ಶುಕ್ರವಾರ, ಅಕ್ಟೋಬರ್ 18, 2019
20 °C

ಜೀವ ವಿಮೆಯ ಹಲವು ಸೌಲಭ್ಯ

Published:
Updated:
Prajavani

ಉಳಿತಾಯ ಮಾಡಿದ ಹಣ ಗಳಿಸಿದಷ್ಟೇ ಮುಖ್ಯ. ಇಂದಿನ ಉಳಿತಾಯವು ಭವಿಷ್ಯದ ಜೀವನಕ್ಕೆ ಭದ್ರ ಅಡಿಪಾಯವಾಗಿರುತ್ತದೆ. ಹಣ ಉಳಿಸುವುದರಲ್ಲೂ ಹಲವಾರು ವಿಧಾನಗಳಿವೆ. ಅದರಲ್ಲಿ ಜೀವ ವಿಮೆಯು ನಿರಂತರ ಉಳಿತಾಯ ಹಾಗೂ ಜೀವನಕ್ಕೆ ಭದ್ರತೆ ಒದಗಿಸುವ ಬಹುಬಗೆಯ ಪ್ರಯೋಜನಕಾರಿ ಯೋಜನೆಯಾಗಿದೆ. ಜತೆಗೆ ಆದಾಯ ತೆರಿಗೆ ಪಾವತಿಸುತ್ತಿರುವವರಿಗೆ ತೆರಿಗೆಯನ್ನು ಗಮನಾರ್ಹ ಪ್ರಮಾಣದಲ್ಲಿ ಉಳಿಸಿಕೊಡುವ ಉಪಾಯವೂ ಆಗಿದೆ.

ಜೀವ ವಿಮೆಯಲ್ಲಿ ಸಿಗುವ ಹಣವು ಬರೀ ಉಳಿತಾಯ ಮಾಡಿದ (ಪ್ರೀಮಿಯಂ) ಹಣ ಮಾತ್ರವಾಗಿರುವುದಿಲ್ಲ. ಅದು ಪಾಲಿಸಿಯ ಅವಧಿಯ ನಂತರ   ಪಡೆದುಕೊಳ್ಳಲು ಇಚ್ಛಿಸಿದ (ವಿಮಾ ಮೊತ್ತ ಮತ್ತು ಬೋನಸ್ ) ಒಟ್ಟಾರೆ ಮೊತ್ತವಾಗಿರುತ್ತದೆ. ಅಂದರೆ ಮುಂದಿನ 15,20,25 ಅಥವಾ 30 ವರ್ಷಗಳಿಗೆ ಪಡೆದುಕೊಳ್ಳುವ ಹಣವು ಪಾಲಿಸಿದಾರರಿಗೆ ಪ್ರಾರಂಭದಲ್ಲಿಯೇ ನಿಶ್ಚಿತವಾಗಿರುತ್ತದೆ.

ಜೀವ ವಿಮೆ ಮಾಡಿಸಿದ ವ್ಯಕ್ತಿ ಬದುಕಿರುವವರೆಗೆ ಅಥವಾ ಒಂದು ನಿಶ್ಚಿತ ಕಾಲಾವಧಿಯವರೆಗೆ ಮಾತ್ರ ವಿಮೆಗೆ ಕಂತಿನ ಹಣ ತುಂಬಬೇಕಾಗುತ್ತದೆ. ಒಂದೊಮ್ಮೆ ಹೂಡಿಕೆ ಆರಂಭಿಸಿದ ವ್ಯಕ್ತಿಯು ಆಕಸ್ಮಿಕವಾಗಿ ಮೃತಪಟ್ಟರೆ ಅವರನ್ನೇ ಅವಲಂಬಿಸಿದ ಕುಟುಂಬದ ಸದಸ್ಯರಿಗೆ ನಿಗದಿತ ಮೊತ್ತ ಸೇರುತ್ತದೆ. ಹೀಗಾಗಿ ಇದು ಹಲವು ಬಗೆಯಲ್ಲಿ ಪ್ರಯೋಜನಕಾರಿಯಾದ ಉಳಿತಾಯ ಯೋಜನೆಯೂ ಆಗಿದೆ.

ಜೀವ ವಿಮೆಯನ್ನು ಕುಟುಂಬದ ಅಥವಾ ವ್ಯಕ್ತಿಯ ಆದ್ಯತೆಗಳಿಗೆ ತಕ್ಕಂತೆ ಪಡೆಯಬೇಕು. ದೀರ್ಘಕಾಲದ ಉಳಿತಾಯವು, ಸುದೀರ್ಘ ಅವಧಿಯ ಉದ್ದೇಶಗಳನ್ನೇ ಹೊಂದಿರುತ್ತದೆ. ಜನರ ವಿವಿಧ ಆದ್ಯತೆಗಳನ್ನು ಸಾಕಾರಗೊಳಿಸಲು ಜೀವ ವಿಮೆಯಲ್ಲಿ ಹಲವಾರು ಯೋಜನೆಗಳಿವೆ.

ಇತ್ತೀಚೆಗೆ ಬಹಳ ಕಡಿಮೆ ಅವಧಿಗೆ ಜೀವ ವಿಮೆ ಪಡೆಯಬೇಕೆಂಬುದು ಬಹಳಷ್ಟು ಜನರ ಆಶಯವಾಗಿದೆ. ಆದರೆ ಜೀವ ವಿಮೆಯನ್ನು ಸಾಧ್ಯವಾದಷ್ಟು ಹೆಚ್ಚಿನ ಅವಧಿಗೆ ಪಡೆಯುವುದು ಒಳ್ಳೆಯದು. ಏಕೆಂದರೆ ಯಾವುದೇ ವಿಧದ ಉಳಿತಾಯವು ಬಹಳಷ್ಟು ದಿನಗಳ ಕಾಲ ನಮ್ಮ ಬಳಿ ಉಳಿಯುವುದಿಲ್ಲ. ದಿನನಿತ್ಯದ ಅಗತ್ಯಗಳಿಗೆ ಬಳಕೆಯಾಗಿ ಬಿಡುತ್ತದೆ. ಕಾರಣ ದೀರ್ಘಾವಧಿಯ ಜೀವ ವಿಮೆ ಪಡೆಯುವುದು ಜಾಣತನದ ನಿರ್ಧಾರ.

ಜೀವ ವಿಮೆಯ ಬಗ್ಗೆ ಇಷ್ಟೆಲ್ಲಾ ತಿಳಿದಾದ ಮೇಲೆ ಯಾವ ಯೋಜನೆಗಳನ್ನು ಪಡೆಯುವುದು ಎನ್ನುವ ಗೊಂದಲ ಬಹಷ್ಟು ಜನರಿಗಿದೆ. ಅಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲಾ ವಿಮಾ ಸಂಸ್ಥೆಗಳು ತಮ್ಮ ಯೋಜನೆಗಳ ಬಗ್ಗೆ ಭಾರಿ ಪ್ರಚಾರ ನೀಡುತ್ತವೆ. ಹೀಗಾಗಿ ಸರಿಯಾದ ಯೋಜನೆ ಆಯ್ಕೆ ಮಾಡಿಕೊಳ್ಳುವುದು ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಸುಮಾರು 26 ಯೋಜನೆಗಳು ಲಭ್ಯವಿವೆ. ಅವುಗಳಲ್ಲಿ ಕೆಲವು ಯೋಜನೆಗಳನ್ನು ಮಾದರಿಯಾಗಿ ಇಲ್ಲಿ ನೀಡಲಾಗಿದೆ.

1) ಜೀವನ್ ಆನಂದ್ (815): ಜೀವನದ ಜೊತೆಗೂ ಜೀವನದ ನಂತರವೂ (ಜೀವನ್ ಕೆ ಸಾಥ ಭೀ ಜೀವನ್ ಕೆ ಬಾದ್ ಭೀ) ಎಂದು ಜನಜನಿತವಾಗಿರುವ ಯೋಜನೆ ಇದು. ಅಂದರೆ ಪಾಲಿಸಿಯ ಅವಧಿಯ ನಂತರ ವಿಮಾ ಮೊತ್ತ ಹಾಗೂ ಬೋನಸ್ ನೀಡುವುದಲ್ಲದೇ, ಜೀವನ ಪರ್ಯಂತ ವಿಮೆ ರಕ್ಷಣೆ ಮುಂದುವರೆಯುತ್ತದೆ. ಅಂದರೆ ಮ್ಯಾಚುರಿಟಿಯ ನಂತರ ಯಾವುದೇ ಸಮಯದಲ್ಲಿ ವಿಮೆ ಮಾಡಿದ ವ್ಯಕ್ತಿ ಮೃತರಾದರೆ, ಅವರ ನಾಮಿನಿಗೆ ಅಥವಾ ವಾರಸುದಾರರಿಗೆ ವಿಮೆ ಮೊತ್ತ ನೀಡಲಾಗುವುದು.

2) ಜೀವನ್ ಉಮಂಗ್ (845):  ಜೀವನದಲ್ಲಿ ಆಶಾಭಾವನೆ ಹೊಂದಲು ಇದು ಸಹಕಾರಿಯಾಗುತ್ತದೆ. ಏಕೆಂದರೆ ವಿಮಾ ಅವಧಿ ಮುಗಿದ ನಂತರ ನಿರಂತರವಾಗಿ ವಿಮಾ ಮೊತ್ತದ ಶೇ 8ರಷ್ಟು ಮೊತ್ತವನ್ನು ಪ್ರತಿ ವರ್ಷ ವಿಮೆ ಮಾಡಿಸಿದ ವ್ಯಕ್ತಿಗೆ ನೀಡಲಾಗುತ್ತದೆ. ಅವರ ಕಾಲಾನಂತರ ವಿಮಾ ಮೊತ್ತ ಹಾಗೂ ನಿರಂತರ ಸೇರ್ಪಡೆಯಾದ ಬೋನಸ್ ಮೊತ್ತ ಸೇರಿ, ಒಟ್ಟು ಮೊತ್ತವನ್ನು ನಾಮಿನಿ ಅಥವಾ ವಾರಸುದಾರರಿಗೆ ನೀಡಲಾಗುವುದು.

3) ಜೀವನ್ ಅಮರ್ (855): ಈ ಯೋಜನೆಯು ಟರ್ಮ್ ಇನ್ಶುರೆನ್ಸ್, ಅಂದರೆ ಅವಧಿ ವಿಮಾ ಯೋಜನೆಯಾಗಿದೆ. ಕಡಿಮೆ ಪ್ರೀಮಿಯಂ ನಲ್ಲಿ ಅತಿ ಹೆಚ್ಚು ವಿಮಾ ರಕ್ಷಣೆ ಪಡೆಯಬಹುದು. ಆದರೆ ಟರ್ಮ್ ಇನ್ಶುರೆನ್ಸ್ ಯೋಜನೆಯಲ್ಲಿ ಮ್ಯಾಚುರಿಟಿ ಮೊತ್ತ ಇರುವುದಿಲ್ಲ ಎನ್ನುವುದು ಗಮನಿಸಿಬೇಕಾದ ಸಂಗತಿ.

4) ಜೀವನ್ ಆರೋಗ್ಯ (904): ನಾವು ಎಷ್ಟೇ ಕಾಳಜಿವಹಿಸಿದರೂ ಕೆಲವೊಂದು ಸಲ ಕಾಯಿಲೆಗಳು ಬರಬಹುದು. ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭ ಒದಗಿ ಬರಬಹುದು. ಇಂತಹ ಸಮಯದಲ್ಲಿ ವೆಚ್ಚವೂ ಸ್ವಲ್ಪ ದುಬಾರಿಯೆನಿಸಬಹುದು. ಇಂದಿನ ಆಧುನಿಕ ಯುಗದಲ್ಲಿ ಒಳ್ಳೆಯ ಸೌಲಭ್ಯವಿರುವ ಹಾಗೂ ಸುಸಜ್ಜಿತ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೆಚ್ಚವೂ ದುಬಾರಿಯಾಗಿರುವುದು ಅನಿವಾರ್ಯ. ಹೀಗಾಗಿ ಆರೋಗ್ಯ ವಿಮೆ ಹೊಂದುವುದು ಅವಶ್ಯ.

ಜೀವನ್ ಆರೋಗ್ಯದಲ್ಲಿ 140 ರೀತಿಯ ಪ್ರಮುಖ ಶಸ್ತ್ರಚಿಕಿತ್ಸೆ ಪ್ರಯೋಜನದ (ಮೇಜರ್ ಸರ್ಜಿಕಲ್ ಬೆನಿಫಿಟ್) ಜೊತೆಗೆ 140 ಡೇಕೇರ್ ಸರ್ಜಿಕಲ್ ಬೆನಿಫಿಟ್‌ಗಳನ್ನೂ ಸಹಾ ಪಡೆಯಬಹುದಾಗಿದೆ. ಹಾಗೆಯೇ ಹೆಚ್.ಸಿ.ಬಿ.(ಹಾಸ್ಪಿಟಲ್ ಕ್ಯಾಷ್‌ ಬೆನಿಫಿಟ್) ₹ 1,000 ದಿಂದ ₹ 4,000ವರೆಗೆ ಪಡೆಯಬಹುದು. 

Post Comments (+)