇ 2.75ರಷ್ಟು ತೆರಿಗೆಗೆ ಒಳಪಟ್ಟಿದ್ದ ಗೋಧಿ ಮತ್ತು ಅಕ್ಕಿ ಜಿಎಸ್‌ಟಿ ವಿನಾಯ್ತಿ ಪಡೆದಿವೆ.

ಹಾಲಿನ ಪುಡಿ ಮೇಲಿನ ತೆರಿಗೆಯು ಶೇ 6 ರಿಂದ ಶೇ 5ಕ್ಕೆ ಇಳಿದಿದೆ. ಸಕ್ಕರೆ ಮಿಠಾಯಿಗಳ ಮೇಲಿನ ಹೊರೆ ಶೇ 21 ರಿಂದ ಶೇ 18ಕ್ಕೆ ಇಳಿದಿದೆ.

ಹಾಲಿನ ಪುಡಿ, ಮೊಸರು, ಮಜ್ಜಿಗೆ, ಇಡ್ಲಿ / ದೋಸೆ ಹಿಟ್ಟು, ಬಾಟಲಿ ನೀರು, ಹಾರ್ಲಿಕ್ಸ್‌, ಬೋರ್ನವೀಟಾಗಳ ಮೇಲಿನ ತೆರಿಗೆ ಹೊರೆ ಕಡಿಮೆಯಾಗಿದೆ. ಟೂತ್‌ಪೇಸ್ಟ್‌ / ಪೌಡರ್‌, ಸುಗಂಧದ್ರವ್ಯ, ಡಿಟರ್‌ಜೆಂಟ್ಸ್‌, ಪಾದರಕ್ಷೆಗಳಿಗೆ ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ.

ಬದಲಾದ ತೆರಿಗೆ ಸ್ವರೂಪ: ಹಳೆಯ ವ್ಯವಸ್ಥೆಯಲ್ಲಿ ಕಾರ್ಖಾನೆಯಲ್ಲಿ ತಯಾರಾಗುವ ಸರಕಿಗೆ ಕೇಂದ್ರ ಸರ್ಕಾರ ಎಕ್ಸೈಸ್‌ ಡ್ಯೂಟಿ ವಿಧಿಸುತ್ತಿತ್ತು. ಇದರ ಮೇಲೆ ರಾಜ್ಯ ಸರ್ಕಾರಗಳು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ವಿಧಿಸುತ್ತಿದ್ದವು. ಗ್ರಾಹಕರು ಸರಕಿನ ಮೂಲ ಬೆಲೆ ಮೇಲೆ ‘ವ್ಯಾಟ್‌’ ಪಾವತಿಸುವುದರ ಜತೆಗೆ, ಎಕ್ಸೈಸ್‌ ಡ್ಯೂಟಿ ಅನ್ನೂ ಪಾವತಿಸಬೇಕಾಗಿತ್ತು.

ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯಡಿ ಈ ತೆರಿಗೆ ಸ್ವರೂ‍ಪವು ಸಂಪೂರ್ಣವಾಗಿ ಬದಲಾಗಿದೆ. ಸರಕು ಮತ್ತು ಸೇವೆಯ ಬಳಕೆಯ ಅಂತ್ಯದಲ್ಲಿ ಅಂದರೆ, ಅಂತಿಮವಾಗಿ ಗ್ರಾಹಕ ಖರೀದಿಸುವ ಸಂದರ್ಭದಲ್ಲಿ ಜಿಎಸ್‌ಟಿ ವಿಧಿಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು