ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಅನುದಾನ ಇಲ್ಲದೆ ಕನಿಷ್ಠ ಪಿಂಚಣಿ ಮೊತ್ತ ಹೆಚ್ಚಳವಿಲ್ಲ: ಕೇಂದ್ರ

ಇಪಿಎಸ್‌ ಪಿಂಚಣಿ
Last Updated 22 ಮಾರ್ಚ್ 2021, 14:24 IST
ಅಕ್ಷರ ಗಾತ್ರ

ನವದೆಹಲಿ: ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಇಲ್ಲದಿದ್ದರೆ ನೌಕರರ ಪಿಂಚಣಿ ಯೋಜನೆಯ (ಇಪಿಎಸ್‌–95) ಅಡಿ ನೀಡುತ್ತಿರುವ ಕನಿಷ್ಠ ಪಿಂಚಣಿ ಮೊತ್ತ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇಪಿಎಸ್‌–95 ಯೋಜನೆಯನ್ನು ಸಮಗ್ರವಾಗಿ ಪರಿಶೀಲಿಸಲು, ಅದರ ಮೌಲ್ಯಮಾಪನ ನಡೆಸಲು ಕೇಂದ್ರ ಸರ್ಕಾರವು ಉನ್ನತ ಅಧಿಕಾರ ಇರುವ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕೆಲವು ಷರತ್ತುಗಳನ್ನು ಪೂರೈಸಿ, ಮಾಸಿಕ ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಆ ಸಮಿತಿ ಶಿಫಾರಸು ಮಾಡಿದೆ ಎಂದು ಸಚಿವರು ನೀಡಿರುವ ಉತ್ತರದಲ್ಲಿ ವಿವರಿಸಲಾಗಿದೆ. ಇಪಿಎಸ್‌–95 ಯೋಜನೆಯ ವ್ಯಾಪ್ತಿಗೆ ಬರುವವರಿಗೆ ಮಾಸಿಕ ಪಿಂಚಣಿ ಕನಿಷ್ಠ ₹ 1,000 ಎಂಬ ನಿಯಮವನ್ನು ಕೇಂದ್ರವು 2014ರ ಸೆಪ್ಟೆಂಬರ್ 1ರಿಂದ ಜಾರಿಗೊಳಿಸಿತು. ಇದಕ್ಕೆ ಬಜೆಟ್‌ನಲ್ಲಿ ಹೆಚ್ಚುವರಿ ಹಣಕಾಸಿನ ನೆರವು ಒದಗಿಸಲಾಯಿತು.

ಇಪಿಎಸ್‌–95 ಯೋಜನೆಯು ‘ನಿರ್ದಿಷ್ಟ ವಂತಿಗೆ – ನಿರ್ದಿಷ್ಟ ಪಿಂಚಣಿ ಮೊತ್ತ’ ಎಂಬ ಸೂತ್ರದ ಅಡಿ ಅನುಷ್ಠಾನಗೊಂಡಿರುವಂಥದ್ದು ಎಂದು ಸಚಿವರು ಸದನಕ್ಕೆ ತಿಳಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಪಿಂಚಣಿದಾರರಿಗೆ ಸಂಚಿತ ನಿಧಿಯಿಂದ ಹಣ ನೀಡಲಾಗುತ್ತದೆ. ಈ ನಿಧಿಗೆ ನೌಕರರ ವೇತನದ (ಗರಿಷ್ಠ ₹ 15 ಸಾವಿರ) ಶೇಕಡ 8.33ರಷ್ಟನ್ನು ನೌಕರಿ ನೀಡಿದ ಕಂಪನಿ ಜಮಾ ಮಾಡುತ್ತದೆ. ಶೇ 1.16ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ಪಾವತಿಸುತ್ತದೆ.

ಪಿಂಚಣಿ ಎಷ್ಟು ಎಂಬುದನ್ನು ಸದಸ್ಯರ ಸೇವಾ ಅವಧಿ, ವೇತನದ ಮೊತ್ತ ಆಧರಿಸಿ ಲೆಕ್ಕ ಹಾಕಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ. ಇಪಿಎಸ್‌–95 ಅಡಿ ಹೆಚ್ಚಿನ ಪಿಂಚಣಿ ನೀಡಬೇಕು ಎಂದು ಕಾರ್ಮಿಕರ ಸಂಘಟನೆಗಳು ಒತ್ತಾಯಿಸುತ್ತಿವೆ. ಆರಂಭದಲ್ಲಿ, ಕಾರ್ಮಿಕ ಸಂಘಟನೆಗಳು ಮಾಸಿಕ ₹ 3,000 ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದ್ದವು. ನಂತರ, ಜೀವನ ವೆಚ್ಚ ಹೆಚ್ಚುತ್ತಿರುವುದನ್ನು ಪರಿಗಣಿಸಿ, ಕೆಲವು ಸಂಘಟನೆಗಳು ಮಾಸಿಕ ಕನಿಷ್ಠ ಪಿಂಚಣಿ ಮೊತ್ತ ₹ 5,000 ಅಥವಾ ಅದಕ್ಕಿಂತ ಹೆಚ್ಚು ಆಗಬೇಕು ಎಂದು ಕೋರಿವೆ.

ಇಪಿಎಸ್–95 ಯೋಜನೆಯು ಹಣದುಬ್ಬರದ ಜೊತೆ ಬೆಸೆದುಕೊಂಡಿಲ್ಲ. ಈ ಯೋಜನೆಯ ಅಡಿ ಸಿಗುವ ಪಿಂಚಣಿ ಮೊತ್ತದಲ್ಲಿ ಹೆಚ್ಚಳ ಆಗುವುದಿಲ್ಲ. ಈ ಯೋಜನೆಯನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯೇ (ಇ‍ಪಿಎಫ್‌ಒ) ನಿರ್ವಹಣೆ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT