ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆದರ್ಲೆಂಡ್‌ ತಲುಪಿದ ಬಾಳೆಹಣ್ಣು: ಸಮುದ್ರ ಮೂಲಕ ಪ್ರಾಯೋಗಿಕ ರಫ್ತು ಯಶಸ್ವಿ

Published 27 ಡಿಸೆಂಬರ್ 2023, 15:23 IST
Last Updated 27 ಡಿಸೆಂಬರ್ 2023, 15:23 IST
ಅಕ್ಷರ ಗಾತ್ರ

ನವದೆಹಲಿ: ಸಮುದ್ರ ಮಾರ್ಗದ ಮೂಲಕ ನೆದರ್ಲೆಂಡ್‌ಗೆ ಪ್ರಾಯೋಗಿಕವಾಗಿ ಬಾಳೆಹಣ್ಣು ರಫ್ತು ವಹಿವಾಟು ಯಶಸ್ವಿಯಾದ ಬೆನ್ನಲ್ಲೇ  ಮಾವಿನ ಹಣ್ಣು, ದಾಳಿಂಬೆ ಹಾಗೂ ಹಲಸಿನ ಹಣ್ಣಿನ ರಫ್ತಿಗೂ ಉತ್ತೇಜನ ನೀಡಲು ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ಧರಿಸಿದೆ.

ಹಣ್ಣುಗಳ ಮಾಗುವ ಅವಧಿಗೆ ಅನುಗುಣವಾಗಿ ಸಣ್ಣ ಪ್ರಮಾಣದಲ್ಲಿ ವಿಮಾನಗಳ ಮೂಲಕ ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಈಗ ಸಮುದ್ರ ಮಾರ್ಗದ ಮೂಲಕ ಬಾಳೆಹಣ್ಣು ರವಾನೆಯಾಗಿದೆ. ಹಾಗಾಗಿ, ಮುಂದಿನ ಐದು ವರ್ಷಗಳಲ್ಲಿ ತಾಜಾ ಬಾಳೆಹಣ್ಣಿನ ರಫ್ತು ವಹಿವಾಟನ್ನು ₹8,300 ಕೋಟಿಗೆ ಹೆಚ್ಚಿಸಲು ಸಚಿವಾಲಯ ತೀರ್ಮಾನಿಸಿದೆ.

ಹಂತ ಹಂತವಾಗಿ ಸಮುದ್ರ ಮಾರ್ಗದ ಮೂಲಕ ಈ ಹಣ್ಣುಗಳ ರಫ್ತು ಪ್ರಮಾಣ ಹೆಚ್ಚಿಸಲಾಗುತ್ತದೆ. ಜಲ ಮಾರ್ಗದ ಅವಧಿ, ಹಣ್ಣುಗಳ ಕೊಯ್ಲು, ಅವುಗಳನ್ನು ವೈಜ್ಞಾನಿಕವಾಗಿ ಮಾಗಿಸುವಿಕೆಗೆ ಸಂಬಂಧಿಸಿದಂತೆ ರೈತರಿಗೆ ತರಬೇತಿಯನ್ನೂ ನೀಡಲಾಗುತ್ತದೆ ಎಂದು ಹೇಳಿದೆ.

ಸಚಿವಾಲಯದ ಅಂಗಸಂಸ್ಥೆಯಾದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎಪಿಇಡಿಎ) ಬಾಳೆಹಣ್ಣು ಸೇರಿದಂತೆ ಇತರೆ ಹಣ್ಣುಗಳ ರಫ್ತು ಸಂಬಂಧ ನಿಯಮಾವಳಿಗಳನ್ನು ರೂಪಿಸಲಿದೆ. 

ಮಹಾರಾಷ್ಟ್ರದ ಬಾರಾಮತಿಯಿಂದ ಬಾಳೆಹಣ್ಣನ್ನು ಹೊತ್ತ ಹಡಗು ಡಿಸೆಂಬರ್‌ 5ರಂದು ನೆದರ್ಲೆಂಡ್‌ನ ರೋಟರ್ಡ್ಯಾಮ್ ನಗರಕ್ಕೆ ತಲುಪಿದೆ. ಇನ್ನು ಮುಂದೆ ಹಡಗಿನ ಮೂಲಕ ಹಣ್ಣುಗಳ ರಫ್ತು ಸುಗಮವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತವು ವಿಶ್ವದಲ್ಲಿಯೇ ಅತಿಹೆಚ್ಚು ಬಾಳೆಹಣ್ಣು ಉತ್ಪಾದಿಸುವ ರಾಷ್ಟ್ರವಾಗಿದೆ. ವಿಶ್ವದ ಉತ್ಪಾದನೆಯಲ್ಲಿ ಶೇ 26.45ರಷ್ಟು ಪಾಲು ಹೊಂದಿದೆ. ವಾರ್ಷಿಕವಾಗಿ 35.36 ದಶಲಕ್ಷ ಟನ್‌ನಷ್ಟು ಉತ್ಪಾದನೆಯಾಗುತ್ತದೆ.

ಆದರೆ, ಜಾಗತಿಕಮಟ್ಟದಲ್ಲಿ ರಫ್ತಿನ ಪಾಲು ಶೇ 1ರಷ್ಟಿದೆ. 2022–23ರಲ್ಲಿ ₹1,466 ಕೋಟಿ ಮೌಲ್ಯದ ಬಾಳೆಹಣ್ಣನ್ನು ರಫ್ತು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕೃಷಿ ಅರ್ಥಶಾಸ್ತ್ರಜ್ಞ ಚಿರಾಲ ಶಂಕರ್ ಅವರ ಪ್ರಕಾರ, ಆಂಧ್ರಪ್ರದೇಶದಿಂದ ಅತಿಹೆಚ್ಚು ಬಾಳೆಹಣ್ಣು ರಫ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT