ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ರಿಟರ್ನ್ಸ್‌ಗೆ 31ರ ಗಡುವು

Last Updated 16 ಜುಲೈ 2019, 19:30 IST
ಅಕ್ಷರ ಗಾತ್ರ

ಆದಾಯ ತೆರಿಗೆ ಪಾವತಿದಾರರಿಗೆ ಜುಲೈ 31 ಪ್ರತಿ ವರ್ಷದಂತೆ ಈ ಬಾರಿಯೂ ಬಹಳ ಮಹತ್ವದ ದಿನ. ಆರ್ಥಿಕ ವರ್ಷ 2018-19 ಕ್ಕೆ ಸಂಬಂಧಪಟ್ಟಂತೆ ಶುಲ್ಕ ರಹಿತ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದು ಕೊನೆಯ ದಿನ. ಯಾರೆಲ್ಲ ಆದಾಯ ತೆರಿಗೆ ಸಲ್ಲಿಕೆ ವ್ಯಾಪ್ತಿಯೊಳಗೆ ಬರುತ್ತಾರೋ ಅವರೆಲ್ಲ ವಿವಿಧ ಕಾರಣಗಳಿಗಾಗಿ ತಮ್ಮ ಆದಾಯ ತೆರಿಗೆ ಘೋಷಣೆ ಮಾಡುತ್ತಾರೆ. ಕೆಲವರಿಗೆ ಇದು ಕಡಿತಗೊಂಡ ಹೆಚ್ಚುವರಿ ತೆರಿಗೆಯನ್ನು ಶೀಘ್ರವಾಗಿ ಹಿಂದೆಪಡಿಯುವುದಕೋಸ್ಕರವಾದರೆ, ಇನ್ನು ಕೆಲವರಿಗೆ ತಮ್ಮ ಆದಾಯಕ್ಕೆ ಅನುಗುಣವಾಗಿ ಬಾಕಿ ಇರುವ ತೆರಿಗೆ ಹೊರೆಯನ್ನು ಸರ್ಕಾರಕ್ಕೆ ಪಾವತಿಸುವ ಉದ್ದೇಶ ಹೊಂದಿರುತ್ತದೆ. ಅದೇನೇ ಇದ್ದರೂ ಸಕಾಲದಲ್ಲಿ ತೆರಿಗೆದಾರರು ತಮ್ಮ ತೆರಿಗೆ ರಿಟರ್ನ್ಸ್‌ಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಕಾನೂನಿನ ಪಾಲನೆಯ ದೃಷ್ಟಿಯಿಂದಲೂ ಬಹಳ ಅನಿವಾರ್ಯ.

ಈ ಬಾರಿಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಮೊದಲು, ಆದಾಯ ತೆರಿಗೆ ಕಾನೂನಿನಡಿ ಅನ್ವಯವಾಗುವ ಕೆಲವು ಪ್ರಮುಖ ನಿಯಮಗಳನ್ನು ಗಮನಿಸುವುದು ಸೂಕ್ತ. ತಮ್ಮ ಆದಾಯಕ್ಕೆ ಅನುಗುಣವಾಗಿ ಕೇವಲ ತೆರಿಗೆ ದರ ಮಾತ್ರ ವೃದ್ಧಿಯಾಗುವುದಲ್ಲದೆ, ನಿಗದಿತ ದಿನಾಂಕದೊಳಗೆ ರಿಟರ್ನ್ಸ್ ಸಲ್ಲಿಸದಿದ್ದ ಸಂದರ್ಭಗಳಲ್ಲಿ ಪಾವತಿಸಬೇಕಾದ ಶುಲ್ಕದ ಮೊತ್ತವೂ ಅಧಿಕಗೊಳ್ಳುತ್ತಾ ಹೋಗುತ್ತದೆ. ಹೀಗಾಗಿ ಆರ್ಥಿಕ ವರ್ಷ ಕೊನೆಗೊಂಡ ಮೊದಲ ನಾಲ್ಕು ತಿಂಗಳೊಳಗೆ, ಅಂದರೆ ಜುಲೈ 31 ರೊಳಗೆ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅನುಕೂಲವಾಗದವರು ಈ ಕೆಳಗೆ ಉಲ್ಲೇಖಿಸಿದ ದಿನಾಂಕದೊಳಗೂ ’ವಿಳಂಬಿತ ರಿಟರ್ನ್ಸ್’ ಸಲ್ಲಿಸುವ ಅವಕಾಶವನ್ನು ಕಾನೂನಿನನ್ವಯ ಮಾಡಿಕೊಡಲಾಗಿದೆ. ಆದರೆ, ಇದಕ್ಕೆ ನಿಗದಿತ ಶುಲ್ಕ ಭರಿಸಬೇಕಾಗುತ್ತದೆ. ಜತೆಗೆ, ಆದಾಯ ತೆರಿಗೆ ಕಾನೂನಿನ ನಿಯಮ ’234ಎ’ ಯ ಪ್ರಕಾರ ಅವಧಿ ಮೀರಿ ಸಲ್ಲಿಸುವ ತೆರಿಗೆ ರಿಟರ್ನ್ಸ್‌ ಗಳ ಮೇಲೆ ತಿಂಗಳಿಗೆ ಶೇ 1 ರ ಬಡ್ಡಿಯನ್ನೂ ತೆರಬೇಕಾಗುತ್ತದೆ. ‌

ಆರ್ಥಿಕ ವರ್ಷ ಕೊನೆಗೊಂಡು ಮುಂದಿನ ಒಂದು ವರ್ಷದೊಳಗೆ ತಡವಾಗಿಯಾದರೂ ರಿಟರ್ನ್ಸ್ ಸಲ್ಲಿಸುವ ಅವಕಾಶ ಇರುತ್ತದೆ. ಉದಾಹರಣೆಗೆ, ಆರ್ಥಿಕ ವರ್ಷ 2018-19 ಕ್ಕೆ ಸಂಬಂಧಿಸಿದಂತೆ ಮಾರ್ಚ್ 31, 2020 ರ ತನಕ ಸಮಯಾವಕಾಶವಿದೆ. ಈ ಅವಧಿಯೂ ಮೀರಿ ಹೋದರೆ ಮುಂದೆ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ರಿಟರ್ನ್ಸ್ ಸಲ್ಲಿಸದ ಬಗ್ಗೆ ನೋಟಿಸ್ ಜಾರಿ ಮಾಡಿದ ಮೇಲಷ್ಟೇ ಕ್ರಮ ಕೈಗೊಳ್ಳಲು ಸಾಧ್ಯ.

ಮುಂಗಡ ತೆರಿಗೆ ಮತ್ತು ಟಿಡಿಎಸ್

ತೆರಿಗೆ ಪಾವತಿದಾರರಿಗೆ ಸಂಬಂಧಪಟ್ಟಂತೆ, ವಾರ್ಷಿಕ ಆದಾಯದ ಮೇಲೂ ಮುಂಗಡ ತೆರಿಗೆ ಪಾವತಿ ಅನಿವಾರ್ಯ. ಆರ್ಥಿಕ ವರ್ಷದ ಅವಧಿಯಲ್ಲಿ ನಿಮ್ಮ ಕಂಪನಿ ವೇತನ ಪಾವತಿಸುವಾಗ ಸರಿಯಾದ ಲೆಕ್ಕಹಾಕಿ ತೆರಿಗೆಯನ್ನೇನೊ ಕಡಿತಗೊಳಿಸಿರಬಹುದು. ಆದರೆ ನಿಮಗೆ ಅನ್ಯ ಮೂಲಗಳಿಂದ ಬರುವ ಎಲ್ಲಾ ಆದಾಯಗಳಿಗೆ ಸಮರ್ಪಕ ತೆರಿಗೆ ಕಡಿತವಾಗಿರುವ ಸಾಧ್ಯತೆ ಇರುವುದಿಲ್ಲ. ವಿವಿಧ ಆದಾಯ ವರ್ಗದ ತೆರಿಗೆ ಪಾವತಿದಾರರಿಗೆ, ಶೇಕಡಾ 5 ರಿಂದ 30 ರೊಳಗಿನ ಯಾವುದೇ ತೆರಿಗೆ ದರ ಅನ್ವಯವಾಗಬಹುದು. ಅಷ್ಟೇ ಅಲ್ಲದೆ, ಇದರ ಮೇಲೆ ಶೇಕಡಾ 4 ರ ಸೆಸ್ ಕೂಡಾ ಅನ್ವಯವಾಗುತ್ತದೆ. ಇದನ್ನು ತೆರಿಗೆ ಕಡಿತಗೊಳಿಸುವ ಸಂದರ್ಭದಲ್ಲಿ ಪರಿಗಣಿಸುವ ಅಗತ್ಯವಿರುವುದಿಲ್ಲ.

ಹೀಗಾಗಿ ಆಯಾ ವರ್ಷಕ್ಕೆ ಸಂಬಂಧಿಸಿದಂತೆ ಪಾವತಿಸಬೇಕಾದ ಒಟ್ಟು ತೆರಿಗೆ ಹಾಗೂ ಟಿಡಿಎಸ್ ಇತ್ಯಾದಿಗಳನ್ನು ಹೊಂದಿಸಿ ಇನ್ನೂ ಹೆಚ್ಚುವರಿ ತೆರಿಗೆ ಪಾವತಿಸಬೇಕಾದ ಸಂದರ್ಭವೂ ಇರಬಹುದು. ಇಂತಹ ಬಾಕಿ ಮೊತ್ತ ₹ 10,000 ಕ್ಕೂ ಅಧಿಕವಿದ್ದರೆ, ಆದಾಯ ತೆರಿಗೆ ನಿಯಮ ‘234ಬಿ’ ಹಾಗೂ ‘234ಸಿ’ಯಡಿ ತಿಂಗಳಿಗೆ ಶೇಕಡಾ 1 ರ ದರದಲ್ಲಿ ಬಡ್ಡಿಯನ್ನೂ ಭರಿಸಬೇಕಾಗುತ್ತದೆ. ಎಲ್ಲದಕ್ಕಿಂತ ಪ್ರಮುಖವಾಗಿ ವೈದ್ಯಕೀಯ ವೃತ್ತಿಯಲ್ಲಿದ್ದವರಿಗೆ, ಯಾವುದೇ ವ್ಯಾಪಾರದಲ್ಲಿ ತೊಡಗಿರುವವರಿಗೆ , ಸ್ವಂತ ವೃತ್ತಿಯವರಿಗೆ ಆಯಾ ಅವಧಿಗೆ ಸಂಬಂಧಿಸಿದಂತೆ ಮುಂಗಡ ತೆರಿಗೆ ಪಾವತಿಯ ಬಗ್ಗೆ ಹೆಚ್ಚು ಗಮನವಿರಬೇಕು. ಆದರೆ 60 ವರ್ಷಕ್ಕೂ ಮೇಲ್ಪಟ್ಟ ತೆರಿಗೆದಾರರು ವ್ಯವಹಾರ ಮತ್ತು ಸ್ವಂತ ವೃತ್ತಿಯನ್ನು ಹೊಂದಿರದಿದ್ದರೆ, ಅವರಿಗೆ ಮುಂಗಡ ತೆರಿಗೆ ಪಾವತಿಸುವುದರಿಂದ ವಿನಾಯ್ತಿ ಇದೆ.

ಆರ್ಥಿಕ ವರ್ಷ 2018-19 ಕ್ಕೆ ಸಂಬಂಧಪಟ್ಟಂತೆ ಈಗ ಮುಂಗಡ ತೆರಿಗೆ ಪಾವತಿಯ ಎಲ್ಲ ನಿಗದಿತ ದಿನಾಂಕಗಳು ಮೀರಿದ್ದರೂ, ಪ್ರಸ್ತುತ ವರ್ಷಕ್ಕೆ ತೆರಿಗೆ ಪಾವತಿದಾರರು ಸೂಕ್ತ ನಿರ್ಧಾರ ಕೈಗೊಳ್ಳಲು ಇದು ನೆರವಾಗಬಹುದು. ಇದರಿಂದ ಮುಂದೆ ಪಾವತಿಸಬೇಕಾಗುವ ಬಡ್ಡಿ ಹೊರೆ ತಗ್ಗಿಸಬಹುದು.

ಮೊದಲ ಬಾರಿಗೆ

ಮೊದಲ ಬಾರಿ ರಿಟರ್ನ್ಸ್ ಸಲ್ಲಿಸುವವರು ಕೆಲವು ಅಗತ್ಯ ಮಾಹಿತಿಗಳನ್ನು ತಮ್ಮಲ್ಲಿ ಸಂಗ್ರಹಿಸಿಡಬೇಕು. ಮೊದಲಾಗಿ ತಮ್ಮ ಪ್ಯಾನ್ ಕಾರ್ಡ್ ಮಾಹಿತಿ, ನಿಮ್ಮೆಲ್ಲಾ ಬ್ಯಾಂಕ್ ಅಕೌಂಟ್ ಮಾಹಿತಿ, ದಾಖಲಿಸಬೇಕಾದ ನಿಮ್ಮ ಈ ಮೈಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ವಿವರಗಳು ಅಗತ್ಯ. ತದನಂತರ, ಆದಾಯ ತೆರಿಗೆ ಇಲಾಖೆಯ ಅಂತರ್ಜಾಲದಲ್ಲಿ ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ ಅಗತ್ಯ ವಿವರಗಳೊಂದಿಗೆ ಮೊದಲ ಬಾರಿ ದಾಖಲಿಸಬೇಕು.

ನೀವು ದಾಖಲಿಸಿದ ಪಾಸ್‍ವರ್ಡ ಮಾಹಿತಿಯನ್ನು ಗೌಪ್ಯವಾಗಿಡಿ. ಇದು ಸ್ವತಃ ನೀವೇ ರಿಟರ್ನ್ಸ್ ಸಲ್ಲಿಸುವುದಿದ್ದರೆ ಅಥವಾ ಅನ್ಯರ ನೆರವು ಪಡೆದು ಸಲ್ಲಿಸುವುದಿದ್ದರೂ ಅಗತ್ಯ. ಮುಂದಿನ ಯಾವುದೇ ರೀತಿಯ ತೆರಿಗೆ ಸಂಬಂಧಿತ ವಿವರಗಳನ್ನು ನೋಡಲು ಅಥವಾ ತೆರಿಗೆ ಇಲಾಖೆಯಿಂದ ಬರುವ ನೋಟಿಸ್‍ಗಳಿಗೆ ಸಂಬಂಧಿಸಿದಂತೆ ಉತ್ತರಿಸಲು ನಿಮ್ಮ ಪ್ಯಾನ್ ಲಾಗಿನ್ ಮತ್ತು ಪಾಸ್‍ವರ್ಡ್ ಬಳಸಿ ಆನ್‍ಲೈನ್ ಮೂಲಕವೇ ಇತ್ಯರ್ಥಗೊಳಿಸಲು ಸಾಧ್ಯ.

ಗಮನದಲ್ಲಿ ಇಡಬೇಕಾದ ಸಂಗತಿಗಳು

ತೆರಿಗೆ ರಿಟರ್ನ್ಸ ಸಲ್ಲಿಸುವ ಮೊದಲು ನಿಮ್ಮ ಆದಾಯಕ್ಕೆ ಅನುಗುಣವಾಗಿ ಫಾರಂಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಐಟಿಆರ್ 1,2,3,4 ಇವುಗಳಲ್ಲಿ ವಿವಿಧ ಮೂಲದ ಆದಾಯಗಳಿಗೆ ಅನುಗುಣವಾಗಿ ಆನ್‍ಲೈನ್ ಮೂಲಕ ಫಾರಂ ಭರ್ತಿ ಮಾಡಬೇಕು. ತೆರಿಗೆ ಫಾರಂ ಭರ್ತಿ ಮಾಡುವ ಮೊದಲು ನಿಮ್ಮ ಪ್ಯಾನ್ ಖಾತೆಯಲ್ಲಿ ನಿಮ್ಮ ಆದಾಯದ ಮೇಲೆ ಕಡಿತಗೊಂಡಿರುವ ಮೊತ್ತ ಸರಿಯಾಗಿ ಕಂಡುಬಂದಿದೆಯೇ ಎಂಬುದನ್ನು ’26ಎಎಸ್’ ನೋಡಿ ಖಚಿತಪಡಿಸಿಕೊಳ್ಳಿ. ಇದು ಆದಾಯ ತೆರಿಗೆ ಇಲಾಖೆಯ ಅಂತರ್ಜಾಲದಲ್ಲೇ ಲಭ್ಯವಿರುತ್ತದೆ. ಇಲ್ಲಿರುವ ಆದಾಯ ಸರಿಯಾಗಿದೆ ಎಂಬುದನ್ನು ಖಾತರಿ ಮಾಡಿದ ಅನಂತರ, ಇನ್ನೂ ಸೇರ್ಪಡೆಯಾಗದ ಅಥವಾ ಟಿಡಿಎಸ್‍ಗೆ ಒಳಪಡದ ಹೆಚ್ಚುವರಿ ಆದಾಯವಿದ್ದರೆ ಅದನ್ನೂ ಸೇರಿಸಿ ರಿಟರ್ನ್ಸ್‍ನಲ್ಲಿ ಘೋಷಿಸಬೇಕಾಗುತ್ತದೆ.

ಫಾರಂ ತುಂಬಿ ರಿಟರ್ನ್ಸ್ ಸಲ್ಲಿಕೆ ಮಾಡಲು ಮೊಬೈಲ್ ಒಟಿಪಿ ಅಥವಾ ನಿಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಆಗುವ ಅಗತ್ಯವಿರುತ್ತದೆ. ಇದಕ್ಕೆಲ್ಲ ನಿಮ್ಮ ಆಧಾರ್ ಕೂಡಾ ಜೋಡಣೆಯಾಗಿರಬೇಕು. ರಿಟರ್ನ್ಸ್ ಸಲ್ಲಿಕೆಗೆ ಪ್ರತಿಯಾಗಿ ’ಐಟಿಆರ್ 5’ ಆನ್‍ಲೈನ್‍ನಲ್ಲಿ ದಾಖಲೆಯ ರೂಪದಲ್ಲಿ ನಿಮಗೆ ಲಭ್ಯವಿರುತ್ತದೆ. ಯಾವುದೇ ಸಂದರ್ಭದಲ್ಲೂ ಇದನ್ನು ದಾಖಲೆಯಾಗಿ ಬಳಸಬಹುದು. ಒಂದು ವೇಳೆ ಒಟಿಪಿ ಆಧಾರಿತ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ , ’ಐಟಿಆರ್ 5’ ನ್ನು ಸಹಿ ಮಾಡಿ ಮುದ್ರಿತ ಪ್ರತಿಯನ್ನು ಆದಾಯ ತೆರಿಗೆ ಇಲಾಖೆಗೆ 120 ದಿನದೊಳಗೆ ಸಲ್ಲಿಸುವ ಅವಕಾಶ ಇರುತ್ತದೆ.

ನಿಮಗೆ ಅನ್ವಯವಾಗುವ ಫಾರಂ ಆಯ್ಕೆ ಮಾಡುವ ಅಥವಾ ಅದರಲ್ಲಿ ಕೇಳುವ ಮಾಹಿತಿ ತುಂಬುವಷ್ಟು ತೆರಿಗೆ ಬಗ್ಗೆ ಅರಿವಿದ್ದರೆ ನೀವೇ ಭರ್ತಿ ಮಾಡಬಹುದು. ಇದು ತುಸು ಕಷ್ಟವೆಂದು ಕಂಡುಬಂದರೆ, ತೆರಿಗೆ ಸಲಹೆದಾರರನ್ನು ಅಥವಾ ನಿಮ್ಮ ಲೆಕ್ಕಪತ್ರ ಪರಿಶೋಧಕರ ಮಾರ್ಗದರ್ಶನವನ್ನೂ ಪಡೆಯಬಹುದು.

ಯಾರೆಲ್ಲ ವಾರ್ಷಿಕವಾಗಿ ₹ 1 ಕೋಟಿಗೂ ಅಧಿಕ ವ್ಯಾಪಾರ-ವ್ಯವಹಾರದಿಂದ ಆದಾಯ ಗಳಿಸುತ್ತಾರೋ, ವೃತ್ತಿ ಮೂಲಗಳಿಂದ ₹ 50 ಲಕ್ಷಗಳಿಗೂ ಅಧಿಕ ಆದಾಯಗಳಿಸುತ್ತಾರೋ ಅವರು ಲೆಕ್ಕ ತಪಾಸಣೆ ಮಾಡಿಸಬೇಕು. ಅದಕ್ಕೆ ಸೆಪ್ಟೆಂಬರ್ 30ರ ತನಕ ಕಾಲಾವಕಾಶವಿದೆ. ಹಾಗಾಗಿ ಲೆಕ್ಕಪತ್ರ ತಪಾಸಣಾ ವ್ಯಾಪ್ತಿಗೊಳಪಡದವರು ಜುಲೈ 31ರೊಳಗೆ ರಿರ್ಟರ್ನ್ಸ್ ಸಲ್ಲಿಸುವುದು ಅಗತ್ಯ.

ರಿಟರ್ನ್ಸ್‌ ಸಲ್ಲಿಕೆಗೆ ಯಾರು ಅರ್ಹರು?

ಯಾರೆಲ್ಲ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು ಎನ್ನುವ ಪ್ರಶ್ನೆ ಹಲವರನ್ನು ಕಾಡಬಹುದು. ನಮ್ಮ ಆದಾಯ ₹ 2.5 ಲಕ್ಷಕ್ಕಿಂತ ಕಡಿಮೆ ಇದೆ. ತೆರಿಗೆಯೂ ಕಡಿತಗೊಂಡಿದೆ. ನಿಯಮ ’80ಸಿ’ಯಡಿ ನಮ್ಮ ಹೂಡಿಕೆ ಇತ್ಯಾದಿ ಕಳೆದ ಮೇಲೆ ಗರಿಷ್ಠ ವಿನಾಯ್ತಿ ಮೊತ್ತಕ್ಕಿಂತ ಆದಾಯ ಕಡಿಮೆ ಇದೆ, ಆದರೂ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅನಿವಾರ್ಯತೆ ಇದೆಯೇ– ಎನ್ನುವುದು ಬಹುತೇಕ ಮಂದಿಯ ಸಂದೇಹ.

ನೀವು 60 ವರ್ಷದೊಳಗಿನವರಾಗಿದ್ದು, ನಿಯಮ ’80ಸಿ’ ಯಿಂದ ’80ಯು’ ತನಕ ಲಭ್ಯವಿರುವ ವಿನಾಯ್ತಿಗಳನ್ನು ಪಡೆಯುವ ಮುನ್ನ ನಿಮ್ಮ ’ಒಟ್ಟು ಆದಾಯ’ ವಾರ್ಷಿಕವಾಗಿ ₹ 2.5 ಲಕ್ಷಗಳಿಗೂ ಮೀರಿದ್ದರೆ, ಯಾವುದೇ ವ್ಯಕ್ತಿ ನಿಯಮ 139 ರ ಅನ್ವಯ ಯಾವುದೇ ವ್ಯಕ್ತಿ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅನಿವಾರ್ಯ. ವಯಸ್ಸು 60 ದಾಟಿದ್ದು, ಆದಾಯ ₹ 3 ಲಕ್ಷಕ್ಕೂ ಮೀರಿದ್ದರೆ ಹಾಗೂ ವಯಸ್ಸು 80 ದಾಟಿದ್ದವರಿಗೆ ಇದೇ ಆದಾಯ ಮಿತಿ ₹ 5 ಲಕ್ಷ ಆಗಿರುತ್ತದೆ. ಈ ಹಂತದ ಆದಾಯಕ್ಕೂ ಮೇಲ್ಪಟ್ಟು ಒಟ್ಟು ಆದಾಯಗಳಿಸುವವರು, ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು.

ತೆರಿಗೆ ರಿಟರ್ನ್ಸ್ ಕಾನೂನಿನನ್ವಯ ಸಲ್ಲಿಸುವುದು ಒಂದು ದೃಷ್ಟಿಯಲ್ಲಿ ಅನಿವಾರ್ಯವಾದರೂ, ಇನ್ನು ಕೆಲವು ಸಂದರ್ಭಗಳಲ್ಲಿ ಈ ಮಿತಿಗಿಂತ ಕೆಳಗೆ ಆದಾಯವಿದ್ದಾಗಲೂ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ಕೆಲವು ಪ್ರಯೋಜನಗಳಿವೆ. ನೀವು ಯಾವುದೇ ಬ್ಯಾಂಕ್ ಸಾಲಕ್ಕೆ ಮೊರೆ ಹೋಗಬೇಕಾದಾಗ, ನಿಮ್ಮ ವಿದೇಶಿ ವಿಸಾ ಪಡೆಯುವ ಸಂದರ್ಭದಲ್ಲಿ ಇದು ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT