ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಉಪಕರಣ ನವೋದ್ಯಮ

Last Updated 2 ಜುಲೈ 2019, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಆರೋಗ್ಯವು ಬಹಳ ಮಹತ್ವ ಪಡೆದುಕೊಳ್ಳುತ್ತಿದೆ. ಜತೆಗೆ ವೈದ್ಯಕೀಯ ವೆಚ್ಚವೂ ಹೆಚ್ಚಾಗಿದೆ ಎಂಬ ಆಪಾದನೆಗಳೂ ಕೇಳಿ ಬರುತ್ತಿವೆ. ಈ ಕಾರಣಕ್ಕೆ ಸರಳವಾಗಿ, ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ ದೊರೆಯಬೇಕು ಎಂದು ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌ನ ಸ್ಯಾಂಡ್‌ ಬಾಕ್ಸ್‌ನಲ್ಲಿ ಎರಡು ನವೋದ್ಯಮ ಕಂಪನಿಗಳು ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಮುಂದಾಗಿವೆ.

ಕಿವಿ (ಶ್ರವಣ) ಜೀವನದ ಬಹುಮುಖ್ಯ ಅಂಗ. ಅದರ ಮಹತ್ವ ಗೊತ್ತಾಗಬೇಕೆಂದರೆ ಒಂದು ದಿನ ಧ್ವನಿ ಕೇಳಿಸದಂತೆ ಕಿವಿ ಮುಚ್ಚಿಕೊಂಡು ತಿರುಗಾಡಿದಾಗ ಕಿವಿ ಕೇಳದವರು ಎದುರಿಸುವ ಸಂಕಷ್ಟ ಗೊತ್ತಾಗುತ್ತದೆ. ಇದರ ಚಿಕಿತ್ಸೆಯ ವೆಚ್ಚ ಹೆಚ್ಚಿರುವುದರ ಜೊತೆಗೆ ತಪಾಸಣೆಗೆ ದೂರದ ಊರುಗಳಿಗೆ ಹೋಗಬೇಕಾಗಿದೆ. ಈ ಕಾರಣಗಳಿಂದಾಗಿ ಅನೇಕರು ಚಿಕಿತ್ಸೆ ತೆಗೆದುಕೊಳ್ಳದೇ ನಿರ್ಲಕ್ಷವಹಿಸುತ್ತಾರೆ.

ಇದಕ್ಕೊಂದು ಪರಿಹಾರ ಕಲ್ಪಿಸುವ ಉದ್ದೇಶದಿಂದ ನವೋದ್ಯಮದಡಿ ನಾಟಿಲಸ್‌ ಹಿಯರಿಂಗ್‌ ಸಲೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಆರಂಭಿಸಲಾಗಿದೆ. ಶ್ರವಣದೋಷ ನಿವಾರಣೆಗೆ ಯಂತ್ರವೊಂದನ್ನು ಸಂಶೋಧಿಸಲಾಗಿದೆ. ಇದರ ಮೂಲಕ ಬಹಳ ಸರಳವಾಗಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಬಹುದು ಎನ್ನುತ್ತಾರೆ ಕಂಪನಿಯ ಸಹ ಸಂಸ್ಥಾಪಕಿ ರಮ್ಯಾ.

ವಯಸ್ಸಾದ ಮೇಲೆ ಕಿವಿ ಕೇಳದಿರುವುದು ಸಾಮಾನ್ಯ. ಕೇಳಿ ಇನ್ನೇನು ಮಾಡಬೇಕಾಗಿದೆ ಎಂದು ಹಿರಿಯರು ಆರಂಭದಲ್ಲಿ ಚಿಕಿತ್ಸೆಗೆ ಮುಂದಾಗದೆ ಮನೆಯಲ್ಲಿಯೇ ಕೂಡುತ್ತಾರೆ. ತಪಾಸಣೆಯ ಉಪಕರಣಗಳು ದುಬಾರಿಯಾಗಿರುವ ಕಾರಣ ಬಹಳಷ್ಟು ತಾಲ್ಲೂಕು ಕೇಂದ್ರಗಳಲ್ಲಿಯೂ ತಜ್ಞ ವೈದ್ಯರು ಸಿಗುವುದಿಲ್ಲ. ಕಿವಿ ಕೇಳದವರನ್ನು ಆಸ್ಪತ್ರೆಗೆ ಇನ್ನೊಬ್ಬರು ಕರೆದುಕೊಂಡೇ ತಿರುಗಾಡ ಬೇಕಿರುವುದರಿಂದ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಾರೆ. ದುಬಾರಿಯಾಗಿರುವ ಶ್ರವಣದೋಷ ಪತ್ತೆಯ ಯಂತ್ರವನ್ನು ಕಡಿಮೆ ದರಕ್ಕೆ ಒದಗಿಸಲು ಸುಲಭ ಉಪಕರಣವೊಂದನ್ನು ಮೂವರು ನವೋದ್ಯಮಿಗಳು ಸೇರಿ ಸಂಶೋಧಿಸಿದ್ದಾರೆ

ಶ್ರವಣದೋಷ ಪತ್ತೆ ಡಿವೈಸ್‌ ಕಂಡು ಹಿಡಿಯಲು ಒಂದೂವರೆ ವರ್ಷ ಶ್ರಮಪಟ್ಟಿದ್ದಾರೆ. ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದೆ. ಸಾಮಾನ್ಯ ಶ್ರವಣದೋಷ ಉಪಕರಣಗಳು ವೆಚ್ಚ ₹10 ಲಕ್ಷದವರೆಗೆ ಆಗುತ್ತದೆ. ಆದರೆ, ಇವರ ಯಂತ್ರ ಕಡಿಮೆ ಬೆಲೆಗೆ ಲಭಿಸುತ್ತದೆ. ರೋಗಿಗಳ ಎಲ್ಲ ಮಾಹಿತಿಯನ್ನುಡಿಜಿಟಲ್‌ ಆಗಿ ಸಂಗ್ರಹಿಸಲಿಕ್ಕೂ ಇದರಲ್ಲಿ ಅವಕಾಶವಿದೆ. ಹಾಗಾಗಿ ಹಿಂದೆ ತೋರಿಸಿದ ದಾಖಲೆಗಳಿಗಾಗಿ ಹುಡುಕಾಡಬೇಕಿಲ್ಲ.

ಸ್ಯಾಂಡ್‌ ಬಾಕ್ಸ್‌ನಲ್ಲಿ ವೈದ್ಯಕೀಯ ಉತ್ಪನ್ನಗಳ ತಯಾರಿಕೆಗಾಗಿ ಡಾ.ಕಿರಣ ಕಂಠಿ ಅವರು, ಲೈಫ್‌ಟ್ರಾನ್ಸ್ ಇನ್ನೊ ಇಕ್ವಿಪ್‌ಮೆಂಟ್ಸ್ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಇನ್ನೊಂದು ನವೋದ್ಯಮ ಆರಂಭಿಸಿದ್ದಾರೆ.

‘ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಿಗೆ ಬೇಕಾದಂತಹ ಉಪಕರಣಗಳನ್ನು ತಯಾರಿಸುವಲ್ಲಿ ಕೆಲವೊಮ್ಮೆ ಕಂಪನಿಗಳು ಹಿಂದೆ ಬೀಳುತ್ತವೆ. ಕೆಲವೊಂದು ಸೌಲಭ್ಯಗಳು ಆ ಉಪಕರಣಗಳಲ್ಲಿ ಇರುವುದಿಲ್ಲ. ವೈದ್ಯರಾದ ನಾವೇ ಯಂತ್ರಗಳ ತಯಾರಿಕೆಗೆ ಮುಂದಾದರೆ ಎಲ್ಲ ಕೊರತೆಗಳನ್ನು ನೀಗಿಸಬಹುದು. ಆ ನಿಟ್ಟಿನಲ್ಲಿಯೇ ಕಂಪನಿ ಆರಂಭಿಸಿ ಉಪಕರಣವೊಂದನ್ನು ಸಿದ್ಧಪಡಿಸಿದ್ದೇವೆ’ ಎನ್ನುತ್ತಾರೆ ಡಾ.ಕಂಠಿ.

‘ಆರಾ’ ಯಂತ್ರ ಪ್ರದರ್ಶಿಸುತ್ತಿರುವ ಡಾ.ಕಿರಣ ಕಂಠಿ
‘ಆರಾ’ ಯಂತ್ರ ಪ್ರದರ್ಶಿಸುತ್ತಿರುವ ಡಾ.ಕಿರಣ ಕಂಠಿ

ಶಿಶುಗಳಲ್ಲಿನ ಕಾಮಾಲೆಗೆ ’ಆರಾ’ ಪರಿಹಾರ

ಹುಟ್ಟಿದ ಒಂದೆರಡು ವಾರದ ಮಕ್ಕಳಲ್ಲಿ ಕಾಮಾಲೆ (ಜಾಂಡೀಸ್‌) ಕಾಣಿಸಿಕೊಳ್ಳುವುದು ಸಹಜ. ಆಗ ಮಕ್ಕಳನ್ನು ಎನ್‌ಐಸಿಯುನಲ್ಲಿ ಇಡಬೇಕಾಗುತ್ತದೆ. ಈ ಸೌಲಭ್ಯ ಎಲ್ಲ ಆಸ್ಪತ್ರೆಗಳಲ್ಲಿ ಇರುವುದಿಲ್ಲ. ಜೊತೆಗೆ ಇದು ಸ್ವಲ್ವ ದುಬಾರಿ ಕೂಡ. ಮಕ್ಕಳನ್ನು ತಾಯಿಯಿಂದ ಬೇರ್ಪಡಿಸಬೇಕಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ‘ಆರಾ’ ಎಂಬ ಉಪಕರಣ ಸಂಶೋಧಿಸಲಾಗಿದೆ.

‘ಇದರಿಂದ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ತಾಯಿ ಬೆಡ್‌ ಪಕ್ಕದಲ್ಲಿಯೇ ಇದನ್ನು ಅಳವಡಿಸಬಹುದಾಗಿದೆ. ಇದರಿಂದ ತಾಯಿ–ಮಗುವನ್ನು ಬೇರ್ಪಡಿಸಬೇಕಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸುಲಭವಾಗಿ ಬಳಸಬಹುದಾಗಿದೆ’ ಎನ್ನುತ್ತಾರೆ ಅವರು.

ನವಜಾತ ಶಿಶುವಿನಲ್ಲಿ ಕಾಮಾಲೆ ಕಾಣಿಸಿಕೊಂಡಾಗ ಫೋಟೊಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕೆ ಈ ಯಂತ್ರ ಉಪಯುಕ್ತವಾಗಿದೆ. ವಿದ್ಯುತ್‌ ಷಾಕ್‌ ಹೊಡೆಯದಂತೆ, ಮಕ್ಕಳಿಗೆ ಎಲ್ಲಿಯೂ ಚುಚ್ಚದಂತೆ ವಿನ್ಯಾಸ ಮಾಡಲಾಗಿದೆ. ಈಗಾಗಲೇ ಹಲವಾರು ಆಸ್ಪತ್ರೆಗಳಿಗೆ ಪ್ರಾಯೋಗಿಕ ಪರೀಕ್ಷೆಗಾಗಿ ನೀಡಲಾಗಿತ್ತು. ಅವರೆಲ್ಲ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT