ಗುರುವಾರ , ಡಿಸೆಂಬರ್ 3, 2020
23 °C

ಚೇತರಿಕೆ ಕಂಡ ತಯಾರಿಕಾ ವಲಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆ ಸತತ ಮೂರನೇ ತಿಂಗಳಿನಲ್ಲಿಯೂ ಏರಿಕೆಯಾಗಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಸಂಸ್ಥೆ ಹೇಳಿದೆ.

ಉತ್ತಮ ಮಾರಾಟದ ಕಾರಣದಿಂದಾಗಿ ಕಂಪನಿಗಳು ಅಕ್ಟೋಬರ್‌ನಲ್ಲಿ ತಯಾರಿಕೆಯನ್ನು ಹೆಚ್ಚಿಸಿವೆ. ಇದು 2007ರ ಅಕ್ಟೋಬರ್‌ ನಂತರದ ಗರಿಷ್ಠ ಪ್ರಮಾಣದ ಹೆಚ್ಚಳವಾಗಿದೆ. ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಸೆಪ್ಟೆಂಬರ್‌ನಲ್ಲಿ 56.8 ಇದ್ದಿದ್ದು ಅಕ್ಟೋಬರ್‌ನಲ್ಲಿ 58.9ಕ್ಕೆ ಏರಿಕೆಯಾಗಿದೆ. ಇದು ತಯಾರಿಕಾ ವಲಯವು ಸಾಧಿಸಿದ ದಶಕದ ಅತ್ಯುತ್ತಮ ಬೆಳವಣಿಗೆ ಎಂದು ಅದು ತಿಳಿಸಿದೆ.

‘ಕೋವಿಡ್‌–19 ಬಿಕ್ಕಟ್ಟಿಗೆ ಸಿಲುಕಿ ಕುಸಿತ ಕಂಡಿದ್ದ ವಲಯ ಈಗ ಚೇತರಿಕೆಯ ಹಾದಿಯಲ್ಲಿದೆ. ಉತ್ಪಾದನೆ ಮತ್ತು ಹೊಸ ಯೋಜನೆಗಳ ಬೇಡಿಕೆಯಲ್ಲಿ ಸುಧಾರಣೆ ಕಂಡುಬರುತ್ತಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸುತ್ತಿರುವುದು, ಮಾರುಕಟ್ಟೆ ಸ್ಥಿತಿ ಸುಧಾರಿಸುತ್ತಿರುವುದು ಹಾಗೂ ಬೇಡಿಕೆಯಲ್ಲಿನ ಚೇತರಿಕೆಯಿಂದಾಗಿ ಅಕ್ಟೋಬರ್‌ನಲ್ಲಿ ತಯಾರಿಕಾ ವಲಯದ ಉತ್ಪನ್ನಗಳಿಗೆ ಬೇಡಿಕೆ ಬಂದಿದೆ.

ತಯಾರಿಕಾ ವೆಚ್ಚದಲ್ಲಿ ಅಲ್ಪ ಏರಿಕೆ ಹಾಗೂ ಮಾರಾಟ ದರದಲ್ಲಿ ಅತ್ಯಲ್ಪ ಏರಿಕೆಯಿಂದಾಗಿ ಹಣದುಬ್ಬರದ ಒತ್ತಡವು ತಗ್ಗಿದೆ. ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಹಾಗೂ ಆರ್ಥಿಕತೆಯ ಇನ್ನಷ್ಟು ವಲಯಗಳ ವಹಿವಾಟು ಮತ್ತೆ ಆರಂಭವಾಗುವ ನಿರೀಕ್ಷೆಯು ತಯಾರಿಕಾ ವಲಯದ ಇನ್ನೂ ಹೆಚ್ಚಿನ ಚೇತರಿಕೆಗೆ ನೆರವಾಗಲಿವೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು