ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರಿಯಾದ ಸಮಯಕ್ಕೆ’ ಲಗ್ಗೆ ಇಟ್ಟ ಜಿಯೊ ಪೋಸ್ಟ್‌ಪೇಯ್ಡ್‌

Last Updated 23 ಸೆಪ್ಟೆಂಬರ್ 2020, 14:33 IST
ಅಕ್ಷರ ಗಾತ್ರ

ನವದೆಹಲಿ: ಜಿಯೊ ಹೊಸದಾಗಿ ಪರಿಚಯಿಸಿರುವ ಪೋಸ್ಟ್‌ಪೇಯ್ಡ್ ಯೋಜನೆಗಳು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಲಗ್ಗೆ ಹಾಕಿದ್ದು, ವೊಡಾಫೋನ್‌ ಐಡಿಯಾದಿಂದ ಒಂದಿಷ್ಟು ಮಾರುಕಟ್ಟೆ ಪಾಲನ್ನು ಬಾಚಿಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೋಸ್ಟ್‌ಪೇಯ್ಡ್ ಗ್ರಾಹಕರ ನೆಲೆಯಲ್ಲಿ ಆಗಬಹುದಾದ ಬದಲಾವಣೆಗಳಿಂದ ಅತಿಹೆಚ್ಚಿನ ಹಾನಿ ಆಗುವ ಸಾಧ್ಯತೆ ಇರುವುದು ವೊಡಾಫೋನ್‌ ಐಡಿಯಾ ಸಮೂಹಕ್ಕೆ. ಏರ್‌ಟೆಲ್‌ನ ನೆಟ್‌ವರ್ಕ್‌ ಮತ್ತು ಅದು ನೀಡುತ್ತಿರುವ ಡಿಜಿಟಲ್‌ ಕೊಡುಗೆಗಳು ಚೆನ್ನಾಗಿರುವ ಕಾರಣ, ಏರ್‌ಟೆಲ್‌ನ ಪೋಸ್ಟ್‌ಪೇಯ್ಡ್‌ ಗ್ರಾಹಕರು ಮನಸ್ಸು ಬದಲಾಯಿಸುವ ಸಾಧ್ಯತೆ ಕಡಿಮೆ ಎಂದು ಜೆಪಿ ಮಾರ್ಗನ್‌ ವರದಿ ಹೇಳಿದೆ.

₹ 399ರಿಂದ ಆರಂಭವಾಗುವ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಜಿಯೊ ಮಂಗಳವಾರ ಘೋಷಿಸಿದೆ. ಅದು ಪ್ರಕಟಿಸಿರುವ ಅತ್ಯಂತ ಕಡಿಮೆ ಮಾಸಿಕ ಚಂದಾದ ಆಫರ್‌ ಜೊತೆಗೆ ಕೂಡ ನೆಟ್‌ಫ್ಲಿಕ್ಸ್‌, ಪ್ರೈಮ್‌ ವಿಡಿಯೊ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ ಚಂದಾದಾರಿಕೆ ಗ್ರಾಹಕರಿಗೆ ಲಭ್ಯವಾಗುತ್ತದೆ.

‘ತನ್ನ ಜೊತೆಗೆ ಈಗಾಗಲೇ ಇರುವ ಪ್ರೀಪೇಯ್ಡ್‌ ಗ್ರಾಹಕರನ್ನು ಕೂಡ ಪೋಸ್ಟ್‌ಪೇಯ್ಡ್‌ ಗ್ರಾಹಕರನ್ನಾಗಿ ಪರಿವರ್ತಿಸುವ ಉದ್ದೇಶ ಜಿಯೊ ಕಂಪನಿಗೆ ಇದ್ದಿರಬಹುದು’ ಎಂದೂ ಜೆಪಿ ಮಾರ್ಗನ್ ಹೇಳಿದೆ. ಇದರಿಂದಾಗಿ, ಪ್ರತಿ ಗ್ರಾಹಕನಿಂದ ಕಂಪನಿಗೆ ದೊರೆಯುವ ಆದಾಯದ (ಎಆರ್‌ಪಿಯು) ಮಟ್ಟ ಹೆಚ್ಚಳ ಆಗಬಹುದು. ಅಂತಿಮವಾಗಿ, ಇದರಿಂದ ದೂರಸಂಪರ್ಕ ಉದ್ಯಮಕ್ಕೆ ಒಳಿತೇ ಆಗಬಹುದು' ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

‘ಜಿಯೊ ಪೋಸ್ಟ್‌ಪೇಯ್ಡ್‌ ಜೊತೆ ಕೊಡುವುದಾಗಿ ಘೋಷಿಸಿರುವ ಒಟಿಟಿ ವೇದಿಕೆಗಳ ಚಂದಾದಾರಿಕೆಯನ್ನು ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಕೂಡ ಗ್ರಾಹಕರಿಗೆ ಕೊಡಬಹುದು ಎಂಬುದು ನಮ್ಮ ನಿರೀಕ್ಷೆ’ ಎಂದು ಅದು ಹೇಳಿದೆ.

ಒಟಿಟಿ ವೇದಿಕೆಗಳ ಚಂದಾದಾರಿಕೆಯನ್ನು ‘ಕೈಗೆಟಕುವ ಬೆಲೆಗೆ’ ಪೋಸ್ಟ್‌ಪೇಯ್ಡ್‌ ಯೋಜನೆಗಳ ಜೊತೆ ನೀಡುತ್ತಿರುವುದು ಗ್ರಾಹಕರ ಪಾಲಿಗೆ ದೊಡ್ಡ ಆಕರ್ಷಣೆ ಆಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT