ಗುರುವಾರ , ಏಪ್ರಿಲ್ 2, 2020
19 °C

ರಾಜ್ಯದಲ್ಲಿ ಚೇತರಿಕೆಯತ್ತ ಮಾರಾಟ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋಳಿಮಾಂಸ ಸೇವಿಸಿದರೆ ಕೋವಿಡ್‌ ವೈರಸ್‌ ಸೋಂಕು ತಗಲುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸಂದೇಶದಿಂದ ಪ್ರತಿನಿತ್ಯ ಮಾರಾಟವಾಗುತ್ತಿದ್ದ ಮಾಂಸದ ಪ್ರಮಾಣ 2 ಸಾವಿರ ಟನ್‌ನಷ್ಟು ಕುಸಿತ ಕಂಡಿತ್ತು. 

ಮಾರಾಟದ ಪ್ರಮಾಣದಲ್ಲಿ ಚೇತರಿಕೆ ಕಂಡಿದ್ದರೂ ಸಗಟು ಮಾರಾಟ ದರ ಮಾತ್ರ ಏರಿಕೆ ಕಾಣುತ್ತಿಲ್ಲ ಎನ್ನುತ್ತಿದ್ದಾರೆ ಮಾರಾಟಗಾರರು.

‘ಕೋಳಿಮಾಂಸ ಸೇವಿಸಿದರೆ ಸೋಂಕು ತಗಲುತ್ತದೆ ಎಂಬುದು ಸುಳ್ಳು ಸುದ್ದಿ ಎಂಬುದು ಜನರಿಗೆ ಈಗ ತಿಳಿಯುತ್ತಿದೆ. ಹಾಗಾಗಿ, ಕ್ರಮೇಣ ವ್ಯಾಪಾರ ಚೇ‌ತರಿಕೆ ಕಾಣುತ್ತಿದೆ’ ಎಂದು ಕೋಳಿಮಾಂಸ ಮಾರಾಟ ಕುರಿತು ಸಲಹೆ ನೀಡಲೆಂದೇ ರಚಿಸಲಾಗಿರುವ ಪಶುವೈದ್ಯ ತಜ್ಞರ ಸಂಘದ ಅಧ್ಯಕ್ಷ ಪ್ರೊ. ಜಿ. ದೇವೇಗೌಡ ಹೇಳುತ್ತಾರೆ. 

‘ರಾಜ್ಯದಲ್ಲಿ ದಿನವೊಂದಕ್ಕೆ ಸರಾಸರಿ 2,400 ಟನ್‌ ಕೋಳಿ ಮಾಂಸ ಮಾರಾಟವಾಗುತ್ತದೆ. ಸುಳ್ಳು ಸುದ್ದಿ ನಂತರ, ಈ ಪ್ರಮಾಣ 1,800 ಟನ್‌ಗೆ ಇಳಿದಿತ್ತು. ವ್ಯಾಪಾರ ಪ್ರಮಾಣ ಶೇ 25ರಷ್ಟು ಕಡಿಮೆಯಾಗಿದ್ದರೆ, ದರ ಶೇ 50ರಷ್ಟು ಕುಸಿದಿತ್ತು. ಈಗ, ದಿನಕ್ಕೆ 2,000 ಟನ್‌ನಿಂದ 2,200 ಟನ್‌ವರೆಗೆ ಮಾರಾಟವಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಶೇ 30ರಷ್ಟು ವ್ಯಾಪಾರ ಕುಸಿತ ಕಂಡಿದ್ದರಿಂದ ಕೋಳಿ ಮಾಂಸದ ಬೆಲೆಯಲ್ಲಿಯೂ ಇಳಿಕೆಯಾಗಿತ್ತು. ಈಗ, ಕೆಜಿಗೆ ₹ 70ರಂತೆ ಮಾರಾಟವಾಗುತ್ತಿದೆ.ಪೌಲ್ಟ್ರಿಯಿಂದ (ಫಾರಂಗಳಿಂದ) ₹ 50ರಂತೆ ಖರೀದಿಸಲಾಗುತ್ತಿದೆ’ ಎಂದು ವೆಂಕೋಬ ಚಿಕನ್‌ ಕಂಪನಿಯ ಬೆಂಗಳೂರು ಮಾರಾಟ ವಿಭಾಗದ ಮುಖ್ಯಸ್ಥ ಸಂದೀಪ್‌ ತಿಳಿಸಿದರು. 

ದರ ಕಡಿಮೆಯಿಲ್ಲ: ‘ಸಗಟು ವ್ಯಾಪಾರಸ್ಥರು ನಮಗೆ ಕೆಜಿಗೆ ₹160ರಿಂದ ₹170ರಂತೆ ಮಾರಾಟ ಮಾಡು
ತ್ತಿದ್ದಾರೆ. ನಮ್ಮ ಲಾಭವನ್ನು ಗಮನದಲ್ಲಿಟ್ಟುಕೊಂಡು ಸ್ಕಿನ್‌ ಔಟ್‌ ಕೋಳಿಮಾಂಸವನ್ನು ₹200ರಿಂದ ₹220ರಂತೆ ಮಾರಾಟ ಮಾಡುತ್ತಿದ್ದೇವೆ’ ಎಂದು ಗಂಗಾನಗರದ ಕೋಳಿಮಾಂಸ ವ್ಯಾಪಾರಿ ಸೈಯದ್‌ ಹೇಳುತ್ತಾರೆ.

ಯಾರಿಗೋ ಲಾಭ:‘ವೈರಸ್‌ ಭೀತಿಯಿಂದ ಮಾರುಕಟ್ಟೆ ಕುಸಿದಿದೆ ಎಂದು ನಮ್ಮಿಂದ ಕೆಜಿಗೆ ₹30ರಿಂದ ₹40ರಂತೆ ಖರೀದಿಸಲಾಗುತ್ತಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹200ರಂತೆ ಮಾರಾಟ ಮಾಡಲಾಗು
ತ್ತಿದೆ. ವೈರಸ್‌ ಹೆಸರಲ್ಲಿ ಕೆಲವರು ಲಾಭ ಮಾಡಿಕೊಳ್ಳುತ್ತಿದ್ದರೆ, ನಾವು ನಷ್ಟ ಅನುಭವಿಸುವಂತಾಗಿದೆ’ ಎಂದು ಕೋಳಿಫಾರಂ ಮಾಲೀಕ ಡಿ. ಕಿರಣ್‌ ಹೇಳುತ್ತಾರೆ.

‘ತಪ್ಪು ಮಾಹಿತಿ ಹರಡಿದರೆ ಜೈಲು’

‘ಕೋಳಿ ಮಾಂಸ ಸೇವಿಸುವುದರಿಂದ ಕೋವಿಡ್‌ ವೈರಸ್ ಸೋಂಕು ತಗುಲುತ್ತದೆ ಎಂದು ವಾಟ್ಸ್‌ಆ್ಯಪ್‌ನಲ್ಲಿ ತಪ್ಪು ಸಂದೇಶ ಹರಿಯಬಿಡುವವರ ವಿರುದ್ಧ ಈಗಾಗಲೇ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇವೆ’ ಎಂದು ದೇವೇಗೌಡ ತಿಳಿಸಿದರು.  ‘ಪಶ್ಚಿಮ ಬಂಗಾಳದಲ್ಲಿಯೂ ಈ ಬಗ್ಗೆ ದೂರು ನೀಡಲಾಗಿತ್ತು. ವಾಟ್ಸ್‌ಆ್ಯಪ್‌ನಲ್ಲಿ ಈ ಬಗ್ಗೆ ತಪ್ಪು ಮಾಹಿತಿ ಹಂಚಿದವರಿಗೆ ಬಂಧಿಸಿ, ಜೈಲಿಗೆ ಹಾಕಲಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು