ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮೀಣ ಪ್ರದೇಶದ ಜನರಿಗೆ ವಿಶೇಷ ವಿಮೆ: LIC

Published 17 ಡಿಸೆಂಬರ್ 2023, 15:43 IST
Last Updated 17 ಡಿಸೆಂಬರ್ 2023, 15:43 IST
ಅಕ್ಷರ ಗಾತ್ರ

ನವದೆಹಲಿ: ‘2047ರ ವೇಳೆಗೆ ಎಲ್ಲರಿಗೂ ವಿಮೆ’ ಸಾಧಿಸುವ ಪ್ರಯತ್ನದಲ್ಲಿ ಎಲ್‌ಐಸಿ ಮಹತ್ವದ ಪಾತ್ರ ವಹಿಸಲಿದೆ ಮತ್ತು ಆ ಉದ್ದೇಶವನ್ನು ಪೂರೈಸಲು ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಜನರಿಗೆ ಹೊಂದಿಕೆ ಆಗುವಂತಹ ವಿಮಾ ಪಾಲಿಸಿಯನ್ನು ರೂಪಿಸಲು ಯೋಜಿಸುತ್ತಿದೆ ಎಂದು ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಂತಿ ಭಾನುವಾರ ಹೇಳಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ವಿಮೆ ಅಗತ್ಯ ಇರುವ ಗರಿಷ್ಠ ಸಂಖ್ಯೆಯ ಜನರನ್ನು ತಲುಪುವುದಕ್ಕೆ ಒತ್ತು ನೀಡಲಾಗುವುದು. ಮುಂದಿನ ದಿನಗಳಲ್ಲಿ ನಮ್ಮ ಒಟ್ಟು ವ್ಯವಹಾರದಲ್ಲಿ ಗ್ರಾಮೀಣ ಪ್ರದೇಶದ ಪಾಲು ಹೆಚ್ಚಲಿದೆ ಎಂದು ಅವರು ಹೇಳಿದ್ದಾರೆ. 

‘ವಿಮಾ ನಿಯಂತ್ರಕರಿಗೆ ಕೃತಜ್ಞತೆ ಸಲ್ಲಿಸಲೇಬೇಕು. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ‘ವಿಮಾ ವಿಸ್ತಾರ್‌’ ಎಂಬ ಸಮಗ್ರವಾದ ವಿಮೆಯನ್ನು ಪ್ರಸ್ತಾಪಿಸಿದೆ. ಇದರಲ್ಲಿ ಜೀವ ವಿಮೆ, ಆರೋಗ್ಯ ವಿಮೆ ಮತ್ತು ಆಸ್ತಿ ವಿಮೆ ಅಡಕವಾಗಿದೆ’ ಎಂದು ಅವರು ಹೇಳಿದ್ದಾರೆ.

ಈ ವಿಮಾ ಪಾಲಿಸಿಯನ್ನು ಮಾರಾಟ ಮಾಡುವುದಕ್ಕಾಗಿ ‘ವಿಮಾ ವಾಹಕ’ರನ್ನು ನೇಮಕ ಮಾಡಲಾಗುವುದು. ಇದು ಮಹಿಳಾ ಕೇಂದ್ರಿತ ಮಾರಾಟ ಮಾದರಿ ಆಗಿರಲಿದೆ ಎಂದು ಅವರು ವಿವರಿಸಿದರು. 

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಮೆ ಮಾರಾಟ ಜಾಲವೊಂದನ್ನು ಸ್ಥಾಪಿಸುವ ಯೋಜನೆಯನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ರೂಪಿಸಿದೆ. ವಿಮಾ ವಾಹಕರಿಗೆ ಸಂಬಂಧಿಸಿದ ಕರಡು ಮಾರ್ಗಸೂಚಿಯನ್ನು ಈ ಜೂನ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಕಾರ್ಪೊರೇಟ್‌ ವಿಮಾ ವಾಹಕ ಮತ್ತು ವೈಯಕ್ತಿಕ ವಿಮಾ ವಾಹಕ ಎಂಬ ವಿಭಾಗಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾರ್ಪೊರೇಟ್‌ ವಿಮಾ ವಾಹಕ ಸಂಸ್ಥೆಯು ಕಾನೂನಿನ ಅನ್ವಯ ನೋಂದಣಿ ಆಗಿರಬೇಕು. ಅಂಥ ಸಂಸ್ಥೆಗಳನ್ನು ವಿಮಾ ಕಂಪನಿಗಳು ನೇಮಕ ಮಾಡಿಕೊಳ್ಳುತ್ತವೆ. ವೈಯಕ್ತಿಕ ವಿಮಾ ವಾಹಕರು ಎಂದರೆ ವಿಮಾ ಕಂಪನಿ ಅಥವಾ ಕಾರ್ಪೊರೇಟ್‌ ವಿಮಾ ವಾಹಕ ಸಂಸ್ಥೆಯು ನೇಮಕ ಮಾಡಿಕೊಂಡ ವ್ಯಕ್ತಿಯಾಗಿರುತ್ತಾರೆ ಎಂದಿದ್ದಾರೆ. 

ಗ್ರಾಹಕ ಕಚೇರಿಗೆ ಬರಬೇಕಾಗಿಲ್ಲ. ಮನೆಯಲ್ಲಿ ಕುಳಿತು ಮೊಬೈಲ್‌ ಮೂಲಕವೇ ಅಗತ್ಯ ಸೇವೆಗಳನ್ನು ಪಡೆದುಕೊಳ್ಳಬಹುದು
ಸಿದ್ಧಾರ್ಥ ಮೊಹಂತಿ ಎಲ್‌ಐಸಿ ಅಧ್ಯಕ್ಷ

ಸಂಪೂರ್ಣ ಡಿಜಿಟಲೀಕರಣದತ್ತ...

ಸಂಪೂರ್ಣ ಡಿಜಿಟಲೀಕರಣಗೊಳ್ಳಲು ಎಲ್‌ಐಸಿ ಮುಂದಾಗಿದೆ. ಅದಕ್ಕಾಗಿ ಡೈವ್‌ (ಡಿಜಿಟಲ್‌ ಇನ್ನೋವೇಷನ್‌ ಆ್ಯಂಡ್‌ ವ್ಯಾಲ್ಯೂ ಎನ್‌ಹಾನ್ಸ್‌ಮೆಂಟ್‌) ಎಂಬ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯನ್ನು ಮುನ್ನಡೆಸಲು ಸಮಾಲೋಚಕರನ್ನೂ ನೇಮಿಸಿದೆ.  ‘ನಮ್ಮ ಗ್ರಾಹಕರು ಮಧ್ಯವರ್ತಿಗಳು ಮಾರುಕಟ್ಟೆ ಸಿಬ್ಬಂದಿ ಮತ್ತು ನಮ್ಮೊಂದಿಗೆ ಕೆಲಸ ಮಾಡುವ ಎಲ್ಲರಿಗೂ ಅತ್ಯುತ್ತಮವಾದ ಡಿಜಿಟಲ್‌ ವ್ಯವಸ್ಥೆ ಒದಗಿಸುವುದು ನಮ್ಮ ಉದ್ದೇಶ. ಡೈವ್‌ ಮೂಲಕ ಅದನ್ನು ಸಾಧಿಸಲಿದ್ದೇವೆ’ ಎಂದು ಸಿದ್ಧಾರ್ಥ ಮೊಹಂತಿ ಹೇಳಿದ್ದಾರೆ.  ತನ್ನದೇ ಆದ ಫಿನ್‌ಟೆಕ್‌ ವಿಭಾಗ ಹೊಂದುವ ಬಗ್ಗೆ ಎಲ್‌ಐಸಿ ಪರಿಶೀಲನೆ ನಡೆಸುತ್ತಿದೆ. ಅದನ್ನು ಮುಂದೆ ವ್ಯಾಪಾರ ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT