ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಿಂದ ತುರ್ತು ನೆರವಿನ ನಿರೀಕ್ಷೆಯಲ್ಲಿ ಜೆಟ್‌ ಏರ್‌ವೇಸ್‌

Last Updated 16 ಏಪ್ರಿಲ್ 2019, 18:32 IST
ಅಕ್ಷರ ಗಾತ್ರ

ನವದೆಹಲಿ: ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌, ಬ್ಯಾಂಕ್‌ಗಳಿಂದ ತುರ್ತು ಹಣಕಾಸು ನೆರವನ್ನು ಎದುರು ನೋಡುತ್ತಿರುವುದಾಗಿ ಮಂಗಳವಾರ ತಿಳಿಸಿದೆ.

ತನ್ನ ವಿಮಾನ ಸೇವೆಗಳಲ್ಲಿ ಇನ್ನಷ್ಟು ಅಡಚಣೆ ಉಂಟಾಗುವುದನ್ನು ತಪ್ಪಿಸಲು ಜೆಟ್‌ ಏರ್‌ವೇಸ್‌, ಎಸ್‌ಬಿಐ ನೇತೃತ್ವದಲ್ಲಿನ 26 ಬ್ಯಾಂಕ್‌ಗಳ ಒಕ್ಕೂಟದಿಂದ ತುರ್ತು ಹಣಕಾಸು ಬೆಂಬಲ ಸಿಗುವ ನಿರೀಕ್ಷೆಯಲ್ಲಿ ಇದೆ.

ಮಂಗಳವಾರ ಸಂಸ್ಥೆಯ ಕೇವಲ 5 ವಿಮಾನಗಳು ಹಾರಾಟ ನಡೆಸಿವೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ತನ್ನ ವಿಮಾನಗಳ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ ಎಂದೂ ಸಂಸ್ಥೆ ತಿಳಿಸಿದೆ.

ಷೇರುಪೇಟೆಗೆ ಮಾಹಿತಿ: ತುರ್ತು ನೆರವು ಪಡೆಯಲು ಸಂಸ್ಥೆಯ ನಿರ್ದೇಶಕ ಮಂಡಳಿಯು ಬ್ಯಾಂಕ್‌ಗಳ ಜತೆ ಮಾತುಕತೆ ನಡೆಸುತ್ತಿದೆ. ಈ ಸಂಬಂಧ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರ ಜತೆಗೂ ನಿರಂತರ ಸಂಪರ್ಕದಲ್ಲಿ ಇದೆ ಎಂದು ಸಂಸ್ಥೆಯು ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.

ಸಂಸ್ಥೆಯು ತಾತ್ಕಾಲಿಕವಾಗಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿರುವುದಕ್ಕೆಸಂಬಂಧಿಸಿದಂತೆ ಷೇರುಪೇಟೆಯು ಸಂಸ್ಥೆಯಿಂದ ವಿವರಣೆ ಬಯಸಿತ್ತು.

ಸದ್ಯದಲ್ಲೇ ಬಂಡವಾಳದ ನೆರವು ನೀಡಲಾಗುವುದು. ಬಿಕ್ಕಟ್ಟು ಇತ್ಯರ್ಥಕ್ಕೆ ಸದ್ಯಕ್ಕೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಮೊರೆ ಹೋಗುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಿಮ ನಿರ್ಧಾರ ಇಲ್ಲ: ಸಂಸ್ಥೆಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಬ್ಯಾಂಕ್‌ಗಳು ಬದ್ಧವಾಗಿವೆ. ಆದರೆ, ಅದಿನ್ನೂ ಅಂತಿಮಗೊಂಡಿಲ್ಲ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಮೆಹ್ತಾ ಹೇಳಿದ್ದಾರೆ. ಸಂಸ್ಥೆಯು ತುರ್ತ ನೆರವಿಗೆ ಮೊರೆ ಇಟ್ಟಿರುವುದನ್ನು ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್‌ ಸಿಂಗ್‌ ಖರೋಲಾ ಅವರೂ ಖಚಿತಪಡಿಸಿದ್ದಾರೆ.

ಗುರುವಾರ ಸಭೆ: ವಿಮಾನ ಪ್ರಯಾಣ ದರ ಏರಿಕೆ ಆಗುತ್ತಿರುವುದೂ ಸೇರಿದಂತೆ ದೇಶಿ ವಿಮಾನಯಾನ ರಂಗ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಚರ್ಚಿಸಲು ಸಚಿವಾಲಯವು ಇದೇ ಗುರುವಾರ (ಏ. 18) ವಿಮಾನಯಾನ ಸಂಸ್ಥೆ ಮತ್ತು ವಿಮಾನ ನಿಲ್ದಾಣ ಪ್ರತಿನಿಧಿಗಳ ಸಭೆ ಕರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT