ಬುಧವಾರ, ಜನವರಿ 19, 2022
23 °C

‘ಬೆಂಗಳೂರಿನಲ್ಲಿ ಮೊರಕ್ಕೊ ಕಾನ್ಸುಲೇಟ್ ಕಚೇರಿ ಆರಂಭಿಸಲು ಚಿಂತನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೊರಕ್ಕೊ ದೇಶದ ಕಾನ್ಸುಲೇಟ್ ಕಚೇರಿಯನ್ನು ಬೆಂಗಳೂರಿನಲ್ಲಿಯೂ ಆರಂಭಿಸುವ ಆಲೋಚನೆ ಇದೆ ಎಂದು ಮೊರಕ್ಕೊದ ಭಾರತದ ರಾಯಭಾರಿ ಮೊಹಮ್ಮದ್ ಮಲ್ಲಿಕಿ ತಿಳಿಸಿದರು. ‘2025ಕ್ಕೆ ಮೊದಲು ಭಾರತವನ್ನು ನಮ್ಮ ಟಾಪ್ 10 ಪಾಲುದಾರ ದೇಶಗಳ ಸಾಲಿನಲ್ಲಿ ಸೇರಿಸಿಕೊಳ್ಳುವ ಉದ್ದೇಶವನ್ನೂ ಹೊಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ನಾವು ನಮ್ಮ ವೀಸಾ ಸೇವೆಗಳನ್ನು ಹೊರಗುತ್ತಿಗೆ ನೀಡಿದ್ದೇವೆ. ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳು ತಮ್ಮ ನಗರಗಳಿಂದಲೇ ವೀಸಾ ಬಯಸಿ ಅರ್ಜಿ ಸಲ್ಲಿಸಬಹುದು. ಮೂರರಿಂದ ಐದು ದಿನಗಳಲ್ಲಿ ವೀಸಾ ನೀಡಲಾಗುತ್ತದೆ’ ಎಂದು ಅವರು ಹೇಳಿದ್ದಾಗಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

‘ನಮ್ಮಲ್ಲಿ ಉದ್ದಿಮೆಗಳಿಗೆ ಉತ್ತೇಜನ ನೀಡುವ ವಲಯಗಳನ್ನು ಸ್ಥಾಪಿಸಲಾಗಿದೆ. ವಿದೇಶಿ ಹೂಡಿಕೆದಾರರಿಗೆ ಮೊದಲ ಐದು ವರ್ಷಗಳವರೆಗೆ ಕಾರ್ಪೊರೇಟ್ ತೆರಿಗೆ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ನಂತರದ ವರ್ಷಗಳಲ್ಲಿ ವಾರ್ಷಿಕ ಶೇಕಡ 15ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಆರಂಭದ ಹದಿನೈದು ವರ್ಷಗಳವರೆಗೆ ವೃತ್ತಿ ತೆರಿಗೆಯಿಂದ ವಿನಾಯಿತಿ ಇದೆ’ ಎಂದು ಮೊರಕ್ಕೊ ದೇಶದ ಹೂಡಿಕೆ ಮತ್ತು ರಫ್ತು ಅಭಿವೃದ್ಧಿ ಸಂಸ್ಥೆಯ (ಎಎಂಡಿಐಇ) ಮಹಾನಿರ್ದೇಶಕ ಯೂಸಫ್ ಎಲ್ ಬಾರಿ ತಿಳಿಸಿದ್ದಾರೆ.

ಮೊರಕ್ಕೊ ದೇಶದ ಉನ್ನತ ