ಸೋಮವಾರ, ಸೆಪ್ಟೆಂಬರ್ 20, 2021
30 °C

ಮನೆಗೂ ವಿಮೆ ಅಗತ್ಯವೇ?

ತರುಣ್‌ ಮಾಥುರ್‌ Updated:

ಅಕ್ಷರ ಗಾತ್ರ : | |

Prajavani

ಮನೆ ಖರೀದಿಸುವುದೆಂದರೆ ಜೀವಮಾನದಲ್ಲಿ ನೀವು ಮಾಡುವ ಅತಿ ದೊಡ್ಡ ಹೂಡಿಕೆ ಆಗಿರಬಹುದು. ಮನೆ ಕಟ್ಟುವುದು ಅಥವಾ ಖರೀದಿಸುವುದು ಬಹುದೊಡ್ಡ ಸಾಹಸವೇ ಸರಿ. ಅದಕ್ಕಾಗಿ ಸುದೀರ್ಘವಾದ ಯೋಜನೆ ರೂಪಿಸಬೇಕು, ಸಣ್ಣಪುಟ್ಟ ವಿಚಾರಗಳತ್ತಲೂ ಗಮನ ಹರಿಸಬೇಕು. ಉಳಿತಾಯದ ಹಣವನ್ನೆಲ್ಲಾ ಒಗ್ಗೂಡಿಸಬೇಕು. ಮನೆ ಖರೀದಿಗೂ ಮುನ್ನ ಸಾಕಷ್ಟು ಅಧ್ಯಯನ ನಡೆಸಬೇಕು... ಆದರೆ ಮನೆಗೆ ವಿಮೆ?

ವಿಮೆ ಮಾಡಿಸದಿದ್ದರೂ ಮನೆಯ ಮಾಲೀಕರಾಗಲು ಸಾಧ್ಯ ಎಂಬ ಕಾರಣದಿಂದಾಗಿ ಅನೇಕರು ವಿಮೆಯನ್ನು ಕಡೆಗಣಿಸುತ್ತಾರೆ. ವಿಮೆಯಲ್ಲಿ ಹೂಡಿಕೆ ಮಾಡುವುದೆಂದರೆ ‘ಅನಿಶ್ಚಿತವಾದ ಘಟನೆಯ ಭಯದಿಂದ ಹಣವನ್ನು ಹೂಡಿಕೆ ಮಾಡಿ ವ್ಯರ್ಥ ಮಾಡುವುದು’ ಎಂಬ ಭಾವನೆಯೇ ಹಲವರಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಬೆಂಕಿ ಅನಾಹುತ, ಕಳ್ಳತನ, ದರೋಡೆ ಮತ್ತು ಪ್ರಕೃತಿ ವಿಕೋಪಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮನೆಗೂ ವಿಮೆ ಮಾಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಬರಬಹುದಾದ ಭಾರಿ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ನಿಮ್ಮ ಮನೆಯೇ ನಿಮ್ಮ ಅತಿ ದೊಡ್ಡ ಸೊತ್ತಾಗಿರುವುದರಿಂದ ಅದಕ್ಕೊಂದು ವಿಮೆ ಮಾಡಿಸಿಕೊಳ್ಳುವುದು ಬುದ್ಧಿವಂತಿಕೆಯ ನಡೆ ಎನಿಸುತ್ತದೆ.

ಭೂಕಂಪ: ಕಳೆದ ಕೆಲವು ದಶಕಗಳಲ್ಲಿ ಭಾರತದಲ್ಲಿ ಹಲವು ಭೂಕಂಪಗಳಾಗಿವೆ. ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ. 2001ರ ಜನವರಿ 26ರಂದು ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪವಿರಬಹುದು, 2005ರ ಅಕ್ಟೋಬರ್‌ನಲ್ಲಿ 8ರಂದು ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪವಿರಬಹುದು. ಈ ಘಟನೆಗಳಲ್ಲಿ ಲಕ್ಷಾಂತರ ಜನರು ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ.

ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗುವ ಆಸ್ತಿಪಾಸ್ತಿಯಲ್ಲಿ ಶೇ 15ರಷ್ಟಕ್ಕೂ ವಿಮೆ ಇರುವುದಿಲ್ಲ ಎಂಬುದು ಯೋಚಿಸಬೇಕಾದ ಅಂಶ. ಆದ್ದರಿಂದ ಭೂಕಂಪದಿಂದಾಗಿ ಮನೆಗೆ ಹಾನಿಯಾಗಿ ಎದುರಾಗಬಹುದಾದ ಆರ್ಥಿಕ ಸಂಕಷ್ಟದಿಂದ ನಿಮ್ಮನ್ನು ಪಾರು ಮಾಡಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗವೆಂದರೆ ಮನೆಗೆ ವಿಮೆ ಮಾಡಿಸುವುದು. ಬಹುತೇಕ ಎಲ್ಲ ‘ಗೃಹ ವಿಮೆ’ಗಳು ಪ್ರಕೃತಿ ವಿಕೋಪದಿಂದ ಆಗುವ ಹಾನಿಗೆ ಪರಿಹಾರ ಒದಗಿಸುತ್ತವೆ. ಜೊತೆಗೆ ಕಟ್ಟಡ ಅಥವಾ ಒಳಗಿರುವ ಸೊತ್ತು ಅಥವಾ ಎರಡಕ್ಕೂ ವಿಮೆ ಮಾಡಿಸಿಕೊಳ್ಳುವ ಆಯ್ಕೆಯೂ ಪಾಲಿಸಿದಾರರಿಗೆ ಲಭ್ಯವಾಗುತ್ತದೆ.

ಬೆಂಕಿ ಅನಾಹುತ

ಕಳೆದ ಕೆಲವು ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸಿವೆ. 2019ರ ಮಾರ್ಚ್‌ 6ರಂದು ದೆಹಲಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಲ್ಲದೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಅದಕ್ಕೂ ಮೊದಲು ಫೆ. 12ರಂದು ದೆಹಲಿಯ ಹೋಟೆಲ್‌ ಒಂದರಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿತ್ತು. ಅದರಲ್ಲಿ ಕನಿಷ್ಠ 17 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯಲ್ಲೂ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯಾಗಿತ್ತು. ಮನೆ, ಅಂಗಡಿ ಅಥವಾ ಕಟ್ಟಡಕ್ಕೆ ವಿಮೆ ಮಾಡಿಸುವ ಮೂಲಕ ಇಂಥ ಅನಾಹುತಗಳಿಂದ ಆರ್ಥಿಕ ನಷ್ಟವಾಗುವುದನ್ನು ತಡೆಯಬಹುದು. ಕಟ್ಟಡಕ್ಕೆ ಸಂಬಂಧಿಸಿದ ಎಲ್ಲ ವಸ್ತುಗಳಿಗೂ ಪರಿಹಾರ ನೀಡುವಂತಹ ವಿಮೆಗಳು ಈಗ ಲಭ್ಯ ಇವೆ.

ನೆರೆ, ಚಂಡಮಾರುತ, ಸಿಡಿಲು

ಸಾಮಾನ್ಯ ಗೃಹ ವಿಮೆಯು ನೆರೆ, ಚಂಡಮಾರುತ ಅಥವಾ ಸಿಡಿಲು ಬಡಿದು ಆಗುವ ಹಾನಿಗೆ ಪರಿಹಾರ ಒದಗಿಸುವುದಿಲ್ಲ. ಆದರೆ ವಿಮೆ ಮಾಡಿಸುವಾಗ ಹೆಚ್ಚುವರಿಯಾಗಿ ಇವುಗಳನ್ನು ಸೇರಿಸುವ ಮೂಲಕ ಪರಿಹಾರ ಪಡೆಯಲು ಸಾಧ್ಯವಿದೆ. ಹೀಗೆ ಹೆಚ್ಚುವರಿಯಾಗಿ ಸೇರಿಸುವುದರಿಂದ ಕಂತಿನ ಮೊತ್ತದಲ್ಲಿ ಸ್ವಲ್ಪ ಏರಿಕೆಯಾಗುತ್ತದೆ. ಆದರೆ ಯಾವುದೇ ಅವಘಡದಿಂದಾಗುವ ನಷ್ಟಕ್ಕೆ ಸಂಪೂರ್ಣ ಪರಿಹಾರ ಲಭಿಸುತ್ತದೆ ಎಂಬುದನ್ನೂ ಮರೆಯಬಾರದು.

ದರೋಡೆ, ಕಳ್ಳತನ

ದರೋಡೆ ವಿಚಾರದಲ್ಲಿ ಭಾರತದಲ್ಲಿ ಭಯಾನಕವಾದ ಅಂಕಿಅಂಶಗಳು ಲಭ್ಯವಾಗುತ್ತವೆ. ದೇಶದಲ್ಲಿ ಪ್ರತಿ ವರ್ಷ ದರೋಡೆ ಪ್ರಕರಣಗಳ ಸಂಖ್ಯೆ ಶೇ 20 ರಿಂದ ಶೇ 27ರಷ್ಟು ಏರಿಕೆ ದಾಖಲಿಸುತ್ತಿವೆ. ಅದರಲ್ಲೂ ದೊಡ್ಡ ನಗರಗಳಲ್ಲಿ ಇವುಗಳ ಸಂಖ್ಯೆ ಇನ್ನೂ ಹೆಚ್ಚು. ನಮ್ಮ ಎಲ್ಲಾ ಮಹಾನಗರಗಳಲ್ಲಿ ಪ್ರತಿ ವರ್ಷ 4 ಸಾವಿರದಿಂದ ಐದು ಸಾವಿರ ದರೋಡೆ ಪ್ರಕರಣಗಳು ದಾಖಲಾಗುತ್ತಿವೆ. ಆದ್ದರಿಂದ ‘ಸಮಗ್ರ’ ಗೃಹ ವಿಮೆ (ಕಟ್ಟಡ + ಒಳಗಿರುವ ಸೊತ್ತು) ಮಾಡಿಸುವುದು ಹೆಚ್ಚು ಲಾಭದಾಯಕ. ಕೆಲವು ವಿಮಾ ಪಾಲಿಸಿಗಳಲ್ಲಿ ಇವುಗಳನ್ನು ಹೆಚ್ಚುವರಿಯಾಗಿ ಪಡೆಯಬೇಕಾಗುತ್ತದೆ. ವ್ಯಾಪಾರ ಮಳಿಗೆಗಳಿಗಾಗಿ ಪ್ರತ್ಯೇಕವಾದ ‘ದರೋಡೆ’ ವಿಮೆಗಳನ್ನೇ ಕೆಲವು ವಿಮಾ ಸಂಸ್ಥೆಗಳು ಒದಗಿಸುತ್ತವೆ.

(ಲೇಖಕ: ‘ಪಾಲಿಸಿಬಜಾರ್‌ಡಾಟ್‌ಕಾಂ’ನ ಸಾಮಾನ್ಯ ವಿಮೆ ವಿಭಾಗದ ಮುಖ್ಯ ವಹಿವಾಟು ಅಧಿಕಾರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.