ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಗೊ: ಹಿರಿಯ ಸಿಬ್ಬಂದಿಯ ವೇತನ ಕಡಿತ

ಏರ್‌ ಇಂಡಿಯಾ: ಶೇ 5ರಷ್ಟು ಕಡಿತ
Last Updated 19 ಮಾರ್ಚ್ 2020, 20:07 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ–2ವೈರಸ್‌ ಹಾವಳಿಯಿಂದಾಗಿ ವಿಮಾನ ಯಾನ ರಂಗವು ತೀವ್ರವಾಗಿ ಬಾಧಿತವಾಗಿರುವುದರಿಂದ ತನ್ನ ಹಿರಿಯ ಉದ್ಯೋಗಿಗಳ ವೇತನದಲ್ಲಿ ಕಡಿತ ಮಾಡುವುದಾಗಿ ದೇಶಿ ವಿಮಾನಯಾನ ಸಂಸ್ಥೆ ಇಂಡಿಗೊ ತಿಳಿಸಿದೆ.

’ವರಮಾನವು ಅಪಾಯಕಾರಿ ಮಟ್ಟದಲ್ಲಿ ಕುಸಿಯುತ್ತಿರುವುದರಿಂದ ವಿಮಾನಯಾನ ಉದ್ದಿಮೆಯು ಅಸ್ತಿತ್ವ ಉಳಿಸಿಕೊಳ್ಳಲು ತೀವ್ರ ಪ್ರಯಾಸಪಡುವ ಪರಿಸ್ಥಿತಿ ಉದ್ಭವಿಸಿದೆ‘ ಎಂದು ಇಂಡಿಗೊದ ಸಿಇಒ ರೊನೊಜಾಯ್‌ ದತ್ತಾ ಅವರು ಕಂಪನಿಯ ಸಿಬ್ಬಂದಿಗೆ ಬರೆದ ಇ–ಮೇಲ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

’ಕಂಪನಿಯಲ್ಲಿ ಹಣದ ಬಿಕ್ಕಟ್ಟು ಉದ್ಭವಿಸದಿರಲು ನಗದು ಹರಿವಿನ ಬಗ್ಗೆ ನಾವು ಹೆಚ್ಚು ಕಾಳಜಿವಹಿಸಬೇಕಾಗಿದೆ. ಹೀಗಾಗಿ ಕೆಳಹಂತದ ಎ ಮತ್ತು ಬಿ ಶ್ರೇಣಿಯ ನೌಕರರನ್ನು ಹೊರತುಪಡಿಸಿ ಉಳಿದ ಸಿಬ್ಬಂದಿಗೆ ಏಪ್ರಿಲ್‌ 1ರಿಂದ ವೇತನ ಕಡಿತ ಜಾರಿಗೆ ಬರಲಿದೆ‘ ಎಂದು ತಿಳಿಸಿದ್ದಾರೆ.

’ನಾನು ಶೇ 25ರಷ್ಟು ಕಡಿಮೆ ಸಂಬಳ ಪಡೆಯಲು ನಿರ್ಧರಿಸಿದ್ದೇನೆ. ಹಿರಿಯ ಉಪಾಧ್ಯಕ್ಷರ ವೇತನ ಶೇ 20ರಷ್ಟು, ಉಪಾಧ್ಯಕ್ಷರು ಮತ್ತು ಕಾಕ್‌ಪಿಟ್‌ ಸಿಬ್ಬಂದಿಗೆ ಶೇ 15ರಷ್ಟು ವೇತನ ಕಡಿತ ಮಾಡಲಾಗುವುದು. ಕ್ಯಾಬಿನ್‌ ಸಿಬ್ಬಂದಿಗೆ ಶೇ 10ರಷ್ಟು ಮತ್ತು ಸಿ ದರ್ಜೆಯ ನೌಕರರಿಗೆ ಶೇ 5ರಷ್ಟು ಕಡಿತವಾಗಲಿದೆ.

’ಮನೆಗೆ ಕೊಂಡೊಯ್ಯುವ ವೇತನದಲ್ಲಿ ಕಡಿತವಾಗುವುದರಿಂದ ಸಿಬ್ಬಂದಿಯ ಕುಟುಂಬ ಎದುರಿಸಬೇಕಾದ ಸಂಕಷ್ಟವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ‘ ಎಂದೂ ದತ್ತಾ ಹೇಳಿದ್ದಾರೆ.

ಏರ್‌ ಇಂಡಿಯಾ: ಶೇ 5ರಷ್ಟು ವೇತನ ಕಡಿತ

ಮುಂಬೈ: ಅಂತರರಾಷ್ಟ್ರೀಯ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ (ಎಐ), ತನ್ನ ಸಿಬ್ಬಂದಿಯ ವೇತನವನ್ನು ಶೇ 5ರಷ್ಟು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ.

ಮೊದಲೇ ಹಣಕಾಸು ಬಿಕ್ಕಟ್ಟಿನಲ್ಲಿ ಸಿಲುಕಿದ್ದ ’ಎಐ‘ದ ಆರ್ಥಿಕ ಸಂಕಷ್ಟವು ಕೊರೊನಾ ವೈರಸ್‌ನಿಂದಾಗಿ ತೀವ್ರಗೊಂಡಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಏಪ್ರಿಲ್‌ನಿಂದ 6 ತಿಂಗಳವರೆಗೆ ಇಂಧನ ಭತ್ಯೆಯನ್ನೂ ಶೇ 10ರಷ್ಟು ಕಡಿತ ಮಾಡಲಾಗಿದೆ. ಕಂಪನಿಯ ಹಣಕಾಸು ಪರಿಸ್ಥಿತಿ ಆಧರಿಸಿ ವೆಚ್ಚ ಕಡಿತದ ಇತರ ಕ್ರಮಗಳನ್ನೂ ಕೈಗೊಳ್ಳಲು ’ಎಐ‘ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT