ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

20 ಸಾವಿರ ರಿಯಲ್ ಎಸ್ಟೇಟ್‌ ಏಜೆಂಟರ ನೋಂದಣಿ ಅಮಾನತುಗೊಳಿಸಿದ ಮಹಾRERA

Published 23 ಮೇ 2024, 12:25 IST
Last Updated 23 ಮೇ 2024, 12:25 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವು ಸುಮಾರು 20 ಸಾವಿರ ಏಜೆಂಟರ ನೋಂದಣಿಯನ್ನು ಗುರುವಾರ ಅಮಾನತುಗೊಳಿಸಿದೆ. ಪ್ರಾಧಿಕಾರದ ಈ ಕ್ರಮದಿಂದಾಗಿ ಸದ್ಯ 13 ಸಾವಿರ ನೋಂದಾಯಿತ ಏಜೆಂಟರು ಮಾತ್ರ ರಾಜ್ಯದಲ್ಲಿ ಉಳಿದಂತಾಗಿದೆ.

ರಾಜ್ಯದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಾಗಿ 2017ರಲ್ಲಿ ಒಟ್ಟು 47 ಸಾವಿರ ಏಜೆಂಟರು ಪ್ರಾಧಿಕಾರದಲ್ಲಿ ನೋಂದಾಯಿಸಿಕೊಂಡಿದ್ದರು. ಆದರೆ ಪರವಾನಗಿ ನವೀಕರಿಸದ 13,785 ಏಜೆಂಟರ ನೋಂದಣಿಯನ್ನು 2024ರ ಆರಂಭದಲ್ಲಿ ರದ್ದುಪಡಿಸಲಾಗಿತ್ತು.

ಮಹಾರೇರಾದ ರಿಯಲ್ ಎಸ್ಟೇಟ್ ಏಜೆಂಟರಾಗಿ ಪ್ರಾಧಿಕಾರದ ಅಂತರ್ಜಾಲ ತಾಣದಲ್ಲಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡದ 20 ಸಾವಿರ ಏಜೆಂಟರ ನೋಂದಣಿಯನ್ನು ಇದೀಗ ಒಂದು ವರ್ಷಗಳ ಅವಧಿಗೆ ಅಮಾನತು ಮಾಡಲಾಗಿದೆ ಎಂದು ಪ್ರಾಧಿಕಾರವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತರಬೇತಿ ಪೂರ್ಣಗೊಳಿಸುವ ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಪೂರೈಸಿ ಅವುಗಳನ್ನು ಆನ್‌ಲೈನ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವ ಏಜೆಂಟರ ಪರವಾನಗಿಯನ್ನು ನವೀಕರಿಸಲಾಗುವುದು ಎಂದು ಹೇಳಲಾಗಿದೆ.

‘ಏಜೆಂಟರಾಗಿ ನೋಂದಾಯಿಸಲು ಸುಮಾರು 5,500 ಹೊಸ ಅಭ್ಯರ್ಥಿಗಳು ಮುಂದಿನ ತಿಂಗಳು ನಡೆಯುವ ಪರೀಕ್ಷೆ ಎದುರಿಸುತ್ತಿದ್ದಾರೆ. ರಿಯಲ್ ಎಸ್ಟೇಟ್‌ನಲ್ಲಿ ಏಜೆಂಟರ ಪಾತ್ರ ಮಹತ್ವದ್ದು. 2016ರ ಕಾಯ್ದೆ, ಕಾನೂನುಗಳ ಅನ್ವಯ ಇವರ ನೆರವು ಅಗತ್ಯ’ ಎಂದು ಪ್ರಾಧಿಕಾರದ ಅಧ್ಯಕ್ಷ ಅಜಯ್ ಮೆಹ್ತಾ ಹೇಳಿದ್ದಾರೆ.

‘ಏಜೆಂಟರ ಹುದ್ದೆಗೆ ತರಬೇತಿ, ಪರೀಕ್ಷೆ ಪಾಸಾಗುವುದು ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಪಡೆಯುವುದನ್ನು ಮಹಾರೇರಾ ಕಡ್ಡಾಯಗೊಳಿಸಿದೆ. 2023ರ ಜ. 10ರಂದು ಪ್ರಾಧಿಕಾರವು ಈ ನಿರ್ಧಾರ ಕೈಗೊಂಡಿತ್ತು. ನವೀಕರಣಕ್ಕೆ ಪ್ರಾಧಿಕಾರವು ಹಲವು ಬಾರಿ ಸೂಚನೆ ನೀಡಿತ್ತು. ಆದಾಗ್ಯೂ, 20 ಸಾವಿರ ಏಜೆಂಟರು ಈಗಲೂ ಅನರ್ಹರಾಗಿದ್ದು, ಅವರಿಗೆ ನೀಡಲಾಗಿದ್ದ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಆದರೆ ಇವರು ತಮ್ಮ ಅರ್ಹತೆಯನ್ನು ಸಾಬೀತುಪಡಿಸದಿದ್ದರೆ, ಇವರ ಪರವಾನಗಿ ರದ್ದುಪಡಿಸಲು ಪ್ರಾಧಿಕಾರಕ್ಕೆ ಯಾವುದೇ ಹಿಂಜರಿಕೆ ಇರದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT