ಭಾನುವಾರ, ಸೆಪ್ಟೆಂಬರ್ 26, 2021
23 °C
ಶಿವರಾತ್ರಿ, ಜಾತ್ರೆಗಳ ಪರಿಣಾಮ; ಮೊಟ್ಟೆ ದರ ಏರಿಕೆ

ಹೂವುಗಳ ಧಾರಣೆ ಹೆಚ್ಚಳ, ಕೆಲವು ತರಕಾರಿ ಅಗ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮಹಾಶಿವರಾತ್ರಿ ಸಮೀಪಿಸುತ್ತಿರುವಂತೆಯೇ ಕಳೆದೆರಡು ವಾರದಿಂದ ಇಳಿಕೆ ಕಂಡಿದ್ದ ಹೂವುಗಳ ಬೆಲೆ ಈ ವಾರ ಕೊಂಚ ಏರಿಕೆಯಾಗಿದೆ. 

ಹಬ್ಬದ ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಸಾಲು ಸಾಲು ಜಾತ್ರೆಗಳಿರುವುದರಿಂದ ಎಲ್ಲ ಹೂವುಗಳ ದರ ಹೆಚ್ಚಳವಾಗಿದೆ. ಬಿಡಿ ಹೂವುಗಳ ಮಾರುಕಟ್ಟೆಯಲ್ಲಿ ಕೆಜಿ ಚೆಂಡು ಹೂ ₹10, ಕನಕಾಂಬರ ₹ 500, ಸುಗಂಧರಾಜ ಹಾರ ₹150, ಕಾಕಡ ₹ 120, ಸೇವಂತಿ ₹60 ಹೆಚ್ಚಳವಾಗಿದೆ. 

‘ಯುಗಾದಿವರೆಗೂ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ. ಕಡಿಮೆಯಾಗುವ ಸಾಧ್ಯತೆ ಕಡಿಮೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ಹೇಳಿದರು.

ಈ ವಾರ ತರಕಾರಿ ಧಾರಣೆಯಲ್ಲಿ ಕೆಜಿ ಬೆಳ್ಳುಳ್ಳಿ ₹ 20, ಹಸಿಮೆಣಸಿನ ಕಾಯಿ ₹5 ಹೆಚ್ಚಳವಾಗಿದೆ. ಕ್ಯಾರೆಟ್‌, ಬೀನ್ಸ್‌, ಹೀರೆಕಾಯಿ ₹5, ಟೊಮೆಟೊ ₹2 ಇಳಿಕೆಯಾಗಿದೆ. 

‘ಕಳೆದ ವಾರದವರೆಗೂ ಶುಭ ಸಮಾರಂಭಗಳು ನಡೆಯುತ್ತಿರಲಿಲ್ಲ. ಈ ವಾರ ಜಾತ್ರೆಗಳ ಸಾಲು. ಜೊತೆಗೆ ಹಬ್ಬ ಕೂಡ ಇದೆ. ಮುಂದಿನ ದಿನಗಳಲ್ಲಿ ತರಕಾರಿಗೆ ಬೇಡಿಕೆ ಸಿಗಲಿದೆ. ದರ ಕೂಡ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

ಹಣ್ಣುಗಳ ಪೈಕಿ ಕಲ್ಲಂಗಡಿ, ಪಚ್ಚಬಾಳೆ ₹5, ಸಪೋಟಾ, ಮೂಸಂಬಿ ₹10 ಇಳಿಕೆಯಾಗಿದೆ. ಏಲಕ್ಕಿ ಬಾಳೆ ₹5, ದಾಳಿಂಬೆ ₹20 ಹೆಚ್ಚಳವಾಗಿದೆ. ಮಧ್ಯಾಹ್ನದ ವೇಳೆ ಸುಡು ಬಿಸಲು ಆರಂಭವಾಗಿದೆ. ಮುಂದಿನ ಕೆಲ ದಿನಗಳಲ್ಲಿ ಹಣ್ಣುಗಳ ದರ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಹಣ್ಣುಗಳ ವ್ಯಾಪಾರಿಗಳಿದ್ದಾರೆ.

ಮೊಟ್ಟೆ ದರ ಹೆಚ್ಚಳ: ಕಳೆದ ವಾರ ₹376 ಇದ್ದಂತಹ ಮೊಟ್ಟೆ ಧಾರಣೆ ಈ ವಾರ ₹74 ಹೆಚ್ಚಳವಾಗಿ ₹450 ಆಗಿದೆ. ಮಾರಿಹಬ್ಬಗಳಿಗೆ ಮೊಟ್ಟೆ ಧಾರಣೆ ಏರಿಳಿತ ಕಂಡು ಬರುತ್ತದೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.

ಮಾಂಸ ಮಾರುಕಟ್ಟೆಯಲ್ಲಿ ಈ ವಾರ ಚಿಕನ್‌, ಪಾಪ್ಲೆಟ್‌ ₹10, ಮಟನ್‌ ₹20 ಕಡಿಮೆಯಾಗಿದೆ. ಉಳಿದಂತೆ ಎಲ್ಲ ಬಗೆಯ ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು