ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಸೂಲಿಗಾಗಿ ರಾಜಕಾರಣಿಗಳಿಗೆ ನೋಟಿಸ್‌: ಸಚಿವ ಸೋಮಶೇಖರ್

ಸಹಕಾರ ಬ್ಯಾಂಕ್‌ಗಳಿಂದ ಸಾಲ ವಸೂಲಿಗೆ ಕ್ರಮ
Last Updated 25 ಸೆಪ್ಟೆಂಬರ್ 2021, 17:29 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದ ವಿವಿಧ ಸಹಕಾರ ಬ್ಯಾಂಕ್‌ಗಳಲ್ಲಿ ಪಡೆದ ಸಾಲವನ್ನು ಮರು ಪಾವತಿ ಮಾಡದ ರಾಜಕಾರಣಿಗಳ ಮನೆಗೆ ನೋಟೀಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿವಿಧ ಪಕ್ಷಗಳ ಪ್ರಮುಖ ರಾಜಕಾರಣಿಗಳು ಸಹಕಾರ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲದ ಮೊತ್ತ ನೂರಾರು ಕೋಟಿಯಷ್ಟಿದೆ. ಅನೇಕರು ಬಡ್ಡಿ ಹಾಗೂ ಅಸಲನ್ನೇ ಪಾವತಿಸದೆ ನುಣುಚಿಕೊಳ್ಳಲು ಯತ್ನಿಸುತ್ತಿದ್ದು, ಸಾಲ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

₹ 400 ಕೋಟಿಗೂ ಅಧಿಕ ಮೊತ್ತದ ಹಣವನ್ನು ಸಾಲದ ರೂಪದಲ್ಲಿ ಪಡೆದಿರುವ ರಾಜಕಾರಣಿಗಳು ಕಠಿಣ ಕ್ರಮದ ಎಚ್ಚರಿಕೆ ನೀಡಿದ ನಂತರ ಬಡ್ಡಿ ಮಾತ್ರ ಪಾವತಿಸುತ್ತಿದ್ದಾರೆ. ಇನ್ನು ಕೆಲವರು ಬಡ್ಡಿ ಮತ್ತು ಅಸಲನ್ನು ಪಾವತಿಸದೇ ನಿರ್ಲಕ್ಷಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ನೋಟಿಸ್ ನೀಡಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಸಕ್ಕರೆ ಕಾರ್ಖಾನೆ ಮತ್ತು ಸಣ್ಣ ಉದ್ಯಮ ಸ್ಥಾಪನೆಗಾಗಿ ಅನೇಕ ರಾಜಕಾರಣಿಗಳು ಸಾಲ ಪಡೆದು ಸತಾಯಿಸುತ್ತಿರುವ ಪರಿಣಾಮ ಸಹಕಾರ ಬ್ಯಾಂಕ್‌ಗಳು ದಿವಾಳಿಯ ಅಂಚನ್ನು ತಲುಪಿವೆ. ಅಂಥವರಿಗೆ ಹೊರಡಿಸಲಾದ ನೋಟಿಸ್‌ಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲೂ ನಿರ್ಧರಿಸಲಾಗಿದೆ ಎಂದರು.

ಸಾಲ ಪಡೆದ ಸಾಮಾನ್ಯ ಜನರಿಂದ ಬಡ್ಡಿ ಮತ್ತು ಅಸಲು ವಸೂಲಿಗೆ ಕ್ರಮ ಕೈಗೊಳ್ಳುವ ಮಾದರಿಯಲ್ಲೇ ಜನಪ್ರತಿನಿಧಿಗಳ ಸಾಲ ವಸೂಲಿಗೂ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಪಕ್ಷಗಳಲ್ಲೂ ಸಾಲಗಾರರು ಇದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT