ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ವಾಣಿಜ್ಯ ಪ್ರವೇಶಕ್ಕೆ ಒಎನ್‌ಡಿಸಿ ನೆರವು: ಇನ್ಫೊಸಿಸ್‌ ಅಧ್ಯಕ್ಷ ನಂದನ್ ನಿಲೇಕಣಿ

Last Updated 4 ಏಪ್ರಿಲ್ 2023, 14:00 IST
ಅಕ್ಷರ ಗಾತ್ರ

ಬೆಂಗಳೂರು: ಡಿಜಿಟಲ್‌ ವಾಣಿಜ್ಯಕ್ಕಾಗಿನ ಮುಕ್ತ ವ್ಯವಸ್ಥೆಯು (ಒಎನ್‌ಡಿಸಿ) ಸಣ್ಣ ವ್ಯಾಪಾರಿಗಳಿಗೆ ಇ–ವಾಣಿಜ್ಯದ ಜಗತ್ತನ್ನು ಪ್ರವೇಶಿಸಲು ನೆರವಾಗುತ್ತದೆ ಎಂದು ಇನ್ಫೊಸಿಸ್‌ ಅಧ್ಯಕ್ಷ ನಂದನ್ ನಿಲೇಕಣಿ ಅಭಿಪ್ರಾಯಪಟ್ಟರು. ಅಲ್ಲದೆ, ಒಎನ್‌ಡಿಸಿ ವ್ಯವಸ್ಥೆಯು ಸರಕು ಸಾಗಣೆಗೆ ಇನ್ನಷ್ಟು ಕಂಪನಿಗಳ ಉಗಮಕ್ಕೂ ನೆರವಾಗಬಹುದು ಎಂದು ಅವರು ಹೇಳಿದರು.

ಯುಪಿಐ ಆಧರಿಸಿ ವಿವಿಧ ಬಗೆಯ ಪಾವತಿ ಸೇವೆಗಳನ್ನು ಒದಗಿಸುವ ಫೋನ್‌ಪೆ ಆರಂಭಿಸಿರುವ ‘ಪಿನ್‌ಕೋಡ್‌’ ಇ–ವಾಣಿಜ್ಯ ವೇದಿಕೆಯು ಒಎನ್‌ಡಿಸಿ ಜಾಲಕ್ಕೆ ಸೇರ್ಪಡೆ ಆಗುವ ಸಂದರ್ಭದಲ್ಲಿ ಮಾತನಾಡಿದ ನಿಲೇಕಣಿ, ‘ಒಎನ್‌ಡಿಸಿ ವ್ಯವಸ್ಥೆಯು ಇ–ವಾಣಿಜ್ಯ ವಹಿವಾಟಿನಲ್ಲಿ ಹಲವು ವರ್ಗಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

ಒಎನ್‌ಡಿಸಿ ವೇದಿಕೆಯನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದೆ. ಪ್ರಬಲ ಇ–ವಾಣಿಜ್ಯ ವೇದಿಕೆಗಳು ಒದಗಿಸುವ ಎಲ್ಲ ಅನುಕೂಲಗಳು ಸಣ್ಣ ವರ್ತಕರಿಗೂ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಒಎನ್‌ಡಿಸಿ ಹೊಂದಿದೆ.

‘ಪಿನ್‌ಕೋಡ್‌’ ಹೆಸರಿನ ಇ–ವಾಣಿಜ್ಯ ಆ್ಯಪ್‌ ಈಗ ಬೆಂಗಳೂರಿನಲ್ಲಿ ಸೇವೆ ಆರಂಭಿಸಿದೆ. ಇದನ್ನು ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ವಿಸ್ತರಿಸಲಾಗುವುದು ಎಂದು ಫೋನ್‌ಪೆ ಸಿಇಒ ಸಮೀರ್ ನಿಗಮ್ ಹೇಳಿದರು. ಡಿಸೆಂಬರ್‌ ವೇಳೆಗೆ ದಿನವೊಂದಕ್ಕೆ ಈ ಆ್ಯಪ್‌ ಮೂಲಕ 1 ಲಕ್ಷ ಖರೀದಿ ವಹಿವಾಟು ಸಾಧ್ಯವಾಗಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಸ್ಥಳೀಯ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಿರುವ ಈ ಆ್ಯಪ್‌ ಮೂಲಕ ಸಣ್ಣ ಅಂಗಡಿಗಳಿಂದಲೂ ದಿನಸಿ ವಸ್ತುಗಳನ್ನು ತರಿಸಿಕೊಳ್ಳಬಹುದು.

ಕಾರ್ಯಕ್ರಮದಲ್ಲಿ ವರ್ಚುವಲ್‌ ಆಗಿ ಭಾಗವಹಿಸಿದ್ದ ಕೇಂದ್ರ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಕಾರ್ಯದರ್ಶಿ ಅನುರಾಗ್ ಜೈನ್, ‘ಒಎನ್‌ಡಿಸಿ ವ್ಯವಸ್ಥೆಯು ಇ–ವಾಣಿಜ್ಯ ವಹಿವಾಟುಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತದೆ. ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಸಿಗುವಂತೆ ನೋಡಿಕೊಳ್ಳುತ್ತದೆ’ ಎಂದರು.

ಸಣ್ಣ ವ್ಯಾಪಾರಿಗಳು ಇ–ವಾಣಿಜ್ಯ ವಲಯದ ಬೃಹತ್ ಕಂಪನಿಗಳ ಮೇಲೆ ಅವಲಂಬಿತ ಆಗುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಒಎನ್‌ಡಿಸಿ ವೇದಿಕೆಯನ್ನು ಆರಂಭಿಸಿದೆ. ಇದು 2022ರಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಪರೀಕ್ಷಾರ್ಥವಾಗಿ ಚಾಲನೆ ಪಡೆದಿತ್ತು. ಹಲವು ಕಂಪನಿಗಳು ಈಗಾಗಲೇ ಒಎನ್‌ಡಿಸಿ ಭಾಗವಾಗಿವೆ. ಕ್ಯಾಬ್‌ ಸೇವೆಗಳನ್ನು ನೀಡುವ ‘ನಮ್ಮ ಯಾತ್ರಿ’ ತೀರಾ ಈಚೆಗೆ ಒಎನ್‌ಡಿಸಿ ಜಾಲವನ್ನು ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT