ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹400 ಲಕ್ಷ ಕೋಟಿ ದಾಟಿದ ಎಂ–ಕ್ಯಾಪ್‌

ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ಗಳಿಕೆ ಕಂಡ ಬಿಎಸ್‌ಇ ಕಂಪನಿಗಳು
Published 8 ಏಪ್ರಿಲ್ 2024, 15:51 IST
Last Updated 8 ಏಪ್ರಿಲ್ 2024, 15:51 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈ ಷೇರುಪೇಟೆ ಸೂಚ್ಯಂಕದಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯವು ಸೋಮವಾರದ ವಹಿವಾಟಿನ ವೇಳೆ ₹400.86 ಲಕ್ಷ ಕೋಟಿಗೆ ಏರಿಕೆಯಾಗಿ, ಸಾರ್ವಕಾಲಿಕ ದಾಖಲೆ ಮುಟ್ಟಿತು. 

ಕಳೆದ ವರ್ಷ ಜುಲೈನಲ್ಲಿ ಎಂ–ಕ್ಯಾಪ್‌ ₹300 ಲಕ್ಷ ಕೋಟಿ ದಾಟಿತ್ತು.

ದಿನದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 494 ಅಂಶಗಳಷ್ಟು ಹೆಚ್ಚಳವಾಗಿ 74,742ಕ್ಕೆ ಸ್ಥಿರವಾಯಿತು. ವಹಿವಾಟಿನ ವೇಳೆ ಇದು 74,869ಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ನಿಫ್ಟಿ) 152 ಅಂಶ ಏರಿಕೆಯಾಗಿ 22,666ಕ್ಕೆ ಅಂತ್ಯಗೊಂಡಿತು.

ಮಾರುತಿ ಸುಜುಕಿ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯು ಸ್ಟೀಲ್‌, ಲಾರ್ಸೆನ್‌ ಆ್ಯಂಡ್ ಟೊರ್ಬೊ, ರಿಲಯನ್ಸ್‌ ಇಂಡಸ್ಟ್ರೀಸ್‌, ಎಕ್ಸಿಸ್‌ ಬ್ಯಾಂಕ್‌ ಮತ್ತು ಪವರ್‌ ಗ್ರಿಡ್‌ ಕಂಪನಿಗಳು ಷೇರು ಮೌಲ್ಯ ಗಳಿಕೆ ಕಂಡಿವೆ. ನೆಸ್ಲೆ, ವಿಪ್ರೊ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಟೈಟನ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೊಸಿಸ್‌ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ ಷೇರು ಮೌಲ್ಯ ಇಳಿಕೆ ಕಂಡಿದೆ.

ಏಷ್ಯನ್‌ ಮಾರುಕಟ್ಟೆಯಲ್ಲಿ ಸಿಯೊಲ್‌, ಟೊಕಿಯೊ ಮತ್ತು ಹಾಂಗ್‌ಕಾಂಗ್‌ ಸಕಾರಾತ್ಮಕ ವಹಿವಾಟು ಕಂಡಿದ್ದರೆ, ಶಾಂಘೈ ಇಳಿಕೆ ಕಂಡಿದೆ. ಬ್ರೆಂಟ್‌ ಕಚ್ಚಾ ತೈಲ ಬ್ಯಾರೆಲ್‌ಗೆ ಶೇ 0.81ರಷ್ಟು ಇಳಿಕೆ ಕಂಡು, 90.45 ಡಾಲರ್‌ನಂತೆ ಮಾರಾಟವಾಯಿತು.

ಬಂಧನ್‌ ಬ್ಯಾಂಕ್‌ ಷೇರು ಶೇ6ರಷ್ಟು ಇಳಿಕೆ: ಬಂಧನ್‌ ಬ್ಯಾಂಕ್‌ನ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಚಂದ್ರ ಶೇಖರ್‌ ಘೋಷ್‌ ತಮ್ಮ ಅಧಿಕಾರಾವಧಿ ಪೂರ್ಣಗೊಂಡಾಗ ಕಚೇರಿಯನ್ನು ಬಿಡಲು ನಿರ್ಧರಿಸಿರುವುದರಿಂದ ಬ್ಯಾಂಕ್‌ನ ಷೇರು ಮೌಲ್ಯ ಶೇ 6ಕ್ಕಿಂತ ಹೆಚ್ಚು ಇಳಿಕೆ ಕಂಡಿವೆ.

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ ₹184 ಮತ್ತು ₹185ಕ್ಕೆ ಮುಟ್ಟಿದೆ. ಇದರಿಂದ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ ₹2,004 ಕೋಟಿ ಇಳಿಕೆ ಆಗಿದ್ದು, ಒಟ್ಟು ಎಂ–ಕ್ಯಾಪ್‌ ₹29,794 ಕೋಟಿಗೆ ಕುಸಿದಿದೆ.

ವಿಪ್ರೊ ಷೇರು ಮೌಲ್ಯ ಇಳಿಕೆ: ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಕಂಪನಿ ವಿಪ್ರೊದ ಸಿಇಒ ಥಿಯರಿ ಡೆಲಾಪೋರ್ಟ್‌ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿರುವುದು ಮತ್ತು ಈ ಸ್ಥಾನಕ್ಕೆ ಶ್ರೀನಿವಾಸ್‌ ಪಲ್ಲಿಯಾ ಅವರನ್ನು ನೂತನ ಸಿಇಒ ಆಗಿ ನೇಮಿಸಿರುವುದರಿಂದ ಕಂಪನಿಯ ಷೇರಿನ ಮೌಲ್ಯ ಶೇ 1ರಷ್ಟು ಇಳಿದಿದೆ.

ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 1.09 ಮತ್ತು ಎನ್‌ಎಸ್‌ಇಯಲ್ಲಿ ಶೇ 0.99ರಷ್ಟು ಇಳಿಕೆ ಆಯಿತು. ಷೇರಿನ ಬೆಲೆ ಕ್ರಮವಾಗಿ ₹479 ಮತ್ತು ₹480ಕ್ಕೆ ಮುಟ್ಟಿತು. ಇದರಿಂದ ಕಂಪನಿಯ ಎಂ–ಕ್ಯಾಪ್‌ ಒಂದೇ ದಿನ ₹2,733 ಕೋಟಿ ಕರಗಿದ್ದು, ಒಟ್ಟು ಮಾರುಕಟ್ಟೆ ಮೌಲ್ಯ ₹2.50 ಲಕ್ಷ ಕೋಟಿಗೆ ಇಳಿಯಿತು.

ಗಳಿಕೆ ಕಂಡ ಕಂಪನಿಗಳು (ಶೇಕಡಾವಾರು)

3.26; ಮಾರುತಿ ಸುಜುಕಿ

3.22; ಮಹೀಂದ್ರ ಆ್ಯಂಡ್‌ ಮಹೀಂದ್ರ

2.54; ಎನ್‌ಟಿಪಿಸಿ

2.39; ಜೆಎಸ್‌ಡಬ್ಲ್ಯು ಸ್ಟೀಲ್‌

1.92; ಎಲ್‌ ಆ್ಯಂಡ್‌ ಟಿ

ಇಳಿಕೆ ಕಂಡ ಕಂಪನಿಗಳು (ಶೇಕಡವಾರು)

–1.59; ನೆಸ್ಲೆ ಇಂಡಿಯಾ

–1.09; ವಿಪ್ರೊ

–0.51; ಸನ್‌ಫಾರ್ಮಾ

–0.37; ಎಚ್‌ಸಿಎಲ್‌ ಟೆಕ್‌

–0.32; ಟೈಟನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT