ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಬಳಕೆ ಎಲ್‌ಪಿಜಿ ದುಬಾರಿ

ಪ್ರತಿ ಸಿಲಿಂಡರ್‌ಗೆ ₹ 144.50ರಂತೆ ಹೆಚ್ಚಳ l ಆರು ವರ್ಷಗಳಲ್ಲಿನ ಗರಿಷ್ಠ ಏರಿಕೆ
Last Updated 12 ಫೆಬ್ರುವರಿ 2020, 19:48 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಗೃಹ ಬಳಕೆಯ ಅಡುಗೆ ಅನಿಲದ (ಎಲ್‌ಪಿಜಿ) ಬೆಲೆಯನ್ನು ದಿಢೀರನೆ ಪ್ರತಿ ಸಿಲಿಂಡರ್‌ಗೆ ₹ 144.50ರಂತೆ ಹೆಚ್ಚಿಸಲಾಗಿದ್ದು, 6 ವರ್ಷಗಳಲ್ಲಿನ ಗರಿಷ್ಠ ಹೆಚ್ಚಳ ಇದಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆ ಹೆಚ್ಚಳಗೊಂಡಿರುವ ಕಾರಣಕ್ಕೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು 14.2 ಕೆಜಿ ಸಿಲಿಂಡರ್‌ನ ಬೆಲೆಯನ್ನು ₹ 714 ರಿಂದ ₹ 858.50ಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಂಡಿವೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ಈ ಬೆಲೆ ಹೆಚ್ಚಳದಿಂದ ಸಬ್ಸಿಡಿರಹಿತ ಎಲ್‌ಪಿಜಿ ಬೆಲೆ ಪ್ರತಿ ಸಿಲಿಂಡರ್‌ಗೆ ಬೆಂಗಳೂರಿನಲ್ಲಿ ₹ 860.50ಕ್ಕೆ ಏರಿಕೆಯಾಗಿದೆ. ಜನವರಿ ತಿಂಗಳಲ್ಲಿ ಈ ಬೆಲೆ ₹ 716ರಷ್ಟಿತ್ತು. 2014ರ ಜನವರಿಯಿಂದೀಚೆಗಿನ ಗರಿಷ್ಠ ಮಟ್ಟದ ಬೆಲೆ ಏರಿಕೆ ಇದಾಗಿದೆ. ಆ ವರ್ಷ ಪ್ರತಿ ಸಿಲಿಂಡರ್‌ಗೆ ₹ 220 ರಂತೆ ಹೆಚ್ಚಿಸಲಾಗಿತ್ತು. ಅದರಿಂದಾಗಿ ಸಬ್ಸಿಡಿರಹಿತ ಸಿಲಿಂಡರ್‌ ಬೆಲೆ ₹ 1,241ಕ್ಕೆ ತಲುಪಿತ್ತು.

12 ಸಿಲಿಂಡರ್‌ಗಳಿಗೆ ಸಬ್ಸಿಡಿ: ತೈಲ ಮಾರಾಟ ಸಂಸ್ಥೆಗಳು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರುಕಟ್ಟೆ ದರದಲ್ಲಿಯೇ ಮಾರಾಟ ಮಾಡುತ್ತವೆ. ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಬಳಸುವ ಪ್ರತಿ ಕುಟುಂಬಕ್ಕೆ ಕೇಂದ್ರ ಸರ್ಕಾರವು ನೇರ ಸಬ್ಸಿಡಿ ಸೌಲಭ್ಯ ಒದಗಿಸುತ್ತದೆ. ಬಳಕೆದಾರರು ಸಬ್ಸಿಡಿ ರಹಿತ (ಮಾರುಕಟ್ಟೆ) ದರದಲ್ಲಿಯೇ ಎಲ್‌ಪಿಜಿ ಖರೀದಿಸುತ್ತಾರೆ. ಸರ್ಕಾರವು ಅವರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಮೊತ್ತವನ್ನು ನೇರವಾಗಿ ಪಾವತಿಸುತ್ತದೆ.

ಗೃಹ ಬಳಕೆದಾರರಿಗೆ ಈ ಬೆಲೆ ಏರಿಕೆಯ ಬಿಸಿ ತಟ್ಟದಂತೆ ಸರ್ಕಾರ ಸಬ್ಸಿಡಿ ಮೊತ್ತವನ್ನು ದುಪ್ಪಟ್ಟುಗೊಳಿಸಿದೆ. ಹೀಗಾಗಿ ಎಲ್‌ಪಿಜಿ ಖರೀದಿಸಲು ಸಾಮಾನ್ಯ ಗ್ರಾಹಕರು ಮಾಡುವ ವೆಚ್ಚದಲ್ಲಿ ಯಾವುದೇ ಬದಲಾವಣೆ ಇರಲಾರದು. ಬಳಕೆದಾರರಿಗೆ ಸರ್ಕಾರ ನೀಡುವ ಸಬ್ಸಿಡಿ ಮೊತ್ತವನ್ನು ಪ್ರತಿ ಸಿಲಿಂಡರ್‌ಗೆ ₹ 153.86 ರಿಂದ ₹ 291.48ಕ್ಕೆ ಹೆಚ್ಚಿಸಲಾಗಿದೆ.

ಸಬ್ಸಿಡಿ ಮೊತ್ತವನ್ನು ಬಳಕೆದಾರರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡುವುದರಿಂದ ಗೃಹ ಬಳಕೆದಾರರು ಎಲ್‌ಪಿಜಿ ಖರೀದಿಗೆ ವಾಸ್ತವದಲ್ಲಿ ₹ 567.02 ಮತ್ತು ‘ಪಿಎಂಯುವೈ’ ಫಲಾನುಭವಿಗಳು ₹ 546.02 ಪಾವತಿಸಬೇಕಾಗುತ್ತದೆ. ಇದು ನಗರದಿಂದ ನಗರಕ್ಕೆ ವ್ಯತ್ಯಾಸವಾಗುತ್ತದೆ.

ಪಿಎಂಯುವೈ ಫಲಾನುಭವಿಗಳು: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ನೀಡಲಾಗುವ ಪ್ರತಿ ಸಿಲಿಂಡರ್‌ನ ಸಬ್ಸಿಡಿ ಮೊತ್ತವನ್ನು ₹ 174.86ರಿಂದ ₹ 312.48ಕ್ಕೆ ಏರಿಸಲಾಗಿದೆ.

ಪರಿಸರ ಸ್ನೇಹಿ ಇಂಧನ ಬಳಕೆ ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪಿಎಂಯುವೈ’ ಯೋಜನೆಯಡಿ ಇದುವರೆಗೆ 8 ಕೋಟಿ ಎಲ್‌ಪಿಜಿ ಸಂಪರ್ಕ ಕಲ್ಪಿಸಿದೆ.

ವಿಳಂಬ ನಿರ್ಧಾರ: ಸಾಮಾನ್ಯವಾಗಿ ಪ್ರತಿ ತಿಂಗಳ 1ರಂದು ಎಲ್‌ಪಿಜಿ ದರಗಳನ್ನು ಪರಿಷ್ಕರಿಸಲಾಗುವುದು. ಆದರೆ, ಈ ಬಾರಿ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲು ಎರಡು ವಾರ ವಿಳಂಬವಾಗಿದೆ. ಸರ್ಕಾರವು ಸಬ್ಸಿಡಿಸಹಿತ ಎಲ್‌ಪಿಜಿಗೆ ಹೆಚ್ಚು ಮೊತ್ತ ತೆಗೆದು ಇರಿಸಬೇಕಾಗುತ್ತದೆ. ಇದಕ್ಕೆ ಸರ್ಕಾರದ ಅನುಮತಿ ಪಡೆಯುವುದು ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದ ಕಾರಣಕ್ಕೆ ದರ ಹೆಚ್ಚಳ ನಿರ್ಧಾರ ಪ್ರಕಟಿಸಲು ವಿಳಂಬವಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಚಿಲ್ಲರೆ ಹಣದುಬ್ಬರ ಜಿಗಿತ

ತರಕಾರಿ, ಬೇಳೆಕಾಳು, ಮೀನು ಹಾಗೂ ಮಾಂಸದ ಬೆಲೆ ಹೆಚ್ಚಳದ ಕಾರಣಕ್ಕೆ ಜನವರಿ ತಿಂಗಳ ಚಿಲ್ಲರೆ ಹಣದುಬ್ಬರವು ಐದೂವರೆ ವರ್ಷಗಳ ಗರಿಷ್ಠ ಮಟ್ಟಕ್ಕೆ (ಶೇ 7.59) ತಲುಪಿದೆ.

ಸತತ ಎರಡನೇ ತಿಂಗಳೂ ಹಣದುಬ್ಬರವು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಿತಕರ ಮಟ್ಟವನ್ನು (ಶೇ 4) ದಾಟಿದೆ. ಈ ಕಾರಣಕ್ಕೆ ಮುಂಬರುವ ದಿನಗಳಲ್ಲಿ ಆರ್‌ಬಿಐ ರೆಪೊ ದರ ಕಡಿತ ಮಾಡುವ ಸಾಧ್ಯತೆ ಕಡಿಮೆ ಇರಲಿದೆ ಎಂದು ಪರಿಣತರು ಅಂದಾಜಿಸಿದ್ದಾರೆ.

ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು 2019ರ ಜನವರಿಯಲ್ಲಿ ಶೇ 1.97 ಮತ್ತು ಡಿಸೆಂಬರ್‌ನಲ್ಲಿ ಶೇ 7.35ರಷ್ಟು ದಾಖಲಾಗಿತ್ತು. 2014ರ ಮೇನಲ್ಲಿ ಶೇ 8.33ರಷ್ಟಿತ್ತು.

***

ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ಬಡವರ ವಿರುದ್ಧದ ಕ್ರೂರ ನಿರ್ಧಾರ ಇದಾಗಿದ್ದು, ಕೋಟ್ಯಂತರ ಜನರಿಗೆ ಹೊರೆಯಾಗಲಿದೆ
ಮಾಯಾವತಿ
-ಬಿಎಸ್‌ಪಿ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT