ಗುರುವಾರ , ಮಾರ್ಚ್ 23, 2023
29 °C

ಪ್ರಶ್ನೋತ್ತರ | ಐಟಿ ರಿಟರ್ನ್ಸ್‌ ವಿಚಾರದಲ್ಲಿ ಯಾವ ನಿಯಮಗಳು ಸೂಕ್ತ?

ಯು. ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

ಪ್ರಶ್ನೆ: ನಾನು ಹುಬ್ಬಳ್ಳಿಯ ಮನೆಯನ್ನು 15–4–2020ರಂದು ₹ 75 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಈ ಮನೆ 2002ರಲ್ಲಿ ₹32 ಲಕ್ಷಕ್ಕೆ ಕೊಂಡಿದ್ದಾಗಿತ್ತು. ನಾನು ಈವರೆಗೆ ಆದಾಯ ತೆರಿಗೆ ವ್ಯಾಪ್ತಿಗೆ ಒಳಗಾಗಿರಲಿಲ್ಲ. ಈ ವ್ಯವಹಾರದಲ್ಲಿ ತೆರಿಗೆ ರಿಟರ್ನ್ಸ್‌ ವಿಚಾರವಾಗಿ ವಿವರಣೆ ಕೊಡಿ.
–ಶಂಕರಪ್ಪ, ಹುಬ್ಬಳ್ಳಿ

ಉತ್ತರ: ನೀವು ಆದಾಯ ತೆರಿಗೆ ವ್ಯಾಪ್ತಿಗೆ ಒಳಗಾಗದಿದ್ದರೂ, ಆಸ್ತಿ ಮಾರಾಟ ಮಾಡಿರುವುದರಿಂದ ಬಂಡವಾಳ ವೃದ್ಧಿ ತೆರಿಗೆ (ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌) ವ್ಯಾಪ್ತಿಗೆ ಬರುವುದರಿಂದ ಈ ಬಾರಿ ಐ.ಟಿ ರಿಟರ್ನ್ಸ್‌ ಸಲ್ಲಿಸಬೇಕು. ಬಂಡವಾಳ ವೃದ್ಧಿ ತೆರಿಗೆ ಪಾವತಿಸುವ ಮುನ್ನ, ಕೊಂಡುಕೊಳ್ಳುವಾಗ ಕೊಟ್ಟ ಹಣ, ಮುದ್ರಾಂಕ‌ ವೆಚ್ಚ, ನೋಂದಣಿ ಖರ್ಚು 2002ರಿಂದ ಇಲ್ಲಿಯವರೆಗಿನ ಹಣದುಬ್ಬರದ ಲೆಕ್ಕಾಚಾರ, ಬ್ರೋಕರೇಜ್‌ ಚಾರ್ಜ್‌ ಕೊಟ್ಟಿದ್ದರೆ ಅದು... ಇವೆಲ್ಲವನ್ನೂ ₹ 75 ಲಕ್ಷದಿಂದ ಕಳೆದು ಬರುವ ಮೊತ್ತಕ್ಕೆ ಶೇಕಡ 20ರಷ್ಟು ಬಂಡವಾಳ ವೃದ್ಧಿ ತೆರಿಗೆ ಕೊಡಬೇಕಾಗುತ್ತದೆ. ತೆರಿಗೆ ಉಳಿಸಲು ಇನ್ನೊಂದು ಮನೆಯನ್ನು ಎರಡು ವರ್ಷಗಳೊಳಗೆ ಕೊಳ್ಳಬಹುದು. ಅಥವಾ ಗರಿಷ್ಠ ₹ 50 ಲಕ್ಷವನ್ನು ಎನ್‌ಎಚ್‌ಐಎ–ಆರ್‌ಇಸಿ ಬಾಂಡ್‌ಗಳಲ್ಲಿ ಐದು ವರ್ಷಗಳ ಅವಧಿಗೆ ಇರಿಸಬಹುದು. ಹೀಗೆ ಇರಿಸಲು ಮಾರಾಟ ಮಾಡಿದಂದಿನಿಂದ ಆರು ತಿಂಗಳು ಅಥವಾ ಐ.ಟಿ ರಿಟರ್ನ್ಸ್‌ ತುಂಬುವ ಕೊನೆ ತಾರೀಕು, ಇವುಗಳಲ್ಲಿ ಯಾವುದು ಮೊದಲೋ ಅದನ್ನು ಆರಿಸಿಕೊಳ್ಳಬೇಕು. ನಿಮಗೆ 31–10–2020ರ ತನಕ ಬಾಂಡ್‌ನಲ್ಲಿ ಹಣ ಹೂಡಲು ಅವಕಾಶವಿದೆ.

**
ಪ್ರಶ್ನೆ: ನಾನು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದಿದ್ದೇನೆ. ಹಿರಿಯ ನಾಗರಿಕಳಲ್ಲ. ತಿಂಗಳ ಪಿಂಚಣಿ ₹ 30 ಸಾವಿರ ಬರುತ್ತದೆ. ನಿವೃತ್ತಿಯಿಂದ ಬಂದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇರಿಸಿದ್ದೇನೆ. ಠೇವಣಿಯಿಂದ ವಾರ್ಷಿಕ ₹ 3.50 ಲಕ್ಷ ಬಡ್ಡಿ ಬರುತ್ತದೆ. ಐ.ಟಿ. ರಿಟರ್ನ್ಸ್‌ ವಿಚಾರದಲ್ಲಿ ಹೊಸ ಅಥವಾ ಹಳೆ ಮಾರ್ಗಗಳ ಪೈಕಿ ಯಾವುದು ಸೂಕ್ತ? ತೆರಿಗೆ ಉಳಿಸುವ ಮಾರ್ಗ ತಿಳಿಸಿರಿ.
–ನಾಗರತ್ನ, ಸಾಗರ

ಉತ್ತರ: ನಿಮಗೆ ಸೆಕ್ಷನ್‌ 16ರಂತೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹ 50 ಸಾವಿರ ಹೊರತುಪಡಿಸಿದರೆ ಬೇರೆ ವಿನಾಯಿತಿ ಇರುವುದಿಲ್ಲ. ಪ್ರತಿ ವರ್ಷ ಸೆಕ್ಷನ್‌ 80ಸಿ ಆಧಾರದ ಮೇಲೆ ₹ 1.50 ಲಕ್ಷವನ್ನು ಐದು ವರ್ಷಗಳ ಅವಧಿಗೆ ಠೇವಣಿ ಮಾಡಿ ವಿನಾಯಿತಿ ಪಡೆಯಿರಿ. ಐ.ಟಿ. ರಿಟರ್ನ್ಸ್‌ ಹಳೆ ಪದ್ಧತಿ ಅನುಸರಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು