ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ, ಜಿಎಸ್‌ಟಿ ರಿಟರ್ನ್‌ ಸಲ್ಲಿಕೆ ಗಡುವು ವಿಸ್ತರಣೆ

ಶೀಘ್ರದಲ್ಲಿಯೇ ಆರ್ಥಿಕ ಕೊಡುಗೆ ಘೋಷಣೆ; ನಿರ್ಮಲಾ ಸೀತಾರಾಮನ್
Last Updated 24 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಕೊರೊನಾ–2’ ವೈರಸ್‌ನಿಂದಾಗಿ ಉದ್ಭವಿಸಿರುವ ಆರ್ಥಿಕ ಸಂಕಷ್ಟದ ಕಾರಣಕ್ಕೆ ಕೇಂದ್ರ ಸರ್ಕಾರವು ತೆರಿಗೆ, ಕಂಪನಿ ಕಾಯ್ದೆ ಮತ್ತು ಬ್ಯಾಂಕಿಂಗ್‌ ವಹಿವಾಟಿಗೆ ಸಂಬಂಧಿಸಿದಂತೆ ಹಲವಾರು ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ.

ಆದಾಯ ತೆರಿಗೆ ವಿವರ ಸಲ್ಲಿಕೆ, ಜಿಎಸ್‌ಟಿ ರಿಟರ್ನ್‌, ಆಧಾರ್‌ ಜತೆ ಪ್ಯಾನ್‌ ಜೋಡಣೆ ಮತ್ತು ತೆರಿಗೆ ವಿವಾದ ಇತ್ಯರ್ಥಕ್ಕೆ ಆರಂಭಿಸಿರುವ ’ವಿವಾದ್ ಸೆ ವಿಶ್ವಾಸ್‌ ಯೋಜನೆಯ ಗಡುವನ್ನು ಮೂರು ತಿಂಗಳವರೆಗೆ (ಮಾರ್ಚ್‌ 31ರಿಂದ ಜೂನ್‌ 30) ವಿಸ್ತರಿಸಿದೆ.

ಬ್ಯಾಂಕ್‌ ಖಾತೆಯಲ್ಲಿ ಪ್ರತಿ ತಿಂಗಳೂ ಕನಿಷ್ಠ ಸರಾಸರಿ ಮೊತ್ತ (ಎಎಂಬಿ) ಕಾಯ್ದುಕೊಳ್ಳದಿದ್ದರೆ ವಿಧಿಸಲಾಗುತ್ತಿದ್ದ ಶುಲ್ಕ ರದ್ದುಪಡಿಸಲಾಗಿದೆ. ಡೆಬಿಟ್‌ ಕಾರ್ಡ್‌ ಬಳಸಿ ಯಾವುದೇ ಬ್ಯಾಂಕ್‌ನ ಎಟಿಎಂನಿಂದ ಹಣ ಪಡೆಯುವುದು ಮೂರು ತಿಂಗಳವರೆಗೆ ಉಚಿತವಾಗಿರುತ್ತದೆ.

2018–19ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಗಡುವು ವಿಸ್ತರಿಸಲಾಗಿದೆ. ವಿಳಂಬ ಪಾವತಿಗೆ ವಿಧಿಸಲಾಗುತ್ತಿದ್ದ ಶೇ 12ರಷ್ಟು ಬಡ್ಡಿ ದರವನ್ನು ಶೇ 9ಕ್ಕೆ ತಗ್ಗಿಸಲಾಗಿದೆ.

ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆಯ ಗಡುವನ್ನು ಕೂಡ ಜೂನ್‌ 30ರವರೆಗೆ ವಿಸ್ತರಿಸಲಾಗಿದೆ. ಜಿಎಸ್‌ಟಿ ರಿಟರ್ನ್ಸ್‌ಗಳನ್ನು ತಡವಾಗಿ ಸಲ್ಲಿಸುವುದಕ್ಕೆ ವಿಧಿಸಲಾಗುತ್ತಿದ್ದ ದಂಡ ರದ್ದುಪಡಿಸಲಾಗಿದೆ. ವಾರ್ಷಿಕ ₹ 5 ಕೋಟಿಗಿಂತ ಕಡಿಮೆ ಮೊತ್ತದ ವಹಿವಾಟು ನಡೆಸುವ ಕಂಪನಿಗಳ ವಿಳಂಬ ರಿಟರ್ನ್ಸ್‌ಗೆ ವಿಧಿಸಲಾಗುತ್ತಿದ್ದ ಶುಲ್ಕ, ದಂಡ ಅಥವಾ ಬಡ್ಡಿ ಕೈಬಿಡಲಾಗಿದೆ.

ಆಧಾರ್‌ ಜತೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಜೋಡಿಸಲು ಇದೇ 31ಕ್ಕೆ ಕೊನೆಗೊಳ್ಳಲಿದ್ದ ಗಡುವನ್ನೂ ಜೂನ್‌ 30ಕ್ಕೆ ವಿಸ್ತರಿಸಲಾಗಿದೆ.

ಕಂಪನಿ ನಿಯಮ ಸಡಿಲಿಕೆ: ಕಂಪನಿ ಕಾಯ್ದೆಯ ನಿಯಮಗಳಲ್ಲಿಯೂ ಅನೇಕ ಸಡಿಲಿಕೆ ಪ್ರಕಟಿಸಲಾಗಿದೆ.

ಕಡ್ಡಾಯವಾಗಿ ನಡೆಸಬೇಕಾಗಿದ್ದ ನಿರ್ದೇಶಕ ಮಂಡಳಿ ಸಭೆ ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಂಪನಿಗಳು ಸಲ್ಲಿಸಬೇಕಾಗಿದ್ದ ರಿಟರ್ನ್‌ ನಿಬಂಧನೆಗಳಿಗೆ ವಿನಾಯ್ತಿ ನೀಡಲಾಗಿದೆ.

‘ದೇಶದಲ್ಲಿ ಬಹುತೇಕ ಎಲ್ಲೆಡೆ ಆರ್ಥಿಕ ಚಟುವಟಿಕೆ ಮತ್ತು ಜನಜೀವನ ನಿರ್ಬಂಧ ಜಾರಿಗೆ ಬಂದಿರುವುದರಿಂದ ಸಾರ್ವಜನಿಕರು, ವ್ಯಾಪಾರಸ್ಥರು, ಉದ್ಯಮ ಸಮೂಹಕ್ಕೆ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯ ಕಾರಣಕ್ಕೆ ಗಡುವು ವಿಸ್ತರಿಸಲಾಗಿದೆ‘ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ವಿವಾದ್‌ ಸೆ ವಿಶ್ವಾಸ್‌: ತೆರಿಗೆ ವಿವಾದ ಇತ್ಯರ್ಥಕ್ಕೆ ನೀಡಲಾಗಿದ್ದ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಗಡುವು ವಿಸ್ತರಣೆಯ ಪ್ರಯೋಜನ ಪಡೆದುಕೊಳ್ಳುವವರು ಅಸಲಿನ ಮೇಲೆ ಶೇ 10ರಷ್ಟು ಬಡ್ಡಿ ಪಾವತಿಸುವ ಅಗತ್ಯ ಇಲ್ಲ.

ಆದಾಯ ತೆರಿಗೆ ಕಾಯ್ದೆಯಡಿ ನೀಡಲಾಗುತ್ತಿದ್ದ ವಿವಿಧ ನೋಟಿಸ್‌ಗಳ ಜಾರಿ ದಿನವನ್ನೂ ವಿಸ್ತರಿಸಲಾಗಿದೆ.

ಜೂನ್‌ 30ರವರೆಗೆ ಗಡುವು ವಿಸ್ತರಣೆ

* 2018–19ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ

* ಜಿಎಸ್‌ಟಿ ರಿಟರ್ನ್‌ ಸಲ್ಲಿಕೆ

* ಆಧಾರ್‌ ಜತೆ ಪ್ಯಾನ್‌ ಜೋಡಣೆ

* ತೆರಿಗೆ ವಿವಾದ ಇತ್ಯರ್ಥದ ’ವಿವಾದ್ ಸೆ ವಿಶ್ವಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT