ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ರಫ್ತಿಗೆ ನಿರ್ಬಂಧ: ಡಿಜಿಎಫ್‌ಟಿಯಿಂದ ಅಧಿಸೂಚನೆ

Last Updated 24 ಮೇ 2022, 19:37 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಜೂನ್ 1 ರಿಂದ ಅನ್ವಯವಾಗುವಂತೆ ಸಕ್ಕರೆ ರಫ್ತಿಗೆ ನಿರ್ಬಂಧ ಹೇರಿದೆ. ದೇಶಿಯವಾಗಿ ಅಗತ್ಯ ಪ್ರಮಾಣದ ಸಕ್ಕರೆ ಲಭ್ಯತೆ ಇರುವಂತೆ ನೋಡಿಕೊಳ್ಳುವುದು, ಬೆಲೆ ಏರಿಕೆಗೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ.

‘1ರಿಂದ ಜಾರಿಗೆ ಬರುವಂತೆ ನಿರ್ಬಂಧಿತ ವರ್ಗದಡಿ ಸಕ್ಕರೆಯನ್ನು (ಕಚ್ಚಾ ಸಕ್ಕರೆ, ಸಂಸ್ಕರಿಸಿದ ಸಕ್ಕರೆ) ತರಲಾಗಿದೆ’ ಎಂದು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ) ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆದರೆ ಈ ನಿರ್ಬಂಧವು ಸಿಎಕ್ಸ್‌ಎಲ್‌ ಮತ್ತು ಟಿಆರ್‌ಕ್ಯೂ ಕೋಟಾದಡಿ ಅಮೆರಿಕ ಮತ್ತು ಯೂರೋಪ್‌ ಒಕ್ಕೂಟದ ದೇಶಗಳಿಗೆ ಸಕ್ಕರೆ ರಪ್ತಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನಿರ್ಬಂಧ ಆದೇಶ ಅಕ್ಟೋಬರ್‌ 31ರವರೆಗೆ ಜಾರಿಯಲ್ಲಿರುತ್ತದೆ.

ಪ್ರಸಕ್ತ ಹಂಗಾಮಿನಲ್ಲಿ ಸಕ್ಕರೆ ರಫ್ತನ್ನು 1 ಕೋಟಿ ಟನ್‌ಗೆ ಮಿತಿಗೊಳಿಸಲು ಕೇಂದ್ರ ಚಿಂತನೆ ನಡೆಸಿದೆ ಎನ್ನಲಾಗಿದೆ.

ದೇಶಿ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಾಗದಂತೆ ನೋಡಿಕೊಳ್ಳಲು ಈ ಕ್ರಮ ಎನ್ನಲಾಗಿದೆ. ಆರು ವರ್ಷಗಳಿಂದ ಈಚೆಗೆ ಇಂತಹ ನಿರ್ಬಂಧಗಳು ಜಾರಿಗೆ ಬಂದಿರಲಿಲ್ಲ. ವಿಶ್ವದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದನೆ ಆಗುವುದು ಭಾರತದಲ್ಲಿ. ರಫ್ತಿನಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿದೆ. ಕಚ್ಚಾ ತೈಲ ಬೆಲೆ ಏರಿಕೆ ಆಗಿರುವ ಕಾರಣ, ಅಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದಿಸುತ್ತಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಸಕ್ಕರೆ ಬೆಲೆ ಹೆಚ್ಚಾಗಿದೆ.

ಸರ್ಕಾರದ ಸಬ್ಸಿಡಿ ಇಲ್ಲದೆ, 2021–22ನೆಯ ಮಾರುಕಟ್ಟೆ ವರ್ಷದಲ್ಲಿ ಒಟ್ಟು 85 ಲಕ್ಷ ಟನ್ ಸಕ್ಕರೆ ರಫ್ತಿಗೆ ಭಾರತದ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಸಹಿ ಹಾಕಿವೆ. ದೇಶದ ಪ್ರಮುಖ ಸಕ್ಕರೆ ಕಾರ್ಖಾನೆಗಳಾದ ಬಲರಾಮ್‌ಪುರ ಚಿನಿ, ದಾಲ್ಮಿಯಾ ಭಾರತ್ ಷುಗರ್, ಧಾಂ‍ಪುರ ಷುಗರ್ ಮಿಲ್ಸ್, ದ್ವಾರಿಕೇಶ್ ಷುಗರ್ ಇಂಡಸ್ಟ್ರೀಸ್, ಶ್ರೀರೇಣುಕಾ ಷುಗರ್ಸ್ ಷೇರು ಮೌಲ್ಯವು ಮಂಗಳವಾರ ಗರಿಷ್ಠ ಶೇ 8ರವರೆಗೆ ಕುಸಿದಿವೆ.

1 ಕೋಟಿ ಟನ್ ಸಕ್ಕರೆ ರಫ್ತಿಗೆ ಅವಕಾಶ ಇರುವುದು ಸಣ್ಣದಲ್ಲ ಎಂದು ವರ್ತಕರು ಹೇಳಿದ್ದಾರೆ. 1 ಕೋಟಿ ಸಕ್ಕರೆ ರಫ್ತು ಮಾಡಿದ ನಂತರ, ಅಕ್ಟೋಬರ್ 1ರ ವೇಳೆಗೆ ದೇಶದಲ್ಲಿ 60 ಲಕ್ಷ ಟನ್‌ ಸಕ್ಕರೆ ಲಭ್ಯಇರಲಿದೆ. ಮೂರನೇ ತ್ರೈಮಾಸಿಕದ ಹಬ್ಬಗಳ ಸಂದರ್ಭದ ಬೇಡಿಕೆ ಪೂರೈಸಲು ಸಾಕು ಎಂದು ವರ್ತಕರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT