ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ಸ್ವರೂಪ ಬದಲಿಸಿದ ತಂತ್ರಜ್ಞಾನ

ವಿಮೆ ವಹಿವಾಟಿನಲ್ಲಿ ತಂತ್ರಜ್ಞಾನದ ಪಾತ್ರ
Last Updated 25 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ತಂತ್ರಜ್ಞಾನವು ಇಡೀ ವಿಶ್ವದ ಮೇಲೆ ಕ್ರಾಂತಿಕಾರಿ ಎನ್ನಬಹುದಾದ ಪರಿಣಾಮಗಳನ್ನು ಉಂಟುಮಾಡುತ್ತಿದೆ. ನಮ್ಮ ಕೈಯಲ್ಲಿರುವ ಫೋನ್‌ಗಳು ಈಗ ಬರಿಯ ಫೋನ್‌ಗಳಾಗಿ ಉಳಿದಿಲ್ಲ. ವಿಡಿಯೊ ಪ್ರದರ್ಶನದ ಸಾಧನವಾಗಿ, ಡಿಜಿಟಲ್‌ ಕ್ಯಾಮರಾಗಳಾಗಿ, ಇಂಟರ್‌ನೆಟ್‌ ಸಂಪರ್ಕ ಸಾಧನವಾಗಿ... ಹತ್ತು ಹಲವು ಕೆಲಸಗಳನ್ನು ಮಾಡುತ್ತಿವೆ. ಸ್ಮಾರ್ಟ್‌ ಫೋನ್‌ಗಳು ನಮ್ಮ ಕೈಗಳಿಗೆ ಹೆಚ್ಚಿನ ಶಕ್ತಿ ತುಂಬಿವೆ. ಜೀವನಕ್ಕೆ ಹೊಸ ಗತಿಯನ್ನು ನೀಡಿವೆ, ಜತೆಗೆ ಬದುಕನ್ನು ಸರಳಗೊಳಿಸಿವೆ.

ತಂತ್ರಜ್ಞಾನದಲ್ಲಿ ಆಗಿರುವ ಈ ಕ್ರಾಂತಿಯ ಲಾಭವನ್ನು ವಿಮಾ ಗ್ರಾಹಕರೂ ಅನುಭವಿಸುತ್ತಿದ್ದಾರೆ. ಮೊಬೈಲ್‌ ಫೋನ್‌ ಮೂಲಕ ತಮಗೆ ಡಿಜಿಟಲ್‌ ಸ್ವರೂಪದ ಮತ್ತು ಇನ್ನಷ್ಟು ವಿಸ್ತೃತವಾದ ಸೇವೆಗಳನ್ನು ವಿಮಾ ಸಂಸ್ಥೆಗಳು ನೀಡಬೇಕು ಎಂದು ಗ್ರಾಹಕರು ಬಯಸುತ್ತಿದ್ದಾರೆ. ವಿಮಾ ಕಂಪನಿಗಳೂ ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನ ಹಾಗೂ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಸ್ಪರ್ಧೆಗೆ ಬಿದ್ದಿವೆ. ಕೃತಕ ಬುದ್ಧಿಮತ್ತೆ, ಮಷಿನ್‌ ಲರ್ನಿಂಗ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ), ಟೆಲಿಮೆಟಿಕ್ಸ್‌ / ಟೆಲಿಮೆಟ್ರಿಕ್‌, ರೋಬೊ ಸಲಹೆ ಮುಂತಾದ ನವೀನ ತಂತ್ರಜ್ಞಾನಗಳು ವಿಮಾ ಕ್ಷೇತ್ರದ ಸಾಂಪ್ರದಾಯಿಕ ಪದ್ಧತಿಗಳನ್ನು ಹಿಂದಿಕ್ಕುತ್ತಿವೆ.

ಗ್ರಾಹಕರಿಗಾಗಿ ವಿಮಾ ಸಂಸ್ಥೆಗಳು ಇಂಥ ಅನೇಕ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿವೆ. ಬಹುತೇಕ ಎಲ್ಲಾ ವಿಮಾ ಕಂಪನಿಗಳು ತಮ್ಮದೇ ಆದ ಮೊಬೈಲ್‌ ಕಿರುತಂತ್ರಾಂಶಗಳನ್ನು (ಆ್ಯಪ್‌) ಹೊಂದಿವೆ. ಇದರಿಂದಾಗಿ ಗ್ರಾಹಕರಿಗೆ ಕಂಪನಿಯ ಜೊತೆ ಸಂವಹನ ನಡೆಸುವುದು ಸುಲಭವಾಗಿದೆ. ವಿಮಾ ಪಾಲಿಸಿಗಳು ಸ್ವಲ್ಪ ಕ್ಲಿಷ್ಟಕರ ಆಗಿರುವುದರಿಂದ ಗ್ರಾಹಕರಿಗೆ ವಿವರಣೆಗಳನ್ನು ನೀಡಲು ಕಂಪನಿಗಳು ಯಂತ್ರಭಾಷೆಯ ತಂತ್ರಜ್ಞಾನವನ್ನು ಬಳಸುತ್ತಿವೆ. ಕೆಲವು ಕಂಪನಿಗಳು ಗ್ರಾಹಕರಿಗೆ ಆಗಿರುವ ಹಾನಿಯನ್ನು ಅಂದಾಜಿಸಲು ‘ವಿಡಿಯೊ ಚಾಟ್‌’ ತಂತ್ರಜ್ಞಾನವನ್ನೂ ಬಳಸುತ್ತಿವೆ. ಇದರಿಂದ ಹೆಚ್ಚಿನ ವೇಗದಲ್ಲಿ ಸೇವೆ ನೀಡಲು ಸಾಧ್ಯವಾಗುತ್ತಿದೆ.

ಡಿಜಿಟಲ್‌ ವಾಲೆಟ್‌ ವ್ಯವಸ್ಥೆ ಜಾರಿಯಾದ ಬಳಿಕ ಅಲ್ಪಾವಧಿಯ ಹೂಡಿಕಾ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇಂತಹ ಸಣ್ಣ ಉತ್ಪನ್ನಗಳನ್ನು ಮಾರಾಟ ಮಾಡಲು ವಿಮಾ ಸಂಸ್ಥೆಗಳು ತಮ್ಮ ಸಾಂಪ್ರದಾಯಿಕ ವ್ಯವಸ್ಥೆಗಳನ್ನು ಬಿಟ್ಟು, ಕ್ಲೌಡ್‌ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ನೆಚ್ಚಿಕೊಳ್ಳಬೇಕಾಯಿತು. ಇದು ಸಂಸ್ಥೆಗಳಿಗೆ ಅನೇಕ ಅನುಕೂಲತೆಗಳನ್ನು ಕಲ್ಪಿಸಿದೆ.

ವಿಮಾ ಉತ್ಪನ್ನಗಳ ಮಾರಾಟದಲ್ಲಿ ಏಜೆಂಟರು ಹಾಗೂ ಮಧ್ಯವರ್ತಿಗಳಿಗೆ ಈಗಲೂ ಮಹತ್ವ ಇದೆ. ಆದರೆ ಈಗ ಅವರ ಕೈಯಲ್ಲಿ ವೆಬ್‌ ಆಧಾರಿತ ಆ್ಯಪ್‌ಗಳನ್ನು ಹೊಂದಿದ ಮೊಬೈಲ್‌ಗಳೂ ಇರುತ್ತವೆ. ಏಜೆಂಟರು ಮತ್ತು ಮಧ್ಯವರ್ತಿಗಳ ನೇಮಕಕ್ಕೆ ಸಂಬಂಧಿಸಿದ ಆ್ಯಪ್‌ಗಳೂ ಈಗ ವಿಮಾ ಉದ್ದಿಮೆಯಲ್ಲಿವೆ.

ಐಒಟಿಯಂಥ ತಂತ್ರಜ್ಞಾನವು ಸಾಗರೋತ್ತರ ಸರಕು ಸಾಗಣೆಯ ಮೇಲೆ ಕಣ್ಣಿಡಲು ವಿಮಾ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸಿದೆ. ಕೆಲವು ಔಷಧಗಳ ತಾಪಮಾನವನ್ನು ನಿಗದಿತ ಪ್ರಮಾಣದಲ್ಲೇ ಕಡ್ಡಾಯವಾಗಿ ಕಾಯ್ದಿರಿಸಬೇಕಾಗುತ್ತದೆ. ಸರಕು ಸಾಗಾಣಿಕೆಯ ವೇಳೆ ಅವುಗಳು ಕೆಡದಂತೆ ಕಾಪಾಡುವಲ್ಲಿ ಇಂಥ ತಂತ್ರಜ್ಞಾನ ನೆರವಾಗುತ್ತಿದೆ. ತುರ್ತಾಗಿ ಗ್ರಾಹಕರ ಆರೋಗ್ಯ ತಪಾಸಣೆ ನಡೆಸುವುದು, ತಯಾರಿಕಾ ಕ್ಷೇತ್ರದ ಸಂಸ್ಥೆಗಳಲ್ಲಿ ಅಗ್ನಿಶಾಮಕ ಉಪಕರಣಗಳ ನಿರ್ವಹಣೆ ಮುಂತಾದ ಅನೇಕ ವಿಚಾರಗಳಲ್ಲಿ ಈ ತಂತ್ರಜ್ಞಾನ ನೆರವಾಗುತ್ತಿದೆ.

ಕರಾರು ಪತ್ರಗಳನ್ನು ಸಿದ್ಧಪಡಿಸುವುದು, ಹಣವನ್ನು ಪಡೆಯಲು ಗ್ರಾಹಕರಿಗೆ ನೆರವಾಗುವುದೇ ಮುಂತಾದ ವಿಚಾರಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ವಿಮಾ ಸಂಸ್ಥೆಗಳು ಕೃತಕ ಬುದ್ಧಿಮತ್ತೆಯನ್ನು ಬಳಸಲು ಆರಂಭಿಸಿವೆ. ಗ್ರಾಹಕರ ಬಗ್ಗೆ ಮಾಹಿತಿ ಸಂಗ್ರಹಿಸಿ (ಕೆವೈಸಿ) ಅದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಫೇಸಿಯಲ್‌ ಮ್ಯಾಪಿಂಗ್‌ ತಂತ್ರಜ್ಞಾನ ನೆರವಾಗುತ್ತಿದೆ. ಇದರಿಂದಾಗಿ ವಂಚನೆ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ. ಇಂಥ ಅನೇಕ ಹೊಸಹೊಸ ತಂತ್ರಜ್ಞಾನಗಳನ್ನು ಬಳಸುವ ಮೂಲಕ ವಿಮಾ ಸಂಸ್ಥೆಗಳು ಗ್ರಾಹಕರ ಸಮಯವನ್ನು ಉಳಿತಾಯ ಮಾಡುತ್ತಿವೆ.

ಬೆಳೆ ಹಾನಿ ಮೇಲೆ ನಿಗಾ ವಹಿಸುವ ಸಲುವಾಗಿ ಕೆಲವು ವಿಮಾ ಸಂಸ್ಥೆಗಳು ಉಪಗ್ರಹ ಚಿತ್ರಗಳನ್ನು ಬಳಸಿಕೊಳ್ಳುತ್ತಿವೆ. ಬೆಳೆ, ಪವನ ವಿದ್ಯುತ್, ಸೌರವಿದ್ಯುತ್‌ ಘಟಕ ಮುಂತಾದವುಗಳ ಪರಿಶೀಲನೆಗಾಗಿ ಕೆಲವು ವಿಮಾ ಕಂಪನಿಗಳು ಡ್ರೋನ್‌ ಆಧಾರಿತ ತಂತ್ರಜ್ಞಾನವನ್ನು ಬಳಸುತ್ತಿವೆ. ಹಿಂದೆಲ್ಲ ಇದು ಸಾಧ್ಯವಾಗುತ್ತಿರಲಿಲ್ಲ.

ಈಗ ಸಾಕಷ್ಟು ದತ್ತಾಂಶ ಲಭ್ಯವಾಗುತ್ತಿದೆ. ಇದರ ಗರಿಷ್ಠ ಉಪಯೋಗವನ್ನು ಹೇಗೆ ಪಡೆಯಬಹುದು ಎಂಬ ನಿಟ್ಟಿನಲ್ಲಿ ವಿಮಾ ಸಂಸ್ಥೆಗಳು ಚಿಂತನೆ ಆರಂಭಿಸಿವೆ. ಹೊಸ ಹೊಸ ತಂತ್ರಜ್ಞಾನ ಬಂದಂತೆ ಹೊಸ ರೂಪದ (ಧ್ವನಿ, ಚಿತ್ರ ಹಾಗೂ ದಾಖಲೆ) ದತ್ತಾಂಶಗಳು ಲಭಿಸುತ್ತಿವೆ. ಈ ದತ್ತಾಂಶವನ್ನು ಸರಿಹೊಂದಿಸಲು, ಸಂಗ್ರಹಿಸಲು ಮತ್ತು ಅದಕ್ಕೆ ಅನುಗುಣವಾಗಿ ಭವಿಷ್ಯವನ್ನು ಮರುಶೋಧಿಸಲು ಸಹಕಾರಿಯಾಗುವ ಹೊಸ ತಂತ್ರಜ್ಞಾನಗಳನ್ನು ಬಳಸಲು ಸಂಸ್ಥೆಗಳು ಪ್ರಯತ್ನಿಸುತ್ತಿವೆ.

(ಲೇಖಕ: ಐಸಿಐಸಿಐ ಲೊಂಬಾರ್ಡ್‌ ಜನರಲ್‌ ಇನ್ಶುರೆನ್ಸ್‌ನ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT