ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಸುಜುಕಿ ಇಂಡಿಯಾ: ₹45 ಸಾವಿರ ಕೋಟಿ ಹೂಡಿಕೆ ಗುರಿ

ಮಾರುತಿ ಸುಜುಕಿ: ಎಂಟು ವರ್ಷಗಳಲ್ಲಿ ಉತ್ಪಾದನೆ ದುಪ್ಪಟ್ಟು ಮಾಡುವ ಉದ್ದೇಶ
Published 29 ಆಗಸ್ಟ್ 2023, 16:39 IST
Last Updated 29 ಆಗಸ್ಟ್ 2023, 16:39 IST
ಅಕ್ಷರ ಗಾತ್ರ

ನವದೆಹಲಿ: ಆಟೊಮೊಬೈಲ್ ಉದ್ಯಮದಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿ ಇರುವ ಮಾರುತಿ ಸುಜುಕಿ ಇಂಡಿಯಾ, ಮುಂದಿನ ಎಂಟು ವರ್ಷಗಳಲ್ಲಿ ಒಟ್ಟು ₹45 ಸಾವಿರ ಕೋಟಿ ಹೂಡಿಕೆ ಮಾಡುವ ಗುರಿ ಹೊಂದಿದೆ. ಈ ಹೂಡಿಕೆಯ ಮೂಲಕ ವಾಹನ ತಯಾರಿಕಾ ಸಾಮರ್ಥ್ಯವನ್ನು ವರ್ಷಕ್ಕೆ 40 ಲಕ್ಷಕ್ಕೆ ಹೆಚ್ಚಿಸುವ ಉದ್ದೇಶವನ್ನು ಕಂಪನಿ ಹೊಂದಿದೆ.

‘ಮಾರುತಿ 3.0’ ಯೋಜನೆಯ ಅಡಿಯಲ್ಲಿ ಕಂಪನಿಯು 2030–31ರೊಳಗೆ 28 ಬಗೆಯ ವಾಹನಗಳನ್ನು ಗ್ರಾಹಕರಿಗೆ ಒದಗಿಸುವ ಹಾಗೂ ವಾರ್ಷಿಕ ವಾಹನ ಉತ್ಪಾದನಾ ಸಾಮರ್ಥ್ಯವನ್ನು 20 ಲಕ್ಷದಷ್ಟು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.

ಷೇರುದಾರರ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಂಪನಿಯ ಅಧ್ಯಕ್ಷ ಆರ್.ಸಿ. ಭಾರ್ಗವ ಅವರು, ‘ಕಂಪನಿಯ ಷೇರುಗಳನ್ನು ಪಾಲು ಮಾಡುವ ಪ್ರಸ್ತಾವನೆಯನ್ನು ನಾವು ಮತ್ತೆ ಪರಿಗಣಿಸಲಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದ್ದಾರೆ.

ಆದರೆ ಷೇರು ಪಾಲು ಮಾಡುವುದರಿಂದ, ಅದರ ಮೌಲ್ಯವರ್ಧನೆ ಅಥವಾ ಷೇರುದಾರರಿಗೆ ಸಿಗುವ ಲಾಭದ ಮೇಲೆ ಯಾವ ಪರಿಣಾಮವೂ ಇರುವುದಿಲ್ಲ ಎಂದು ಭಾರ್ಗವ ಹೇಳಿದ್ದಾರೆ. ರಾಷ್ಟ್ರೀಯ ಷೇರುಪೇಟೆಯಲ್ಲಿ ಮಾರುತಿ ಸುಜುಕಿ ಷೇರು ಮೌಲ್ಯವು ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ₹9,634.95 ಆಗಿದೆ.

‘ಇ.ವಿ. ವಾಹನಗಳನ್ನು ಮಾರುಕಟ್ಟೆಗೆ ತರುವ ವಿಚಾರದಲ್ಲಿ ಇತರ ಕೆಲವು ಕಂಪನಿಗಳಿಗಿಂತ ನಾವು ಹಿಂದುಳಿದಿದ್ದೇವೆ ಎಂಬುದು ನಿಜ. ಅದರ ಅರ್ಥ ನಾವು ಮಾರುಕಟ್ಟೆಗೆ ಬಹಳ ತಡವಾಗಿ ಬರುತ್ತಿದ್ದೇವೆ ಎಂಬುದಲ್ಲ’ ಎಂದು ಭಾರ್ಗವ ಹೇಳಿದ್ದಾರೆ.

ಭಾರತದಲ್ಲಿ ಇ.ವಿ.ಗಳಿಗೆ ಇರುವ ಬೇಡಿಕೆಯ ಬಗ್ಗೆ ಕಂಪನಿಯು ಪರಿಶೀಲನೆ ನಡೆಸಿದೆ. 2024–25ರಿಂದ 2030–31ರ ನಡುವೆ ಆರು ಇ.ವಿ. ಮಾದರಿಗಳನ್ನು ಸಿದ್ಧಪಡಿಸುವ ಯೋಜನೆ ಹೊಂದಲಾಗಿದೆ. ಇವು ಕಂಪನಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಸ್ಥಾನವನ್ನು ತಂದುಕೊಡಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನಮ್ಮದು ವಾಸ್ತವದಲ್ಲಿ ಸಣ್ಣ ಕಾರುಗಳನ್ನು ತಯಾರಿಸುವ ಕಂಪನಿ. ಆದರೆ ಕೆಲವು ನಿಯಮಗಳು ಹಾಗೂ ಇತರ ಕಾರಣಗಳಿಂದಾಗಿ ಸಣ್ಣ ಕಾರುಗಳಿಗೆ ಬೇಡಿಕೆ ಕಡಿಮೆ ಆಗುತ್ತಿದೆ, ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂಬ ವಾಸ್ತವಕ್ಕೆ ನಾವು ಹೊಂದಿಕೊಳ್ಳಬೇಕು. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಮಾರುಕಟ್ಟೆ ಪಾಲನ್ನು ಮತ್ತೆ ಪಡೆದುಕೊಳ್ಳುವ ಯತ್ನ ನಡೆಸಲಾಗುವುದು’ ಎಂದು ಭಾರ್ಗವ ಅವರು ಷೇರುದಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT