₹ 9 ಲಕ್ಷ ಆದಾಯ ಇದ್ದರೂ ತೆರಿಗೆ ವಿನಾಯ್ತಿ ಸಾಧ್ಯ: ರೆವಿನ್ಯೂ ಕಾರ್ಯದರ್ಶಿ ಅಜಯ್‌

7

₹ 9 ಲಕ್ಷ ಆದಾಯ ಇದ್ದರೂ ತೆರಿಗೆ ವಿನಾಯ್ತಿ ಸಾಧ್ಯ: ರೆವಿನ್ಯೂ ಕಾರ್ಯದರ್ಶಿ ಅಜಯ್‌

Published:
Updated:
Prajavani

ನವದೆಹಲಿ: ‘ವರ್ಷಕ್ಕೆ ₹ 8 ಲಕ್ಷದಿಂದ ₹ 9 ಲಕ್ಷದವರೆಗೆ ಆದಾಯ ಹೊಂದಿರುವವರು ಭವಿಷ್ಯ ನಿಧಿ, ಜೀವ ವಿಮೆ, ಪಿಂಚಣಿ ಯೋಜನೆಗಳಲ್ಲಿ ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಮತ್ತು ಗೃಹ ಸಾಲ ಪಡೆದುಕೊಂಡಿದ್ದರೆ ಆದಾಯ ತೆರಿಗೆಯಿಂದ ಪಾರಾಗಬಹುದು’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

‘ಮಧ್ಯಂತರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವಂತೆ ₹ 5 ಲಕ್ಷದವರೆಗೆ ವಾರ್ಷಿಕ ಆದಾಯ ಇರುವವರು ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಇದಕ್ಕಿಂತಲೂ ಹೆಚ್ಚಿನ ಆದಾಯ ಹೊಂದಿರುವವರು ಸಹ ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ ‘80ಸಿ’ನಡಿ  ಹೂಡಿಕೆ ಮಾಡಿದರೆ, ಶಿಕ್ಷಣ ಇಲ್ಲವೆ ಗೃಹ ಸಾಲದ ಬಡ್ಡಿ ಪಾವತಿಸಿದರೆ, ಗಂಭೀರ ಸ್ವರೂಪದ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚ ಮಾಡಿದರೆ, ಅವರ ತೆರಿಗೆಗೆ ಒಳಪಡುವ ಆದಾಯ ₹ 5 ಲಕ್ಷಕ್ಕಿಂತ ಕಡಿಮೆಯಾಗಲಿದೆ. ಇದರಿಂದಾಗಿ ₹ 8 ಲಕ್ಷದಿಂದ ₹ 9 ಲಕ್ಷದವರೆಗೆ ಆದಾಯ ಹೊಂದಿದ್ದರೂ ವಿನಾಯ್ತಿ ಪಡೆಯಬಹುದು’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಸೆಕ್ಷನ್‌ 80ಸಿ ನಲ್ಲಿ ಪಿಪಿಎಫ್‌, ಜೀವ ವಿಮೆ, ಟ್ಯೂಷನ್‌ ಶುಲ್ಕ, ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಐದು ವರ್ಷಗಳ ಅವಧಿ ಠೇವಣಿಯನ್ನೂ ಒಳಗೊಂಡು ಒಂದು ವರ್ಷದಲ್ಲಿ ₹ 1.5 ಲಕ್ಷದವರೆಗಿನ ಮೊತ್ತಕ್ಕೆ ತೆರಿಗೆ ವಿನಾಯ್ತಿ ಸಿಗಲಿದೆ.

ಗೃಹ ಸಾಲದ ಮೇಲಿನ ಬಡ್ಡಿದರಕ್ಕೆ ₹ 2ಲಕ್ಷದವರೆಗೆ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ₹ 50 ಸಾವಿರ ಹಾಗೂ ವೈದ್ಯಕೀಯ ವಿಮೆ ಪ್ರೀಮಿಯಂನಲ್ಲಿ ₹ 75 ಸಾವಿರದವರೆಗೆ ತೆರಿಗೆ ಉಳಿತಾಯ ಮಾಡಬಹುದು.

ವೇತನ ವರ್ಗದವರಿಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹ 40 ಸಾವಿರದಿಂದ ₹ 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರ ಪ್ರಯೋಜನವನ್ನೂ ಪಡೆದುಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !