ಶನಿವಾರ, ಜುಲೈ 2, 2022
25 °C

ಹೀರೊ ಮೋಟೊಕಾರ್ಪ್‌ ಅಧ್ಯಕ್ಷ ಪವನ್‌ ಮುಂಜಾಲ್‌ ಕಚೇರಿ, ನಿವಾಸದಲ್ಲಿ ಐ.ಟಿ ಶೋಧ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

 ಹೀರೊ ಮೋಟೊಕಾರ್ಪ್‌ನ ಅಧ್ಯಕ್ಷ ಪವನ್‌ ಮುಂಜಾಲ್‌– ಚಿತ್ರ ಕೃಪೆ: ಹೀರೊ ಮೊಟೊಕಾರ್ಪ್‌ ಟ್ವಿಟರ್‌ ಖಾತೆ

ನವದೆಹಲಿ: ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೊ ಮೋಟೊಕಾರ್ಪ್‌ನ ಅಧಿಕಾರಿಗಳು, ಪ್ರವರ್ತಕ ಪವನ್‌ ಮುಂಜಾಲ್‌ ಅವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ (ಐ.ಟಿ) ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಬುಧವಾರ ಬೆಳಿಗ್ಗೆಯಿಂದಲೇ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪವನ್‌ ಅವರಿಗೆ ಸೇರಿದ ಗುರುಗ್ರಾಮದಲ್ಲಿರುವ ಕಚೇರಿ, ನಿವಾಸ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಐ.ಟಿ ಶೋಧ ಕಾರ್ಯ ನಡೆದಿರುವುದಾಗಿ ವರದಿಯಾಗಿದೆ.

ಹೀರೊ ಮೋಟೊಕಾರ್ಪ್‌ ಸಂಸ್ಥೆಯು ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದ 40 ರಾಷ್ಟ್ರಗಳಲ್ಲಿ ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ಭಾರತದಲ್ಲಿ 6 ತಯಾರಿಕಾ ಘಟಕಗಳು, ಬಾಂಗ್ಲಾದೇಶ ಮತ್ತು ಕೊಲಂಬಿಯಾದಲ್ಲಿ ತಲಾ ಒಂದು ಘಟಕಗಳಲ್ಲಿ ವಾಹನಗಳನ್ನು ತಯಾರಿಸುತ್ತಿದೆ.

ದೇಶದ ಪ್ರಮುಖ ದ್ವಿಚಕ್ರ ವಾಹನ ಕಂಪನಿಯಾಗಿರುವ ಹೀರೊ ಮೋಟೊಕಾರ್ಪ್‌, ಸ್ಥಳೀಯ ಮಾರುಕಟ್ಟೆಯಲ್ಲಿ ಶೇಕಡ 50ರಷ್ಟು ಪಾಲುದಾರಿಕೆಯ ಮೂಲಕ ಪ್ರಾಬಲ್ಯ ಸಾಧಿಸಿದೆ.

ಉತ್ತರ ಭಾರತದ ರಿಯಲ್‌ ಎಸ್ಟೇಟ್‌ ಕಂಪನಿಗೆ ಸೇರಿದ 45 ಸ್ಥಳಗಳಲ್ಲಿ ಇತ್ತೀಚೆಗೆ ಐ.ಟಿ ಇಲಾಖೆ ದಾಳಿ ನಡೆಸಿತ್ತು. ದೆಹಲಿ–ಎನ್‌ಸಿಆರ್‌, ಚಂಡೀಗಡ, ಲೂಧಿಯಾನಾ, ಲಖನೌ ಹಾಗೂ ಇಂದೋರ್‌ನಲ್ಲಿ ಹುಡುಕಾಟ ನಡೆಸಿ, ಲೆಕ್ಕ ತೋರಿಸದ ₹25 ಕೋಟಿ ಹಣ ಮತ್ತು ₹5 ಕೋಟಿ ಮೌಲ್ಯದ ಆಭರಣಗಳನ್ನು ಇಲಾಖೆ ವಶಪಡಿಸಿಕೊಂಡಿತ್ತು. ಅದರ ಬೆನ್ನಲ್ಲೇ ಈ ಶೋಧ ಕಾರ್ಯಾಚರಣೆ ನಡೆದಿರುವುದು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು