ಸೋಮವಾರ, ಆಗಸ್ಟ್ 8, 2022
24 °C
ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಪ್ರಕಟ

ಇನ್ನು ಮುಂದೆ ಹೋಟೆಲ್‌ಗಳಲ್ಲಿ ಸೇವಾ ಶುಲ್ಕ ಸಂಗ್ರಹಿಸಲು ಇಲ್ಲ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹೋಟೆಲ್‌, ರೆಸ್ಟೋರೆಂಟ್‌ಗಳು ಗ್ರಾಹಕರಿಂದ ಸೇವಾ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಹೇಳಿದೆ. ನಿಯಮ ಉಲ್ಲಂಘಿಸಿದರೆ ಗ್ರಾಹಕರು ದೂರು ದಾಖಲಿಸಬಹುದು ಎಂದೂ ತಿಳಿಸಿದೆ.

ಬಿಲ್‌ನಲ್ಲಿಯೇ ಸೇವಾ ಶುಲ್ಕ ಸೇರಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಬರುತ್ತಿರುವ ದೂರುಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪ್ರಾಧಿಕಾರವು, ನಿಯಮಗಳಿಗೆ ವಿರುದ್ಧವಾಗಿ ವ್ಯಾಪಾರ ನಡೆಸುವುದು ಮತ್ತು ಗ್ರಾಹಕರ ಹಕ್ಕು ಉಲ್ಲಂಘಿಸುವುದನ್ನು ತಡೆಯುವ ಸಂಬಂಧ ಸೋಮವಾರ ಮಾರ್ಗಸೂಚಿಗಳನ್ನು ಬಿಡುಗಡೆ‌ ಮಾಡಿದೆ.

ಮಾರ್ಗಸೂಚಿ ಹೇಳುವುದೇನು?

* ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ

* ಬೇರೆ ಯಾವುದೇ ಹೆಸರಿನಲ್ಲಿಯೂ ಸೇವಾ ಶುಲ್ಕ ಸಂಗ್ರಹಿಸಬಾರದು

* ಸೇವಾ ಶುಲ್ಕ ಪಾವತಿಸುವಂತೆ ಗ್ರಾಹಕರನ್ನು ಒತ್ತಾಯಿಸಬಾರದು

* ಗ್ರಾಹಕರು ಸ್ವ–ಇಚ್ಛೆಯಿಂದ ಸೇವಾ ಶುಲ್ಕ ಪಾವತಿಸಬಹುದು. ಇದು ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಎಂಬುದನ್ನು ಹೋಟೆಲ್‌ಗಳು ತಿಳಿಸಬೇಕು

* ಸೇವಾ ಶುಲ್ಕದ ಹೆಸರಿನಲ್ಲಿ ಯಾವುದೇ ಸೇವೆಗಳನ್ನು ನಿರ್ಬಂಧಿಸುವಂತೆ ಇಲ್ಲ.

* ಆಹಾರ ಬಿಲ್‌ನ ಮೊತ್ತದಲ್ಲಿಯೇ ಸೇವಾ ಶುಲ್ಕ ಸೇರಿಸಬಾರದು ಹಾಗೂ ಒಟ್ಟಾರೆ ಮೊತ್ತದ ಮೇಲೆ ಜಿಎಸ್‌ಟಿ ವಿಧಿಸಬಾರದು

* ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸಿದ್ದರೆ ಅದನ್ನು ತೆಗೆಯುವಂತೆ ಗ್ರಾಹಕರು ಮನವಿ ಮಾಡಬಹುದಾಗಿದೆ

1915ಗೆ ದೂರು ನೀಡಿ

ಪ್ರಾಧಿಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದರ ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಎಚ್‌) ಸಂಖ್ಯೆ 1915ಕ್ಕೆ ಕರೆ ಮಾಡಿ ಗ್ರಾಹಕರು ದೂರು ನೀಡಬಹುದು. ಎನ್‌ಸಿಎಚ್‌ ಮೊಬೈಲ್ ಆ್ಯಪ್‌ ಮೂಲಕವೂ ದೂರು ನೀಡಬಹುದು. ನ್ಯಾಯಾಲಯದಲ್ಲಿ ದೂರು ನೀಡುವುದಕ್ಕೂ ಮುನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ಎನ್‌ಸಿಎಚ್‌ ಪರ್ಯಾಯ ಮಾರ್ಗವಾಗಿದೆ. ಅಲ್ಲದೆ, ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಲೂ ಅವಕಾಶ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು