ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಅಡುಗೆ ಎಣ್ಣೆ ಆಮದು ಪ್ರಮಾಣ ಶೇ 16ರಷ್ಟು ಏರಿಕೆ: ಎಸ್‌ಇಎ

Published 13 ನವೆಂಬರ್ 2023, 14:31 IST
Last Updated 13 ನವೆಂಬರ್ 2023, 14:31 IST
ಅಕ್ಷರ ಗಾತ್ರ

ನವದೆಹಲಿ: ಅಕ್ಟೋಬರ್ 2023ರಲ್ಲಿ ಕೊನೆಗೊಂಡ ಪ್ರಸಕ್ತ ತೈಲ ವರ್ಷದಲ್ಲಿ ಭಾರತದಲ್ಲಿ ಅಡುಗೆ ಎಣ್ಣೆ ಆಮದು ಪ್ರಮಾಣ ಶೇ 16ರಷ್ಟು ಏರಿಕೆಯಾಗಿ 167.1 ಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಎಸ್‌ಇಎ ಸೋಮವಾರ ತಿಳಿಸಿದೆ.

ಹಿಂದಿನ ಇದೇ ಅವಧಿಯಲ್ಲಿ (ನವೆಂಬರ್‌–ಅಕ್ಟೋಬರ್‌) 144.1 ಲಕ್ಷ ಟನ್‌ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳಲಾಗಿತ್ತು. ಈ ಬಾರಿ ಅಡುಗೆ ಎಣ್ಣೆ ಮೇಲಿನ ಕಡಿಮೆ ಸುಂಕದಿಂದ ಆಮದು ಪ್ರಮಾಣ ಹೆಚ್ಚಾಗಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ತಿಳಿಸಿದೆ.

ಒಟ್ಟು ತೈಲದಲ್ಲಿ 164.7 ಲಕ್ಷ ಟನ್‌ ಅಡುಗೆ ಎಣ್ಣೆ ಮತ್ತು 2.4 ಲಕ್ಷ ಟನ್‌ ಅಡುಗೇತರ ಎಣ್ಣೆ 2022–23ರಲ್ಲಿ ಆಮದು ಮಾಡಿಕೊಳ್ಳಲಾಗಿತ್ತು. ಭಾರತ ವಿಶ್ವದಲ್ಲೇ ಅಡುಗೆ ಎಣ್ಣೆ ಖರೀದಿಯಲ್ಲಿ ಮುಂಚೂಣಿಯಲ್ಲಿದೆ.

ಎಸ್‌ಇಎ ಪ್ರಕಾರ 2022–23ರಲ್ಲಿ ಅಡುಗೆ ಎಣ್ಣೆ ಆಮದು 164.7 ಲಕ್ಷ ಟನ್‌ಗೆ ಏರಿಕೆ ಆಗಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಇದು 24.4 ಲಕ್ಷ ಟನ್‌ ಅಧಿಕವಾಗಿದೆ. ಕಚ್ಚಾ ತಾಳೆ ಎಣ್ಣೆ, ಸೋಯಾಬಿನ್‌ ಮತ್ತು ಸೂರ್ಯಕಾಂತಿ ಎಣ್ಣೆ ಮೇಲೆ ಶೇ 5.5ರಷ್ಟು ಸುಂಕ ಇದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ. ಇದರಿಂದ ಆಮದು ಪ್ರಮಾಣ ಹೆಚ್ಚಾಗಿದೆ. ಒಟ್ಟು ಅಡುಗೆ ಎಣ್ಣೆ ಆಮದಿನಲ್ಲಿ ಆರ್‌ಬಿಡಿ ಪಾಮೋಲಿನ್‌ ಶೇ 25ರಷ್ಟು ಹೆಚ್ಚು ಆಮದು ಮಾಡಿಕೊಂಡಿದೆ ಎಂದು ತಿಳಿಸಿದೆ.

2022–23ರಲ್ಲಿ ₹1.38 ಲಕ್ಷ ಕೋಟಿ, 2021–22ರಲ್ಲಿ ₹1.57 ಲಕ್ಷ ಕೋಟಿ ಮತ್ತು 2020–21ರಲ್ಲಿ ₹1.17 ಲಕ್ಷ ಕೋಟಿ ಮೌಲ್ಯದ ಅಡುಗೆ ಎಣ್ಣೆಯನ್ನು ದೇಶದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು ಎಂದು ಎಸ್‌ಇಎ ತಿಳಿಸಿದೆ.

