ಸೋಮವಾರ, ಜನವರಿ 20, 2020
18 °C

ಗೃಹ ಸಾಲ ಪಡೆಯೋದು ಹೇಗೆ?

ಅಮಿತ್‌ ಸಿನ್ಹಾ Updated:

ಅಕ್ಷರ ಗಾತ್ರ : | |

Prajavani

ಮನೆ ಖರೀದಿ ಈಗ ದುಬಾರಿ ವಿಚಾರವೇ ಸರಿ. ಸ್ವಂತ ಮನೆ ಖರೀದಿಯ ಕನಸು ಹೊತ್ತು, ದುಡ್ಡಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ‘ಗೃಹಸಾಲ’ ಎಂಬುದು ಮೋಡದ ನಡುವಿನಿಂದ ಬರುವ ಬೆಳ್ಳಿ ಕಿರಣದಂತೆ ಆಶಾಭಾವನೆ ಮೂಡಿಸುತ್ತದೆ. ನೀವು ಸಾಲ ಪಡೆದು ಮನೆ ಖರೀದಿಸಲು ಮುಂದಾಗಿದ್ದು, ಸಾಲ ಪಡೆಯುವ ಪ್ರಕ್ರಿಯೆ ಏನೆಂಬುದು ಗೊತ್ತಿಲ್ಲದಿದ್ದರೆ ಈ ಲೇಖನದಲ್ಲಿ ಹೇಳಿರುವ ಕೆಲವು ಅಂಶಗಳತ್ತ ಗಮನಹರಿಸುವುದು ಅಗತ್ಯ.

ಗೃಹಸಾಲ ಪಡೆಯಲು ಇರಬೇಕಾದ ಅರ್ಹತೆ ಏನು, ಸಾಲಕ್ಕಾಗಿ ಸೂಕ್ತವಾದ ಹಣಕಾಸು ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏನು, ಸಾಲ ಮರುಪಾವತಿಗೆ ಸರಿಯಾದ ಅವಧಿಯನ್ನು ಆಯ್ಕೆ ಮಾಡುವುದು ಹೇಗೆ... ಇಂತಹ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ.

ಗೃಹಸಾಲದ ಪ್ರಕ್ರಿಯೆ ಆರಂಭವಾಗುವುದು ಸಾಲ ಪಡೆಯುವವನ ‘ಅರ್ಹತೆ’ಯಿಂದ. ಅರ್ಹತೆ ನಿರ್ಧರಿಸುವಲ್ಲಿ ಮುಖ್ಯ ಪಾತ್ರವಹಿಸುವುದು ‘ಕ್ರೆಡಿಟ್‌ ಸ್ಕೋರ್‌’. ವ್ಯಕ್ತಿಯೊಬ್ಬ ಪಡೆಯಬಹುದಾದ ಗರಿಷ್ಠ ಸಾಲದ ಮೊತ್ತವನ್ನು ನಿರ್ಧಾರ ಮಾಡುವಲ್ಲಿ ಕ್ರೆಡಿಟ್‌ ಸ್ಕೋರ್‌ ಬಹುಮುಖ್ಯ ಪಾತ್ರ ವಹಿಸುತ್ತದೆ. 300ರಿಂದ 900 ಅಂಶಗಳವರೆಗೆ ಈ ಸ್ಕೋರ್‌ ಅನ್ನು ನಿರ್ಧರಿಸಲಾಗುತ್ತದೆ. ನೀವು ಎಲ್ಲಾ ಪಾವತಿಗಳನ್ನು ಸಕಾಲದಲ್ಲಿ ಮಾಡುತ್ತಿದ್ದರೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿಯೇ ಇರುತ್ತದೆ. ಸ್ಕೋರ್‌ 750ರಷ್ಟಿದ್ದರೆ ಅದನ್ನು ಉತ್ತಮ ಸ್ಕೋರ್‌ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಗೃಹಸಾಲಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮುನ್ನ, ನಿಮ್ಮ ಕ್ರೆಡಿಟ್‌ ಸ್ಕೋರ್‌ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ.

ಸಾಲದ ‘ಮರುಪಾವತಿ ಸಾಮರ್ಥ್ಯ’ವನ್ನು ನಿರ್ಧರಿಸುವುದು ನಿಮ್ಮ ಆದಾಯ. ಕುಟುಂಬದಲ್ಲಿ ನಿಮ್ಮ ಅವಲಂಬಿತರು ಎಷ್ಟು ಮಂದಿ ಇದ್ದಾರೆ, ನಿಮ್ಮ ಮಾಸಿಕ ಖರ್ಚುವೆಚ್ಚ ಎಷ್ಟು ಬರಬಹುದು ಎಂಬುದನ್ನು ಲೆಕ್ಕಾಚಾರ ಹಾಕಿದ ಬಳಿಕ ನಿಮ್ಮ ಮರುಪಾವತಿಯ ಸಾಮರ್ಥ್ಯವನ್ನು ಬ್ಯಾಂಕ್‌ ನಿರ್ಧರಿಸುತ್ತದೆ. ಯಾವ ಸ್ಥಿತಿಯಲ್ಲೂ ನಿಮ್ಮ ಮಾಸಿಕ ಮರುಪಾವತಿ ಮೊತ್ತವು ಒಟ್ಟಾರೆ ಮಾಸಿಕ ವೇತನದ ಶೇ 50ನ್ನು ಮೀರಬಾರದು. 

ನೀವು ಖರೀದಿಸುವ ಸೊತ್ತಿನ ಮೌಲ್ಯ ಮಾಪನ ಮಾಡಿದ ಬಳಿಕ, ನಿಮಗೆ ನೀಡಬಹುದಾದ ಗರಿಷ್ಠ ಸಾಲದ ಪ್ರಮಾಣವನ್ನು ಸಾಲ ನೀಡುವ ಸಂಸ್ಥೆಗಳು ನಿರ್ಧರಿಸುತ್ತವೆ. ಸೊತ್ತಿನ ಮೌಲ್ಯದ ಶೇ 20ರಷ್ಟನ್ನು ನೀವು ನೀಡಬೇಕಾಗುತ್ತದೆ. ಉಳಿದ ಶೇ 80ರಷ್ಟು ಮೊತ್ತ ಮಾತ್ರ ಸಾಲದ ರೂಪದಲ್ಲಿ ಲಭ್ಯವಾಗುತ್ತದೆ.

ನಿಮ್ಮ ಸಾಲ ಪಡೆಯುವ ಅರ್ಹತೆ ನಿರ್ಧರಿಸುವುದು ಹೇಗೆಂದು ತಿಳಿದ ಮೇಲೆ, ಮುಂದಿನ ಹೆಜ್ಜೆ ಸಾಲ ಪಡೆಯಲು ಸರಿಯಾದ ಹಣಕಾಸು ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವುದು. ಇದಕ್ಕೆ ಒಳ್ಳೆಯ ವಿಧಾನವೆಂದರೆ, ಬೇರೆ ಬೇರೆ ಸಂಸ್ಥೆಗಳಿಂದ ಕೊಟೇಶನ್‌ಗಳನ್ನು ಪಡೆಯುವುದು. ಹೀಗೆ ಸಾಲದ ಕುರಿತಾಗಿ ವಿವಿಧ ಸಂಸ್ಥೆಗಳ ಜತೆ ಮಾತುಕತೆ ನಡೆಸುವಾಗ ಬಡ್ಡಿ ದರ, ಪರಿಷ್ಕರಣಾ ಶುಲ್ಕ, ಅವಧಿ ಪೂರ್ವ ಮರುಪಾವತಿ ಶುಲ್ಕ, ಮಾಸಿಕ ಕಂತು ಹಾಗೂ ಮರುಪಾವತಿ ಅವಧಿಯ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮರೆಯಬೇಡಿ.

ಈ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ, ಸಾಲ ಪಡೆಯಲು ಸರಿಯಾದ ಸಂಸ್ಥೆಯನ್ನು ಆಯ್ಕೆ ಮಾಡಿದ ಬಳಿಕ ಒಂದು ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಅದರಲ್ಲಿ ತಮ್ಮ ಅರ್ಜಿದಾರರ ವೈಯಕ್ತಿಕ ಹಾಗೂ ವೃತ್ತಿಯನ್ನು ಕುರಿತ ಸಂಪೂರ್ಣ ಮಾಹಿತಿಯನ್ನು ನೀಡುವುದು ಅಗತ್ಯ. ಯಾವ ಸೊತ್ತನ್ನು ಖರೀದಿಸಬೇಕು ಎಂಬುದನ್ನು ನೀವು ಈಗಾಗಲೇ ನಿರ್ಧರಿಸಿದ್ದರೆ, ಅದರ ವಿವರವನ್ನೂ ಅರ್ಜಿಯ ಜತೆಗೆ ನೀಡಬೇಕು. ಗುರುತು, ವಿಳಾಸ ದೃಢೀಕರಣ ಹಾಗೂ ಆದಾಯ ಕುರಿತ ದಾಖಲೆಗಳನ್ನು ಸಹ ಅರ್ಜಿಯ ಜತೆಗೆ ನೀಡಬೇಕಾಗುತ್ತದೆ.

ಸಾಲ ನೀಡುವ ಸಂಸ್ಥೆಗೆ ಸಲ್ಲಿಸಬೇಕಾದ ದಾಖಲೆಗಳಲ್ಲಿ ಫಾರಂ–16 ಅಥವಾ ಆದಾಯತೆರಿಗೆ ಪಾವತಿಸಿರುವುದಕ್ಕೆ ಸಂಬಂಧಿಸಿದ ಇತ್ತೀಚಿನ ಎರಡು ವರ್ಷಗಳ ದಾಖಲೆಯ ಪ್ರತಿ (ಆದಾಯ ತೆರಿಗೆ ಇಲಾಖೆಯಿಂದ ಪ್ರಮಾಣೀಕರಿಸಿದ), ವೇತನ ಪ್ರಮಾಣ ಪತ್ರದ ಮೂಲ ಪ್ರತಿ ಅಥವಾ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಅಥವಾ ಕೊನೆಯ ಆರು ತಿಂಗಳ ಅವಧಿಯ ವ್ಯವಹಾರಗಳ ದಾಖಲೆಗಳನ್ನು ಹೊಂದಿರುವ ಬ್ಯಾಂಕ್‌ ಪಾಸ್‌ಬುಕ್‌ನ ಪ್ರತಿ ಹಾಗೂ ವೈಯಕ್ತಿಕ ಸೊತ್ತು ಹಾಗೂ ಬಾಧ್ಯತೆಗಳನ್ನು ಕುರಿತ ಪ್ರಮಾಣ ಪತ್ರ.

ಗುರುತು ಪತ್ರಗಳ ರೂಪದಲ್ಲಿ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌, ವಾಹನ ಚಾಲನಾ ಪರವಾನಗಿ ಮತ್ತು ಪ್ಯಾನ್‌ ಕಾರ್ಡಗಳನ್ನು ನೀಡಬೇಕು. ಈ ಹಂತದಲ್ಲಿಯೇ ಪರಿಷ್ಕರಣಾ ಶುಲ್ಕವನ್ನು ನೀಡುವಂತೆ ಬ್ಯಾಂಕ್‌ ನಿಮಗೆ ಸೂಚಿಸಬಹುದು. ಅಗತ್ಯ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಸ್ವೀಕರಿಸಿದ ಬಳಿಕ, ನಿಮ್ಮ ಮರುಪಾವತಿಯ ಸಾಮರ್ಥ್ಯ ಏನೆಂಬುದನ್ನು ಬ್ಯಾಂಕ್‌ ಮೌಲ್ಯಮಾಪನ ಮಾಡುತ್ತದೆ. ಬ್ಯಾಂಕ್‌ಗೆ ಸಂಪೂರ್ಣ ಭರವಸೆ ಮೂಡಿದ ಬಳಿಕ ಸಾಲವನ್ನು ಮಂಜೂರು ಮಾಡಿ, ನಿಮಗೆ ಮಂಜೂರಾತಿ ಪತ್ರವನ್ನು ನೀಡುತ್ತದೆ. ನೀವು ಬ್ಯಾಂಕ್‌ನ ಪ್ರಸ್ತಾಪವನ್ನು ಒಪ್ಪುವುದಾದರೆ ಆ ಪತ್ರದ ಪ್ರತಿಯ ಮೇಲೆ ಸಹಿಮಾಡಿ ಬ್ಯಾಂಕ್‌ಗೆ ಸಲ್ಲಿಸಬೇಕಾಗುತ್ತದೆ.

ಅವಧಿ ದೀರ್ಘವಾದಷ್ಟು ಬಡ್ಡಿ ಹೆಚ್ಚು

ಗೃಹಸಾಲ ಪಡೆಯುವವರ ವಯಸ್ಸು ಹಾಗೂ ವೇತನದ ಆಧಾರದಲ್ಲಿ ಸಾಲ ಮರುಪಾವತಿಗೆ 5 ವರ್ಷದಿಂದ 30 ವರ್ಷಗಳವರೆಗಿನ ಅವಧಿಯನ್ನು ನೀಡಲಾಗುತ್ತದೆ. ಮರುಪಾವತಿ ಅವಧಿ ಕಡಿಮೆಯಾದರೆ ನೀವು ಪಾವತಿಸಬೇಕಾದ ಮಾಸಿಕ ಕಂತಿನ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ ನೀವು ಸಾಲದ ಮೇಲೆ ಬ್ಯಾಂಕ್‌ಗೆ ಪಾವತಿಸುವ ಒಟ್ಟಾರೆ ಬಡ್ಡಿಯ ಪ್ರಮಾಣವು ಕಡಿಮೆಯಾಗಿರುತ್ತದೆ. ಮರುಪಾವತಿ ಅವಧಿ ದೀರ್ಘವಾದರೆ ಕಂತಿನ ಪ್ರಮಾಣ ಕಡಿಮೆಯಾಗಿ ಬಡ್ಡಿಯ ಪ್ರಮಾಣ ಹೆಚ್ಚಾಗಿರುತ್ತದೆ.

ಸಾಲ ಮರುಪಾವತಿಗೆ ದೀರ್ಘ ಅವಧಿಯನ್ನು ಆಯ್ಕೆ ಮಾಡಿಕೊಂಡರೆ ನೀವು ಖರೀದಿಸುವ ಸೊತ್ತಿನ ವೆಚ್ಚವು ಹೆಚ್ಚಾಗುತ್ತದೆ. ಒಂದು ಉದಾಹರಣೆ ನೀಡುವುದಾದರೆ; ಶೇ 8.5ರ ಬಡ್ಡಿ ದರದಲ್ಲಿ ನೀವು ₹50 ಲಕ್ಷ ಸಾಲ ಪಡೆದು ಮರುಪಾವತಿಗೆ 20 ವರ್ಷಗಳ ಅವಧಿ ಆಯ್ಕೆ ಮಾಡಿದಿರೆಂದರೆ ನಿಮ್ಮ ಮಾಸಿಕ ಸಾಲದ ಕಂತು ₹ 43,391 ಆಗಿರುತ್ತದೆ. 20 ವರ್ಷಗಳಲ್ಲಿ ನೀವು ಮರುಪಾವತಿಸುವ ಒಟ್ಟಾರೆ ಮೊತ್ತವು ₹ 1,04,13,840 ಆಗಿರುತ್ತದೆ.

ಆದರೆ, ಅದೇ ಮೊತ್ತವನ್ನು 10 ವರ್ಷ ಅವಧಿಗೆ ಪಡೆಯುವುದಾದರೆ ಮಾಸಿಕ ಕಂತಿನ ಪ್ರಮಾಣವು ₹61,992 ಆಗಿ, ಮರುಪಾವತಿಸುವ ಒಟ್ಟಾರೆ ಮೊತ್ತ ₹ 74,39,040 ಆಗಿರುತ್ತದೆ.

(ಲೇಖಕ: ಟ್ರೆಸ್ಪೆಕ್ಟ್‌ ಇಂಡಿಯಾ
ಪ್ರೈವೇಟ್‌ ಲಿಮಿಟೆಡ್‌ನ ಸಿಒಒ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು