ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಹಿಡಿತಕ್ಕೆ ಐಡಿಬಿಐ ಬ್ಯಾಂಕ್‌

ಶೇ 51 ರಷ್ಟು ಷೇರು ಖರೀದಿಗೆ ಆಡಳಿತ ಮಂಡಳಿ ಒಪ್ಪಿಗೆ
Last Updated 16 ಜುಲೈ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಐಡಿಬಿಐ ಬ್ಯಾಂಕ್‌ನ ಶೇ 51 ರಷ್ಟು ಷೇರುಗಳನ್ನು ಖರೀದಿಸಲು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಚಂದರ ಗರ್ಗ್‌ ತಿಳಿಸಿದ್ದಾರೆ.

ಆಡಳಿತ ಮಂಡಳಿ ಒಪ್ಪಿಗೆ ನೀಡಿರುವುದರಿಂದ ಎಲ್‌ಐಸಿ ಇದೀಗ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಒಪ್ಪಿಗೆ ಕೇಳಲು ಅವಕಾಶ ದೊರೆತಂತಾಗಿದೆ. ಷೇರು ಖರೀದಿಗೆ ಸಂಬಂಧಿಸಿದಂತೆವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಈಗಾಗಲೇ ತನ್ನ ಒಪ್ಪಿಗೆ ನೀಡಿದೆ. ಬ್ಯಾಂಕ್‌ ಸಹ ತನ್ನ ಆಡಳಿತ ಮಂಡಳಿಯಿಂದ ಒಪ್ಪಿಗೆ ಪಡೆಯಬೇಕಾಗಿದೆ.

‘ಎಲ್‌ಐಸಿಯು ಸದ್ಯಕ್ಕೆ ಬ್ಯಾಂಕ್‌ನಲ್ಲಿ ಶೇ 8 ರಷ್ಟು ಪಾಲು ಹೊಂದಿದೆ. ಆದ್ಯತಾ ಷೇರುಗಳ ಮೂಲಕಹೆಚ್ಚುವರಿ ಷೇರುಗಳನ್ನು ಖರೀದಿಸುವ ಸಾಧ್ಯತೆ ಇದೆ. ಅಗತ್ಯ ಬಿದ್ದರೆ, ಬ್ಯಾಂಕ್‌ನಲ್ಲಿ ಕಡಿಮೆ ಪ್ರಮಾಣದಲ್ಲಿ ಷೇರುಗಳ ಪಾಲು ಹೊಂದಿರುವವರಿಗೆ ಮುಕ್ತ ಕೊಡುಗೆ ಕೊಡುವ ಸಾಧ್ಯತೆಯೂ ಇದೆ’ ಎಂದು ಗರ್ಗ್‌ ತಿಳಿಸಿದ್ದಾರೆ.

ಈ ಷೇರು ಖರೀದಿಯಿಂದ ನಷ್ಟದಲ್ಲಿರುವ ಐಡಿಬಿಐ ಬ್ಯಾಂಕ್‌ಗೆ ₹ 10 ಸಾವಿರ ಕೋಟಿಗಳಿಂದ ₹ 13 ಸಾವಿರ ಕೋಟಿ ಬಂಡವಾಳ ನೆರವು ಸಿಗಲಿದೆ. ಗರಿಷ್ಠ ಪಾಲು ಹೊಂದುವುದರಿಂದ ಎಲ್‌ಐಸಿಯು ಬ್ಯಾಂಕ್‌ ಆಡಳಿತ ಮಂಡಳಿಗೆ ಕನಿಷ್ಠ ನಾಲ್ಕು ಸದಸ್ಯರನ್ನು ನೇಮಿಸಲಿದೆ ಎಂದು ಮೂಲಗಳು ಹೇಳಿವೆ.

ಷೇರು ಖರೀದಿ ಒಪ್ಪಂದವು ಪೂರ್ಣಗೊಂಡ ಬಳಿಕ ನಷ್ಟದಲ್ಲಿರುವ ಬ್ಯಾಂಕ್‌ನ ಪುನಶ್ಚೇತನಕ್ಕೆ ಬಂಡವಾಳ ನೆರವು ಸಿಗಲಿದೆ.

ಎಲ್‌ಐಸಿ ವಹಿವಾಟು ವಿಸ್ತರಣೆಗೆ ಐಡಿಬಿಐನ 2 ಸಾವಿರ ಶಾಖೆಗಳು ಸಿಗಲಿವೆ. ಇದೇ ವೇಳೆ ಎಲ್‌ಐಸಿನ ನಿಧಿಗಳು ಬ್ಯಾಂಕ್‌ ಬೆಳವಣಿಗೆಗೆ ಬಳಕೆಯಾಗಲಿವೆ. 22 ಕೋಟಿ ವಿಮೆದಾರರ ಖಾತೆಗಳು ಸಹ ಬ್ಯಾಂಕ್‌ಗೆ ಲಭ್ಯವಾಗಲಿವೆ.

ವಿಫಲವಾಗಿದ್ದ ಖಾಸಗೀಕರಣ ಯತ್ನ:ಐಡಿಬಿಐ ಬ್ಯಾಂಕ್‌ನಲ್ಲಿ ಶೇ 86 ರಷ್ಟು ಷೇರುಪಾಲು ಹೊಂದಿರುವ ಕೇಂದ್ರ ಸರ್ಕಾರ, ತನ್ನ ನಿಯಂತ್ರಣ ಬಿಟ್ಟುಕೊಟ್ಟು ಖಾಸಗೀಕರಣ ಮಾಡುವ ಪ್ರಯತ್ನವನ್ನು ಈ ಹಿಂದೆಯೇ ನಡೆಸಿತ್ತಾದರೂ ಅದು ಫಲ ನೀಡಿರಲಿಲ್ಲ.

ಬ್ಯಾಂಕ್‌ನ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣಕ್ಕೆ ಖಾಸಗೀಕರಣ ಸಾಧ್ಯವಾಗಿರಲಿಲ್ಲ. ನಷ್ಟದ ಪರಿಸ್ಥಿತಿ ಸುಧಾರಿಸುವ ಉದ್ದೇಶದಿಂದ ಆರ್‌ಬಿಐ ವಿಧಿಸಿರುವ ನಿರ್ಬಂಧಿತ ಕ್ರಮಗಳ ವ್ಯಾಪ್ತಿಗೆ ಈಗ ಬ್ಯಾಂಕ್‌ ಒಳಪಟ್ಟಿದೆ. ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಪ್ರಮಾಣದ ಸುಸ್ತಿ ಸಾಲವನ್ನೂ ಇದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT