ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ನಿಲ್ಲದ ಕರಡಿ ಕುಣಿತ

Last Updated 21 ಜನವರಿ 2022, 16:56 IST
ಅಕ್ಷರ ಗಾತ್ರ

ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ದಿನವೂ ವಹಿವಾಟು ಇಳಿಕೆ ಕಂಡಿತು. ವಿದೇಶಿ ಬಂಡವಾಳ ಹೊರಹರಿವು ಮುಂದುವರಿದಿರುವುದು ಸಹ ಶುಕ್ರವಾರದ ವಹಿವಾಟಿನ ಮೇಲೆ ಪರಿಣಾಮ ಬೀರಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 427 ಅಂಶ ಇಳಿಕೆ ಆಗಿ 59,037 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 140 ಅಂಶ ಇಳಿಕೆ ಕಂಡು 17,617 ಅಂಶಗಳಿಗೆ ತಲು‍ಪಿತು. ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 2,186 ಅಂಶ ಮತ್ತು ನಿಫ್ಟಿ 638 ಅಂಶ ಇಳಿಕೆ ಆಗಿದೆ.

ಸೆನ್ಸೆಕ್ಸ್‌ನಲ್ಲಿ ಬಜಾಜ್‌ ಫಿನ್‌ಸರ್ವ್ ಷೇರು ಶೇ 5.37ರಷ್ಟು ಗರಿಷ್ಠ ನಷ್ಟ ಕಂಡಿತು.

ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು ಮತ್ತು ರೂಪಾಯಿ ಮೌಲ್ಯ ಇಳಿಕೆ ಕಾರಣಗಳಿಂದಾಗಿ ದೇಶದ ಷೇರುಪೇಟೆಗಳ ಇಳಿಮುಖ ಹಾದಿ ಮುಂದುವರಿಯಿತು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಜಾಗತಿಕ ವಿದ್ಯಮಾನಗಳ ಜೊತೆಗೆ ಮುಂಬರುವ ಬಜೆಟ್‌ ಕುರಿತಾದ ಅನಿಶ್ಚಿತತೆಯು ಷೇರುಪೇಟೆಗಳಲ್ಲಿ ವಹಿವಾಟಿನ ಮೇಲೆ ಪರಿಣಾಮ ಉಂಟುಮಾಡಲಿವೆ ಎಂದೂ ಅವರು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಹಣದುಬ್ಬರ ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ ವ್ಯಕ್ತವಾಗಿದೆ. ಇದರ ಜೊತೆಗೆ ಕಾರ್ಪೊರೇಟ್‌ ಕಂಪನಿಗಳ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದು ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆಗೆ ಕಾರಣವಾಯಿತು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 8 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 74.43ರಂತೆ ವಿನಿಮಯಗೊಂಡಿತು. ವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 28 ಪೈಸೆ ಇಳಿಕೆ ಕಂಡಿದೆ.

ನಾಲ್ಕು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 10.36 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯವು ₹ 269.65 ಲಕ್ಷ ಕೋಟಿಗಳಿಗೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT