ಶುಕ್ರವಾರ, ಜೂನ್ 5, 2020
27 °C

ಆರ್ಥಿಕ ಹಿಂಜರಿತ:‘ಇಕ್ರಾ‘ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ : ಸಾಧಾರಣ ಮಟ್ಟದ ಆರ್ಥಿಕ ಕೊಡುಗೆ, ದೇಶದಾದ್ಯಂತ ದಿಗ್ಬಂಧನ ವಿಸ್ತರಣೆ ಮತ್ತು ಹೆಚ್ಚಿದ ಕಾರ್ಮಿಕರ ಕೊರತೆ ಮತ್ತಿತರ ಕಾರಣಕ್ಕೆ 2020–21ನೇ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ (–) 5ರಷ್ಟು ಕುಸಿತ ಕಾಣಲಿದೆ ಎಂದು ದೇಶಿ ರೇಟಿಂಗ್‌ ಕಂಪನಿ ‘ಇಕ್ರಾ‘ ಅಂದಾಜಿಸಿದೆ.

ಮೇ ಅಂತ್ಯದವರೆಗೆ ಲಾಕ್‌ಡೌನ್‌ ವಿಸ್ತರಣೆ, ಕಾರ್ಮಿಕರು ಸ್ವಂತ ರಾಜ್ಯಕ್ಕೆ ಮರಳಿರುವುದು ಮತ್ತು ಸರಕುಗಳ ಪೂರೈಕೆ ಪ್ರಕ್ರಿಯೆ ವಿಳಂಬ ಕಾರಣಗಳಿಂದ ವೃದ್ಧಿ ದರ ಕುಸಿತ ಕಾಣುವ ಸಾಧ್ಯತೆ ಇದೆ ಎಂದು  ಕಂಪನಿಯ  ಆರ್ಥಿಕ ತಜ್ಞರಾದ ಅದಿತಿ ನಾಯರ್‌ ಮತ್ತು ಆರ್ಜೂ ಪಹ್ವಾ ಹೇಳಿದ್ದಾರೆ.

‘₹ 20.97 ಲಕ್ಷ ಕೋಟಿ ಮೊತ್ತದ ಉತ್ತೇಜನಾ ಕೊಡುಗೆಗಳು ‘ಜಿಡಿಪಿ’ಯ ಶೇ 10ರಷ್ಟು ಇವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದ್ದರೂ,  ವಿಶ್ಲೇಷಕರ ಪ್ರಕಾರ ಅದು ಶೇ 0.8 ರಿಂದ ಶೇ 1.2ರಷ್ಟಿದೆ. ಈ ವರ್ಷದ ಮೊದಲ ತ್ರೈಮಾಸಿಕದ ವೃದ್ಧಿ ದರವು ಶೇ 25ರಷ್ಟು ಕುಸಿತ ಕಾಣಲಿದೆ. ದ್ವಿತೀಯ ತ್ರೈಮಾಸಿಕದಲ್ಲಿ ಶೇ (–) 2.1ರಷ್ಟು ಕುಸಿತ ಕಾಣಲಿದೆ.  ಮೂರು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಕೆಲಮಟ್ಟಿಗೆ ಚೇತರಿಕೆ ಕಾಣಬಹುದು.

‘ತೀವ್ರ ಸಂಕಷ್ಟ ಎದುರಿಸುತ್ತಿರುವ ವಲಯಗಳಿಗೆ ಅಗತ್ಯವಾಗಿರುವ ದುಡಿಯುವ ಬಂಡವಾಳ ಒದಗಿಸಲಷ್ಟೇ ಈ ಕೊಡುಗೆಗಳು ನೆರವಾಗಲಿವೆ.  ಎರಡು ತಿಂಗಳವರೆಗೆ ಉತ್ಪಾದನೆ ಸ್ಥಗಿತಗೊಳಿಸಿದ್ದರಿಂದ ಆಗಿರುವ ನಷ್ಟ ಭರ್ತಿ ಮಾಡಿಕೊಳ್ಳಲು  ನೆರವಾಗುವುದಿಲ್ಲ. ಸರ್ಕಾರದ ಕ್ರಮಗಳು ಫಲ ನೀಡಲು ಕೆಲ ವರ್ಷಗಳು ಬೇಕಾಗಲಿವೆ.

‘ಈ ಕೊಡುಗೆಗಳಿಂದ ಸರ್ಕಾರಕ್ಕೆ ಆಗಲಿರುವ ನೇರ ಹೊರೆಯು ಜಿಡಿಪಿಯ ಶೇ 1ಕ್ಕೆ ಅಥವಾ ಒಟ್ಟಾರೆ ಕೊಡುಗೆಗಳ ಶೇ 10ರಷ್ಟಕ್ಕೆ ಸೀಮಿತಗೊಳ್ಳಲಿದೆ. ಕುಸಿದಿರುವ ಬೇಡಿಕೆ ಹೆಚ್ಚಿಸಲು  ಕೊಡುಗೆಗಳಿಂದ ಸಾಧ್ಯವಾಗಲಾರದು’ ಎಂದೂ ಅವರು ಹೇಳಿದ್ದಾರೆ.

W ಸ್ವರೂಪದಲ್ಲಿ ಆರ್ಥಿಕ ಚೇತರಿಕೆ

ದೇಶಿ ಆರ್ಥಿಕತೆಯು ಇಂಗ್ಲಿಷ್‌ V ಅಕ್ಷರ ಆಕಾರದಲ್ಲಿ ಚೇತರಿಕೆ ಕಾಣಲಿದೆ ಎಂದು  ಈ ಮೊದಲು ಅಂದಾಜಿಸಲಾಗಿತ್ತು. ಅದೀಗ W ಅಕ್ಷರದ ರೂಪದಲ್ಲಿ ಇರಲಿದೆ ಎಂದೂ ಆರ್ಥಿಕ ತಜ್ಞರು ಊಹಿಸಿದ್ದಾರೆ. ಕೊರೊನಾ ಸೋಂಕಿನ ಎರಡನೆ ಅಲೆ ಅಪ್ಪಳಿಸಿದರೆ, ಎಲ್ಲೆಡೆ ಮತ್ತೆ ಲಾಕ್‌ಡೌನ್‌ ಜಾರಿಗೆ ತಂದರೆ, ಬೇಡಿಕೆಯ ಅನಿಶ್ಚಿತತೆ ಮತ್ತು ಪೂರೈಕೆ ಸರಪಳಿಯಲ್ಲಿನ ಅಡಚಣೆಗಳಿಂದ ಆರ್ಥಿಕ ಚಟುವಟಿಕೆಗಳ  ಆವರ್ತವು W ಆಕಾರದಲ್ಲಿ ಇರಲಿದೆ ಎಂದು ಅವರು ಅಂದಾಜಿಸಿದ್ದಾರೆ.

V ಆಕಾರದ ಆರ್ಥಿಕತೆ ಎಂದರೆ, ತೀವ್ರ ಸ್ವರೂಪದ ಹಿಂಜರಿತ ಕಾಣುವ ಆರ್ಥಿಕ ಚಟುವಟಿಕೆಗಳು ಅಷ್ಟೇ ತ್ವರಿತವಾಗಿ ಚೇತರಿಸಿಕೊಳ್ಳಲಿವೆ. ಗ್ರಾಹಕರ ವೆಚ್ಚ ಮತ್ತು ಬೇಡಿಕೆ ಹೆಚ್ಚಳದಿಂದ ಆರ್ಥಿಕತೆ ಸದೃಢ ಸ್ವರೂಪದಲ್ಲಿ ಚೇತರಿಸಿಕೊಳ್ಳುತ್ತದೆ.

W ಆಕಾರದ ಆರ್ಥಿಕತೆಯಲ್ಲಿ – ಅರ್ಥ ವ್ಯವಸ್ಥೆಯ ಮಾನದಂಡಗಳಾದ ಉದ್ಯೋಗ ಅವಕಾಶ, ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಕೈಗಾರಿಕಾ ಉತ್ಪಾದನೆ ಮತ್ತಿತರ ಚಟುವಟಿಕೆಗಳು  ತೀವ್ರ ಸ್ವರೂಪದ  ಏರಿಳಿತ ಕಾಣುತ್ತವೆ. ಗಮನಾರ್ಹ ಕುಸಿತ ಕಾಣುವ ಆರ್ಥಿಕತೆಯು ಅಲ್ಪಾವಧಿಯಲ್ಲಿಯೇ  ಕುಸಿತ ಕಂಡಷ್ಟೇ ವೇಗದಲ್ಲಿ ಚೇತರಿಸಿಕೊಳ್ಳುತ್ತದೆ. ಆದರೆ, ಈ ಪ್ರಕ್ರಿಯೆ ಎರಡು ಬಾರಿ ಘಟಿಸುತ್ತದೆ. ಇದನ್ನು ಎರಡು ಬಾರಿ ಹಿಂಜರಿತದ ಆರ್ಥಿಕತೆ ಎಂದೂ ಕರೆಯುತ್ತಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.