ನವೆಂಬರ್‌ 1ರ ಎಸ್‌ಇಎ ಅಂದಾಜು ಪ್ರಕಾರ ಸುಮಾರು 33 ಲಕ್ಷ ಟನ್‌ ದಾಸ್ತಾನು ಇದೆ. ಇದು ಕಳೆದ ತಿಂಗಳಿಗಿಂತ 3 ಲಕ್ಷ ಟನ್‌ ಕಡಿಮೆ ಆಗಿದೆ. ಹಬ್ಬದ ಅಂಗವಾಗಿ ಬಳಕೆ ಹೆಚ್ಚಾಗಿರುವುದು ದಾಸ್ತಾನು ಕಡಿಮೆಯಾಗಲು ಕಾರಣ.

ತಾಳೆ ಎಣ್ಣೆಗಳ ಪೈಕಿ ಆರ್‌ಬಿಡಿ ಪಾಮೋಲಿನ್‌ 2022–23ರಲ್ಲಿ 21.1 ಲಕ್ಷ ಟನ್‌ ಪಾಮೋಲಿನ್‌ ಆಮದು ಮಾಡಿಕೊಂಡಿದ್ದರೆ, ಹಿಂದಿನ ಇದೇ ಅವಧಿಯಲ್ಲಿ 18.4 ಲಕ್ಷ ಟನ್‌ ಆಮದು ಮಾಡಿಕೊಂಡಿತ್ತು. ಕಚ್ಚಾ ತಾಳೆ ಎಣ್ಣೆ ಆಮದು 54.9 ಲಕ್ಷ ಟನ್‌ನಿಂದ 75.9 ಲಕ್ಷ ಟನ್‌ಗೆ ಏರಿಕೆಯಾಗಿದೆ. ಕಚ್ಚಾ ತಾಳೆ ಎಣ್ಣೆ (ಸಿಪಿಕೆಒ) ಆಮದು ಪ್ರಸಕ್ತ ಅವಧಿಯಲ್ಲಿ 94,148 ಟನ್‌ ಇದ್ದರೆ, ಹಿಂದಿನ ಇದೇ ಅವಧಿಯಲ್ಲಿ 79,740 ಟನ್‌ ಇತ್ತು.

2022-23ರಲ್ಲಿ ಬೆಲೆ ಸಮಾನತೆಯಿಂದಾಗಿ ತಾಳೆ ಉತ್ಪನ್ನಗಳ ಒಟ್ಟು ಆಮದು ತೀವ್ರವಾಗಿ ಹೆಚ್ಚಾಗಿದೆ. ಹೀಗಾಗಿ, ಅಡುಗೆ ಎಣ್ಣೆ  ಪೈಕಿ ತಾಳೆ ಎಣ್ಣೆ ಆಮದು ಪ್ರಮಾಣವು ಶೇ 56ರಿಂದ ಶೇ 59ಕ್ಕೆ ಹೆಚ್ಚಿದೆ. ಕಳೆದ ವರ್ಷ ಜೂನ್‌ 15ರವರೆಗೆ ಇದ್ದ ಶೂನ್ಯ ಆಮದು ಸುಂಕದಿಂದಾಗಿ 30 ಲಕ್ಷ ಟನ್‌ ಸೂರ್ಯಕಾಂತಿ ಎಣ್ಣೆ ಆಮದಾಗಿದೆ. ಹಿಂದಿನ ಅವಧಿಯಲ್ಲಿ ಇದು 19.4 ಲಕ್ಷ ಟನ್ ಇತ್ತು. ಆದರೆ ಸೋಯಾಬಿನ್‌ ಎಣ್ಣೆ ಆಮದು 41.7 ಲಕ್ಷ ಟನ್‌ನಿಂದ 36.8 ಲಕ್ಷ ಟನ್‌ಗೆ ಇಳಿಕೆ ಕಂಡಿದೆ ಎಂದು ಎಸ್‌ಇಎ ಮಾಹಿತಿ ನೀಡಿದೆ.

ಎಲ್ಲಿಂದ ಆಮದು?

* ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆ

* ಅರ್ಜೆಂಟೇನಿಯಾದಿಂದ ಸೋಯಾಬಿನ್ ಎಣ್ಣೆ

* ಉಕ್ರೇನ್‌ ಮತ್ತು ರಷ್ಯಾದಿಂದ ಸೂರ್ಯಕಾಂತಿ ಎಣ್ಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT