ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಬೇಡಿಕೆ ಶೇ 8ರಷ್ಟು ಹೆಚ್ಚಳ

ಮೊದಲ ತ್ರೈಮಾಸಿಕ: ಸರಾಸರಿ ಬೆಲೆ ಶೇ 11ರಷ್ಟು ಏರಿಕೆ
Published 30 ಏಪ್ರಿಲ್ 2024, 15:33 IST
Last Updated 30 ಏಪ್ರಿಲ್ 2024, 15:33 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಕ್ಯಾಲೆಂಡರ್‌ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್) ದೇಶದ ಚಿನ್ನದ ಬೇಡಿಕೆಯು ಶೇ 8ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಮಂಗಳವಾರ ತಿಳಿಸಿದೆ.

ಸದ್ಯ ಹಳದಿ ಲೋಹದ ಬೆಲೆಯು ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ. ಇದರ ನಡುವೆಯೇ ದೇಶದ ಆರ್ಥಿಕತೆ ಬೆಳವಣಿಗೆ ಸದೃಢವಾಗಿರುವುದು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಚಿನ್ನ ಖರೀದಿ ಪ್ರಮಾಣವು ಹೆಚ್ಚಿರುವುದೇ ಈ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಚಿನ್ನದ ಬೇಡಿಕೆ ಕುರಿತು ಡಬ್ಲ್ಯುಜಿಸಿ ಸಿದ್ಧಪಡಿಸಿರುವ 2024ರ ಮೊದಲ ತ್ರೈಮಾಸಿಕ ವರದಿ ತಿಳಿಸಿದೆ.

ಈ ತ್ರೈಮಾಸಿಕ ಅವಧಿಯಲ್ಲಿ ಚಿನ್ನದ ಬೇಡಿಕೆ ಮೌಲ್ಯವು ಶೇ 20ರಷ್ಟು ಏರಿಕೆಯಾಗಿದ್ದು, ₹75,470 ಕೋಟಿಗೆ ತಲುಪಿದೆ. ಅಲ್ಲದೆ, ಸರಾಸರಿ ಬೆಲೆಯು ಶೇ 11ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.

ಚಿನ್ನಾಭರಣ ಮತ್ತು ಹೂಡಿಕೆ ಸೇರಿ ದೇಶದ ಚಿನ್ನದ ಬೇಡಿಕೆಯು 136.6 ಟನ್‌ಗೆ ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 126.3 ಟನ್‌ ಆಗಿತ್ತು ಎಂದು  ವಿವರಿಸಿದೆ.

ಒಟ್ಟು ಬೇಡಿಕೆ ಪೈಕಿ ಚಿನ್ನಾಭರಣಗಳ ಬೇಡಿಕೆಯು ಶೇ 4ರಷ್ಟು ಏರಿಕೆಯಾಗಿದ್ದು, 95.5 ಟನ್‌ಗೆ ತಲುಪಿದೆ. ಹೂಡಿಕೆಗಾಗಿ ಚಿನ್ನದ ಬೇಡಿಕೆಯು ಶೇ 19ರಷ್ಟು ಹೆಚ್ಚಳವಾಗಿದ್ದು, 34.4 ಟನ್‌ಗೆ ಮುಟ್ಟಿದೆ.

‘‍ಈ ಬೇಡಿಕೆ ಹೆಚ್ಚಳವು ಹಳದಿ ಲೋಹದ ಮೇಲೆ ಭಾರತೀಯರು ಬೆಸೆದುಕೊಂಡಿರುವ ಬಾಂಧವ್ಯದ ದ್ಯೋತಕವಾಗಿದೆ’ ಎಂದು ಡಬ್ಲ್ಯುಜಿಸಿಯ ಭಾರತದ ಸಿಇಒ ಸಚಿನ್‌ ಜೈನ್ ತಿಳಿಸಿದ್ದಾರೆ. 

‘ಪ್ರಸಕ್ತ ವರ್ಷದಲ್ಲಿ ದೇಶದ ಚಿನ್ನದ ಬೇಡಿಕೆಯು 700ರಿಂದ 800 ಟನ್‌ಗೆ ಮುಟ್ಟುವ ಸಾಧ್ಯತೆಯಿದೆ. ಆದರೆ, ಬೆಲೆಯು ಇದೇ ರೀತಿ ಏರುಗತಿ ಕಂಡರೆ ಬೇಡಿಕೆಯು ಕಡಿಮೆಯಾಗುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

‘ಭಾರತ, ಚೀನಾ ಸೇರಿ ಪೌರಸ್ತ್ಯ ದೇಶಗಳಲ್ಲಿ ಬೆಲೆ ಕಡಿಮೆಯಾದಾಗ ಬೇಡಿಕೆ ಹೆಚ್ಚಿರುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬೆಲೆ ಏರಿಕೆಯಾದಾಗ ಬೇಡಿಕೆ ಹೆಚ್ಚಿರುವುದು ಸಾಮಾನ್ಯ. ಆದರೆ, ಮೊದಲ ಬಾರಿಗೆ ಭಾರತ, ಚೀನಾ ಮಾರುಕಟ್ಟೆಯಲ್ಲಿ ದರ ಏರಿಕೆ ನಡುವೆಯೇ ಬೇಡಿಕೆಯು ಹೆಚ್ಚಳವಾಗಿದೆ’ ಎಂದು ಹೇಳಿದ್ದಾರೆ.

2023ರಲ್ಲಿ ಆರ್‌ಬಿಐ 16 ಟನ್‌ ಚಿನ್ನ ಖರೀದಿಸಿತ್ತು. ಆದರೆ, ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿಯೇ 19 ಟನ್‌ ಖರೀದಿಸಿದೆ. ಇದು ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಚಿನ್ನಕ್ಕೆ ಬೇಡಿಕೆ ತಗ್ಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Highlights - ಅಂಕಿ–ಅಂಶ 19 ಟನ್‌– ಮೊದಲ ತ್ರೈಮಾಸಿಕದಲ್ಲಿ ಆರ್‌ಬಿಐ ಖರೀದಿಸಿದ ಚಿನ್ನ 747.5 ಟನ್‌– 2023ರಲ್ಲಿ ದೇಶದ ಒಟ್ಟು ಚಿನ್ನದ ಬೇಡಿಕೆ  700–800 ಟನ್‌– 2024ರಲ್ಲಿ ದೇಶದ ಒಟ್ಟು ಚಿನ್ನದ ಬೇಡಿಕೆ ಅಂದಾಜು

Cut-off box - ಚಿನ್ನದ ದರ ₹150 ಬೆಳ್ಳಿ ₹750 ಇಳಿಕೆ ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆಯಾಗಿದೆ.  10 ಗ್ರಾಂ ಚಿನ್ನದ ದರ ₹150 ಇಳಿಕೆಯಾಗಿ ₹72600ಕ್ಕೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹750 ಕಡಿಮೆಯಾಗಿ ₹83750ರಂತೆ ವಹಿವಾಟು ನಡೆಸಿತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2320 ಡಾಲರ್‌ (ಅಂದಾಜು ₹1.93 ಲಕ್ಷ) ಮತ್ತು 26.80 (ಅಂದಾಜು ₹2236) ಡಾಲರ್‌ನಂತೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲೂ ದರ ಕಡಿಮೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT