ಗುರುವಾರ , ನವೆಂಬರ್ 21, 2019
23 °C

ಜೀವವಿಮೆ: ನಿಮ್ಮ ಹಕ್ಕಿನ ಅರಿವಿದೆಯೇ?

Published:
Updated:
Prajavani

ನೀವು ಇತ್ತೀಚೆಗಷ್ಟೇ ಏಜೆಂಟ್‌ ಅಥವಾ ಆರ್ಥಿಕ ಸಲಹೆಗಾರರ ಮುಖಾಂತರ ಒಂದು ವಿಮಾ ಪಾಲಿಸಿ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ. ಪಾಲಿಸಿಯ ದಾಖಲೆಗಳು ನಿಮ್ಮ ಕೈಸೇರಿ, ಅದನ್ನು ಓದಿದ ಬಳಿಕ ‘ಈ ವಿಮಾ ಪಾಲಿಸಿಯು ನಾನು ನಿರೀಕ್ಷಿಸಿದಂತಿಲ್ಲ’ ಎಂಬುದು ಮನವರಿಕೆಯಾಗುತ್ತದೆ. ಆಗೇನು ಮಾಡುವುದು?

‘ಹಣ ಕೊಟ್ಟಾಗಿದೆ, ವಿಮಾ ಕಂಪನಿಯು ಪಾಲಿಸಿ ದಾಖಲೆಗಳನ್ನೂ ನಿಮಗೆ ಕಳುಹಿಸಿಯಾಗಿದೆ. ಆದ್ದರಿಂದ ಇನ್ನೇನೂ ಮಾಡಲಾಗುವುದಿಲ್ಲ’ ಎಂಬುದು ನಿಮ್ಮ ಅನಿಸಿಕೆ ಅಲ್ಲವೇ. ಹೌದು, ನಿಮ್ಮ ಅಧಿಕಾರಗಳ ಬಗ್ಗೆ ನಿಮಗೆ ತಿಳಿದಿಲ್ಲ ಎಂದಾದರೆ ಇಂಥ ಅಸಹಾಯಕ ಭಾವನೆ ಮೂಡುವುದು ಸಹಜ. ಆದರೆ, ನಿಮಗೆ ಇಂಥ ಸ್ಥಿತಿ ಎದುರಾದರೆ ಭಯಪಡಬೇಕಾಗಿಲ್ಲ. ಏಕೆಂದರೆ ನಿಯಮಾನುಸಾರ ಪ್ರತಿ ವಿಮಾ ಪಾಲಿಸಿಗೂ ಕನಿಷ್ಠ 15 ದಿನಗಳ ‘ಫ್ರೀ ಲುಕ್‌’ ಅವಧಿ ಇರುತ್ತದೆ.

ಪಾಲಿಸಿಯ ದಾಖಲೆಗಳು ಕೈಸೇರಿದ ನಂತರವೂ, ತಾನು ಪಡೆದ ಪಾಲಿಸಿ ಸರಿಯಾಗಿದೆಯೇ, ತನ್ನ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ಎಂಬುದನ್ನು ಖಾತರಿಪಡಿಸಲು ‘ಫ್ರೀ ಲುಕ್‌’ ಅವಧಿ ಗ್ರಾಹಕರಿಗೆ ಸಹಾಯಕವಾಗುತ್ತದೆ. ಆನ್‌ಲೈನ್‌ ಮೂಲಕ ಖರೀದಿಸಿದ ವಿಮೆಗಳಿಗೆ 30 ದಿನಗಳ ಫ್ರೀ ಲುಕ್‌ ಅವಧಿ ಇರುತ್ತದೆ.

‘ಫ್ರೀ ಲುಕ್‌’ ಸದ್ಬಳಕೆ ಹೇಗೆ?

ಪಾಲಿಸಿ ದಾಖಲೆಗಳು ನಿಮ್ಮ ಕೈಸೇರುತ್ತಿದ್ದಂತೆಯೇ, ಲಾಭದ ವಿವರಗಳು, ಪಾಲಿಸಿ ಪ್ರಮಾಣಪತ್ರ ಹಾಗೂ ಸಹಿ ಮಾಡಿರುವ ಪ್ರತಿಯೊಂದು ದಾಖಲೆಯನ್ನೂ ಗಮನವಿಟ್ಟು ಓದಿರಿ. ಎಲ್ಲಾದರೂ ತಪ್ಪಾಗಿದ್ದರೆ, ಯಾವುದೇ ವಿಚಾರದಲ್ಲಿ ನಿಮಗೆ ಸಂದೇಹ ಉಳಿದಿದ್ದರೆ ನಿಮಗೆ ಪಾಲಿಸಿ ಮಾರಾಟ ಮಾಡಿದವರನ್ನು ಸಂಪರ್ಕಿಸಿ ವಿವರಣೆಯನ್ನು ಪಡೆದುಕೊಳ್ಳಿ. ಅವರ ವಿವರಣೆ ನಿಮಗೆ ತೃಪ್ತಿ ನೀಡದಿದ್ದರೆ ಅಥವಾ ವಿವರಣೆಯ ಹೊರತಾಗಿಯೂ ಆ ವಿಮೆಯು ನಿಮ್ಮ ಅಗತ್ಯಗಳನ್ನು ಈಡೇರಿಸುವಂತಿಲ್ಲ ಎಂಬ ಭಾವನೆ ನಿಮ್ಮಲ್ಲಿ ಮೂಡಿದರೆ, ‘ನಾನು ಫ್ರೀ ಲುಕ್‌ ಅವಧಿಯನ್ನು ಬಳಸಿಕೊಳ್ಳಲು ಬಯಸುತ್ತೇನೆ’ ಎಂದು ವಿಮಾ ಸಂಸ್ಥೆಗೆ ಲಿಖಿತವಾಗಿ ತಿಳಿಸಿರಿ.

ಈ ಅವಧಿಯಲ್ಲಿ ಆ ವಿಮೆಯಲ್ಲೇ ಬದಲಾವಣೆಗಳನ್ನು ಮಾಡಲು ಅಥವಾ ವಿಮೆಯನ್ನು ರದ್ದು ಮಾಡಲು ಸಹ ನಿಮಗೆ ಅವಕಾಶ ಇರುತ್ತದೆ. ಈ ಕುರಿತ ನಿಮ್ಮ ಬೇಡಿಕೆಯನ್ನು ನೀವು ಲಿಖಿತವಾಗಿ ನೀಡಬೇಕಾಗುತ್ತದೆ. ಹೀಗೆ ನೀಡಿದ ಮನವಿಗೆ ವಿಮಾ ಕಂಪನಿಯಿಂದ ಸ್ವೀಕೃತಿ ಪತ್ರವನ್ನು ಪಡೆಯಲು ಮರೆಯಬೇಡಿ. ಒಮ್ಮೆ ನೀವು ಪಾಲಿಸಿಯನ್ನು ಮರಳಿಸಿದರೆಂದರೆ ಪುನಃ ಅದನ್ನು ಪರಿಷ್ಕರಿಸಲು ಅವಕಾಶ ಇರುವುದಿಲ್ಲ. ಬದಲಿಗೆ ನೀವು ಸಂಪೂರ್ಣವಾಗಿ ಹೊಸ ವಿಮೆಯನ್ನೇ ಮಾಡಿಸಬೇಕಾಗುತ್ತದೆ.

‘ಯಾವುದೂ ಉಚಿತವಾಗಿ ಲಭಿಸುವುದಿಲ್ಲ’ ಎಂಬ ಮಾತೇ ಇದೆಯಲ್ಲ! ನೀವು ಪಡೆದ ಪಾಲಿಸಿಯನ್ನು ಮರಳಿಸಿದರೆಂದರೆ, ಪಾಲಿಸಿ ಮಾಡಿಸುವುದಕ್ಕೂ ಮುನ್ನ ವೈದ್ಯಕೀಯ ತಪಾಸಣೆಗೆ ತಗುಲಿದ ವೆಚ್ಚ, ಸ್ಟ್ಯಾಂಪ್‌ ಡ್ಯೂಟಿ ಹಾಗೂ ಇತರ ವೆಚ್ಚಗಳನ್ನು ಕಡಿತ ಮಾಡಿ, ಉಳಿದ ಹಣವನ್ನು ಮಾತ್ರ ನಿಮಗೆ ನೀಡಲಾಗುತ್ತದೆ.

ಏನೇ ಇದ್ದರೂ, ‘ಫ್ರೀ ಲುಕ್‌’ ಅವಧಿಯು ಜೀವವಿಮೆ ಖರೀದಿಸುವ ಗ್ರಾಹಕನಿಗೆ ಹೆಚ್ಚುವರಿಯಾಗಿ ಲಭಿಸುವ ಒಂದು ಅವಕಾಶ. ಅದನ್ನು ಜಾಣತನದಿಂದ ಬಳಕೆ ಮಾಡಬೇಕು. ಎಲ್ಲಾ ಅಂಶಗಳನ್ನು ತಿಳಿದುಕೊಂಡು, ಉತ್ಪನ್ನದ ಬಗ್ಗೆ ನಿಮಗೆ ಸಮಾಧಾನವಾದ ಬಳಿಕವೇ ಜೀವವಿಮೆಯನ್ನು ಖರೀದಿಸುವುದು ಸರಿಯಾದ ತೀರ್ಮಾನವಾಗುತ್ತದೆ.

(ಲೇಖಕ: ಎಸ್‌ಬಿಐ ಲೈಫ್‌ ಇನ್ಶುರೆನ್ಸ್‌ನ ಬಿಸಿನೆಸ್‌ ಸ್ಟ್ರ್ಯಾಟಜಿ ಅಧ್ಯಕ್ಷ)

ಪ್ರತಿಕ್ರಿಯಿಸಿ (+)