ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮನೆಯನ್ನೂ ಸ್ಮಾರ್ಟ್‌ ಆಗಿಸಿ

Last Updated 30 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಸ್ಮಾರ್ಟ್‌ ವಿದ್ಯುತ್‌ ದೀಪಗಳನ್ನು ಮನೆಯಲ್ಲಿ ಅಳವಡಿಸಿ ಅವುಗಳನ್ನು ಮೊಬೈಲ್‌ ಫೋನ್‌ನಿಂದ ನಿಯಂತ್ರಿಸಿದರೆ ಸಾಕು ಅದೇ ಒಂದು ವಿಶೇಷವಾಗಿತ್ತು. ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ನಿಮ್ಮ ಮಾತಿನ ಮೂಲಕವೇ ಮನೆಯಲ್ಲಿರುವ ಹಲವು ಪರಿಕರಗಳ ಕೆಲಸಗಳನ್ನೂ ನಿರ್ವಹಣೆ ಮಾಡಬಹುದು.

ಉದಾಹಾರಣೆಗೆ ಇಂತಹ ಹಾಡು ಬೇಕೆಂದರೆ ಸಾಕು ಪ್ಲೇ ಆಗುತ್ತದೆ. ಹೇಳಿದರೆ ಸಾಕು ಹವಾನಿಯಂತ್ರಿತ ಯಂತ್ರ ಚಾಲೂ ಆಗುತ್ತದೆ. ಆದೇಶ ಕೊಟ್ಟರೆ ಸಾಕು ವಾಷಿಂಗ್‌ಮಷಿನ್ ತನ್ನ ಕೆಲಸ ಶುರುಮಾಡುತ್ತದೆ. ಇಷ್ಟೇ ಅಲ್ಲ ಸ್ಟ್ರಾಂಗ್ ಕಾಫಿ ಎಂದು ಕೇಳಿದರೆ ಸಾಕು ಬಿಸಿ ಬಿಸಿ ಕಾಫಿ ತಯಾರಾಗುತ್ತದೆ. ಸ್ವಲ್ಪ ದಿನ ಮನೆ ಬಿಟ್ಟು ದೂರ ಪ್ರದೇಶಗಳಿಗೆ ಪ್ರವಾಸ ಹೋದರೂ ಮನೆಯ ಮೇಲೆ ಕಣ್ಣಿಟ್ಟಿರಬಹುದು. ಇಂತಹ ಹಲವು ಸಾಧನಗಳನ್ನು ನಮ್ಮ ಬಜೆಟ್‌ಗೆ ತಕ್ಕಂತೆ ಖರೀದಿಸಿ ಬಳಸಿಕೊಳ್ಳಬಹುದು. ಅಂತಹ ಕೆಲವು ಸಾಧನಗಳು ಇಲ್ಲಿವೆ.

ಫಿಲಿಪ್ಸ್ ದೀಪ
ಫಿಲಿಪ್ಸ್ ಸಂಸ್ಥೆ ತಯಾರಿಸಿರುವ ಹ್ಯು ಮಿನಿ ಸ್ಟಾರ್ಟರ್‌ ಇದ್ದರೆ ಸಾಕು ನಿಮ್ಮ ಮನೆಯ ಬೆಳಕಿಗೂ ಸ್ಮಾರ್ಟ್ ತಂತ್ರಜ್ಞಾನದ ಸ್ಪರ್ಶ ಕೊಡಬಹುದು. ಈ ಕಿಟ್‌ನ ಆರಂಭಿಕ ಬೆಲೆ ₹ 12,480. 10 ವಾಟ್ ಸಾಮರ್ಥ್ಯದ ಮೂರು ಬಲ್ಬ್‌ಗಳ ಜತೆಗೆ ಪುಟ್ಟದಾದ ಒಂದು ರೌಟರ್ ಇರುತ್ತದೆ. ಇದರ ನೆರವಿನಿಂದ ಈ ಬಲ್ಬ್‌ಗಳಿಗೆ ಅಂತರ್ಜಾಲ ಸಂಪರ್ಕ ದೊರೆಯುತ್ತದೆ. ಹೀಗಾಗಿ ಇವು ತಂತಿ ರಹಿತವಾಗಿಯೇ ಕಾರ್ಯನಿರ್ವಹಿಸುತ್ತವೆ. ಫೋನ್‌ನಲ್ಲಿ ಫಿಲಿಪ್ಸ್‌ ಆ್ಯಪ್‌ ಅಳವಡಿಸಿಕೊಂಡು ಅದರಿಂದಲೇ ನಿಯಂತ್ರಿಸಬಹುದು. ಇಂತಿಷ್ಟೇ ಸಮಯಕ್ಕೆ ಆನ್‌ ಮತ್ತು ಆಫ್‌ ಆಗುವ ಹಾಗೆ ಸಮಯ ಹೊಂದಿಸಬಹುದು. ಮನೆಯಲ್ಲಿ ಇದ್ದಾಗ ಫೋನ್‌ನ ಅಗತ್ಯವಿಲ್ಲದೇ ನಿಮ್ಮ ಮಾತಿನ ಮೂಲಕವೇ ನಿಯಂತ್ರಿಸಬಹುದು.

ನೀವು ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ, ದೀಪಗಳು ಉರಿಯುವಂತೆ ಮಾಡಲು, ನೀವು ಮಲಗಿದ್ದಾಗ ಅಪರಿಚಿತರು ಯಾರಾದರೂ ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ದೀಪಗಳು ಆನ್‌ ಆಗಿ ಅವರು ನಿಮ್ಮ ಕಣ್ಣಿಗೆ ಬೀಳುವಂತೆ ಮಾಡಲು ಫಿಲಿಪ್ಸ್‌4100248U7 ಹ್ಯು ಮೋಷನ್ ಸೆನ್ಸರ್ ಸ್ಮಾರ್ಟ್‌ ಬಳಸಬಹುದು. ಇದರ ಬೆಲೆ ₹ 7,890. ಇದು ತಂತಿ ರಹಿತವಾಗಿ ಬ್ಯಾಟರಿ ಸಹಾಯದಿಂದ ಕೆಲಸ ಮಾಡುವ ಸಾಧನ.

ಓಕ್ಟರ್ ಸ್ವಿಚ್‌ಗಳು
ಗೀಸರ್, ಏ.ಸಿ, ಇಸ್ತ್ರಿ ಪೆಟ್ಟಿಗೆ... ಹೀಗೆ ಯಾವುದೇ ವಿದ್ಯುತ್ ಉಪಕರಣವನ್ನು ಬಳಸುತ್ತಿದ್ದರೂ ಅವುಗಳನ್ನು ವೈಫೈ ನೆಟ್‌ವರ್ಕ್‌ ಜತೆಗೆ ಜೋಡಿಸಲು ಓಕ್ಟರ್ ಸ್ಮಾರ್ಟ್ ಹೋಮ್ ಕಿಟ್‌ ನೆರವಾಗುತ್ತದೆ. ಇದರ ಬೆಲೆ ₹ 14,450. ಸ್ಮಾರ್ಟ್‌ ಪ್ಲಗ್‌ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಬಳಸುವ ವಿದ್ಯುತ್ ಪರಿಕರಗಳಿಗೆ ಸ್ಮಾರ್ಟ್‌ ತಂತ್ರಜ್ಞಾನದ ಸ್ಪರ್ಶ ಕೊಡಬಹುದು. ಫೋನ್‌ನಿಂದ ಅಷ್ಟೇ ಅಲ್ಲದೇ, ವಾಯ್ಸ್‌ ಅಸಿಸ್ಟಂಟ್ ಮೂಲಕವೂ ನಿಯಂತ್ರಿಸಬಹುದು.

ಸ್ಮಾರ್ಟ್‌ ಫ್ರಿಜ್‌
ನಿತ್ಯ ಬಳಕೆಯಾಗುವ ಫ್ರಿಜ್‌ಗಳೂ ಈಗ ಸ್ಮಾರ್ಟ್‌ ಆಗುತ್ತಿವೆ. ಸಾಮ್ಸಂಗ್ ಸಂಸ್ಥೆ ಬಳಕೆಗೆ ತಂದಿರುವ ಫ್ಯಾಮಿಲಿ ಹಬ್ ರೆಫ್ರಿಜರೇಟರ್ಮನೆ ಮಂದಿಯ ಮಾತುಗಳನ್ನೆಲ್ಲಾ ಕೇಳುತ್ತದೆ. ಇದು 2.15 ಇಂಚಿನ ಸ್ಪರ್ಶ ಪರದೆ ಮತ್ತು ಬಿಲ್ಡ್ ಇನ್‌ ಮೈಕ್ರೊಫೋನ್ ಹೊಂದಿದೆ. ಸ್ಮಾರ್ಟ್‌ಫೋನ್ ಜತೆಗೆ ಜೋಡಿಸಿ ನಿಯಂತ್ರಿಸಬಹುದು. ಫ್ರಿಜ್‌ನಲ್ಲಿ ಯಾವ ಯಾವ ಪದಾರ್ಥಗಳು ತುಂಬಿವೆ ಎಂಬುದನ್ನೂ ಫೋನ್‌ನಲ್ಲೇ ತಿಳಿಯಬಹುದು. ಇದನ್ನು ಅಮೆಜಾನ್ ಅಲೆಕ್ಸಾ ಜತೆಗೆ ಜೋಡಿಸಿ ಕೆಲಸ ಮಾಡುವಂತೆ ಮಾಡಬಹುದು. ಅಡುಗೆ ಮಾಡುತ್ತಿರುವಾಗ ಹಾಡು ಕೇಳಬೇಕೆಂದರೆ ಪ್ಲೇ ಮಾಡುತ್ತೆ. ಇದರ ಬೆಲೆ ಸುಮಾರು ₹ 3 ಲಕ್ಷ.

ಸೋನಿ ಸ್ಮಾರ್ಟ್‌
ರಿಮೋಟ್‌ ಅಗತ್ಯವಿಲ್ಲದೇ, ಟಿ.ವಿ ಮುಂದೆ ಕುಳಿತು ನೀವು ಹೇಳಿದ ಹಾಗೆ ಚಾನೆಲ್‌ಗಳು ಬದಲಾಗುತ್ತಿದ್ದರೆ ಹೇಗಿರುತ್ತೆ ಒಮ್ಮೆ ಯೋಚಿಸಿ. ಸೋನಿ ಸಂಸ್ಥೆಯಸೋನಿ ಬ್ರೇವಿಯಾ KD-43X8200E 4ಕೆ ಎಲ್‌ಇಡಿ ಟಿವಿ ಮೂಲಕ ಇದು ಸಾಧ್ಯ. ಸೋಫಾದಲ್ಲಿ ಮಲಗಿದ್ದುಕೊಂಡೇ ವಾಯ್ಸ್ ಕಮಾಂಡ್ಸ್ ಮೂಲಕ ಬೇಕೆಂದ ಹಾಗೆ ಸೌಂಡ್‌ ಹೆಚ್ಚಿಸಿಕೊಳ್ಳಬಹುದು ಮತ್ತು ಕಡಿಮೆ ಮಾಡಿಕೊಳ್ಳಬಹುದು. 43 ಇಂಚಿನ ಈ ಟಿ.ವಿ ಬೆಲೆ ₹75,990.

ಅಡುಗೆ ಮನೆಯೂ ಸ್ಮಾರ್ಟ್‌
ಅಡುಗೆ ಮನೆಗೂ ಸ್ಮಾರ್ಟ್ ತಂತ್ರಜ್ಞಾನದ ಸ್ಪರ್ಶ ನೀಡಬೇಕೆಂದರೆ ನೆಸ್‌ಕೆಫೆ ಇ ಕನೆಕ್ಟೆಡ್‌ ಯಂತ್ರ ಅಳವಡಿಸಿದರೆ ಸಾಕು. ಇದರ ಬೆಲೆ ₹6,499. ಇದು ಬ್ಲೂಟೂತ್‌ ನೆಟ್‌ವರ್ಕ್ ಸಹಾಯದಿಂದ ಕೆಲಸ ಮಾಡುತ್ತದೆ. ಬಿಸಿ ಬಿಸಿ ಕಾಫಿ ಬೇಕೆಂದಾಗ ಆದೇಶ ಕೊಟ್ಟರೆ ಸಾಕು ಕ್ಷಣಗಳಲ್ಲಿ ಕಾಫಿ ತಯಾರಾಗುತ್ತದೆ.

ಮನೆ ಮೇಲೆ ನಿಗಾ ಇಡಲು
ದೂರದ ಪ್ರದೇಶಗಳಿಗೆ ಹೊದಾಗ ಅಥವಾ ಮನೆಯಲ್ಲಿ ಇಲ್ಲದಿರುವಾಗ, ಮನೆ ಮೇಲೆ ಒಂದು ಕಣ್ಣಿಟ್ಟಿರಲು ಎಜ್ವಿಜ್‌ ಮಿನಿ ಒ 1080ಪಿ ಸಾಧನ ನೆರವಾಗುತ್ತದೆ. ಇದು ವೈ–ಫೈ ನೆಟ್‌ವರ್ಕ್ ಸಹಾಯದಿಂದ ಕೆಲಸ ಮಾಡುತ್ತದೆ. ಇದು ಸೆರೆಹಿಡಿಯುವ ಗುಣಮಟ್ಟದ ವಿಡಿಯೊಗಳನ್ನು ವೈಡ್ ಆ್ಯಂಗಲ್‌ನಲ್ಲಿ ನೋಡಬಹುದು. ಮೋಷನ್ ಸೆನ್ಸರ್ ಸಹಾಯದಿಂದ ಚಲನವಲನಗಳನ್ನು ಗುರಿತಿಸಿ ಎಚ್ಚರಿಸುತ್ತದೆ. ಇದರ ಬೆಲೆ ₹4,299.

ಸೂಚನೆ: ಬೆಲೆಗಳಲ್ಲಿ ವ್ಯತ್ಯಾಸಗಳಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT