ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ರೆಂಡ್‌ಶೋರಿಂಗ್’ ಮಂತ್ರ ಪಠಿಸಿದ ಅಮೆರಿಕ

ಪೂರೈಕೆ ವ್ಯವಸ್ಥೆಯಲ್ಲಿ ಚೀನಾದ ಪಾಲು ತಗ್ಗಿಸಲು ತಂತ್ರ
Last Updated 11 ನವೆಂಬರ್ 2022, 19:32 IST
ಅಕ್ಷರ ಗಾತ್ರ

ನವದೆಹಲಿ: ಸಮಾನ ಮೌಲ್ಯಗಳನ್ನು ಪ್ರತಿಪಾದಿಸುವ ದೇಶಗಳ ನಡುವೆ ವಾಣಿಜ್ಯ ವಹಿವಾಟು ಹಾಗೂ ಹೂಡಿಕೆಗಳು ಆಗಬೇಕು ಎಂಬ ಕಾರ್ಯತಂತ್ರವನ್ನು ಅಮೆರಿಕದ ಹಣಕಾಸು ಸಚಿವೆ ಜಾನೆಟ್ ಯೆಲನ್ ಅವರು ಪ್ರತಿಪಾದಿಸಿದ್ದಾರೆ.

ಯೆಲನ್ ಅವರು ಸಚಿವೆಯಾದ ನಂತರದಲ್ಲಿ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರು ಈ ಕಾರ್ಯತಂತ್ರವನ್ನು ಭಾರತದ ಮುಂದಿರಿಸಿರುವುದು ಚೀನಾದ ಮಹತ್ವವನ್ನು ತಗ್ಗಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

ಕೋವಿಡ್‌ ಸಾಂಕ್ರಾಮಿಕದ ನಂತರದಲ್ಲಿ ವಿಶ್ವದ ವಾಣಿಜ್ಯ ವಹಿವಾಟು ಮತ್ತು ಆರ್ಥಿಕ ನಕ್ಷೆ ಬದಲಾಗಿದೆ. ಅಮೆರಿಕದ ಬೈಡನ್ ಆಡಳಿತವು, ಕಚ್ಚಾ ವಸ್ತುಗಳ ಕೊಡು–ಕೊಳ್ಳುವಿಕೆಯು ಸಮಾನ ಮನಸ್ಕ ದೇಶಗಳ ನಡುವೆ ಆಗಬೇಕು, ತಯಾರಿಕೆಯೂ ಈ ದೇಶಗಳ ನಡುವೆ ಇರಬೇಕು ಎಂಬ ನೀತಿಯನ್ನು ಮುಂದಕ್ಕೆ ತಂದಿದೆ. ಈ ನೀತಿಯನ್ನು ಅಮೆರಿಕವು ‘ಫ್ರೆಂಡ್‌ಶೋರಿಂಗ್’ ಎಂದು ಕರೆದಿದೆ.

ಮೈಕ್ರೊಸಾಫ್ಟ್ ಕಂಪನಿಯ ಘಟಕದಲ್ಲಿ ಮಾತನಾಡಿದ ಯೆಲನ್ ಅವರು, ‘ಅಮೆರಿಕ ಮತ್ತು ಭಾರತ ಸಹಜ ಸ್ನೇಹಿತರು. ಅಸ್ಥಿರತೆ ಹಾಗೂ ಯುದ್ಧದ ಸನ್ನಿವೇಶ ಇದ್ದರೂ ಪ್ರಜಾತಂತ್ರ ವ್ಯವಸ್ಥೆಗಳು ತಮ್ಮ ಪ್ರಜೆಗಳ ಅಗತ್ಯಕ್ಕೆ ಸ್ಪಂದಿಸಬಲ್ಲವು ಎಂಬುದನ್ನು ಅಮೆರಿಕ ಮತ್ತು ಭಾರತ ಜಗತ್ತಿಗೆ ತೋರಿಸಿಕೊಡಬಲ್ಲವು’ ಎಂದರು.

ಕೆಲವು ಸರ್ಕಾರಗಳು ವ್ಯಾಪಾರವನ್ನು ಜಾಗತಿಕ ರಾಜಕಾರಣದ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವಲ್ಲಿ ಅಮೆರಿಕ ಮತ್ತು ಭಾರತದ ಹಿತಾಸಕ್ತಿಗಳು ಇವೆ ಎಂದೂ ಯೆಲನ್ ಹೇಳಿದರು.

‘ಆಫ್‌ಶೋರಿಂಗ್’ನಿಂದ ‘ಫ್ರೆಂಡ್‌ಶೋರಿಂಗ್’ ಕಡೆಗೆ
ಪಶ್ಚಿಮದ ಹಲವು ದೇಶಗಳು ವೆಚ್ಚ ತಗ್ಗಿಸಲು ತಯಾರಿಕೆ ಹಾಗೂ ಇತರ ಕೆಲವು ಕೆಲಸಗಳನ್ನು ಕಡಿಮೆ ವೆಚ್ಚಕ್ಕೆ ಕಾರ್ಮಿಕರು ಸಿಗುವ ಬೇರೆ ದೇಶಗಳಿಗೆ ವರ್ಗಾವಣೆ ಮಾಡಿದ್ದವು. ಇದನ್ನು ಅವು ‘ಆಫ್‌ಶೋರಿಂಗ್‌’ ಎಂದು ಕರೆದಿದ್ದವು.

ಆದರೆ, ಸಾಂಕ್ರಾಮಿಕದ ನಂತರದಲ್ಲಿ ಪೂರೈಕೆ ವ್ಯವಸ್ಥೆಯಲ್ಲಿ ಆದ ಅಡಚಣೆಗಳ ಕಾರಣದಿಂದಾಗಿ ಅವು ಉತ್ಪಾದನಾ ಚಟುವಟಿಕೆಗಳನ್ನು ಮತ್ತೆ ತಮ್ಮ ದೇಶಕ್ಕೆ ತರಲು ಉತ್ಸುಕವಾಗಿವೆ.

ಅಮೆರಿಕದಂತಹ ದೇಶಗಳು ಎಲ್ಲವನ್ನೂ ತಾವೇ ತಯಾರಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅಮೆರಿಕವು ಈಗ ಪೂರೈಕೆ ವ್ಯವಸ್ಥೆಯನ್ನು ಕಟ್ಟಲು ಪಾಲುದಾರರನ್ನು ಹುಡುಕುತ್ತಿದೆ. ಇದನ್ನು ಅಮೆರಿಕವು ‘ಫ್ರೆಂಡ್‌ಶೋರಿಂಗ್’ ಎಂದು ಕರೆದಿದೆ.

‘ಫ್ರೆಂಡ್‌ಶೋರಿಂಗ್‌ ವ್ಯವಸ್ಥೆಯು ಕೆಲವು ದೇಶಗಳು ಮಾತ್ರ ಇರುವ ಗುಂಪಿಗೆ ಸೀಮಿತವಾಗುವುದಿಲ್ಲ. ನಾವು ಹಲವು ನಂಬಿಕಸ್ಥ ದೇಶಗಳನ್ನು ಜೊತೆಗೂಡಿಸಿಕೊಳ್ಳಬೇಕು. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹಾಗೂ ಮುಂದುವರಿದ ದೇಶಗಳು ಇದರಲ್ಲಿ ಇರುತ್ತವೆ’ ಎಂದು ಯೆಲನ್ ಹೇಳಿದರು.

‘ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದು, ಅಲ್ಲಿ ಸ್ಥಳೀಯ ಉದ್ಯಮಗಳನ್ನು ಬೆಳೆಸುವುದು ಮತ್ತು ಅವು ಜಾಗತಿಕ ಪೂರೈಕೆ ವ್ಯವಸ್ಥೆಯ ಭಾಗವಾಗುವಂತೆ ಮಾಡುವುದು ಫ್ರೆಂಡ್‌ಶೋರ್ ನೀತಿಯ ಭಾಗ’ ಎಂದು ಅವರು ತಿಳಿಸಿದರು.

ತಮಿಳುನಾಡಿನ ಸೌರಫಲಕ ತಯಾರಿಕಾ ಘಟಕವು, ಪೂರೈಕೆ ವ್ಯವಸ್ಥೆಯನ್ನು ಚೀನಾದ ಆಚೆಗೂ ವಿಸ್ತರಿಸಲು ನೆರವಾಗಲಿದೆ ಎಂದರು. ಈಗ ಜಾಗತಿಕ ಸೌರಫಲಕ ಉತ್ಪಾದನೆಯಲ್ಲಿ ಚೀನಾ ಶೇ 80ರಷ್ಟು ಪಾಲು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT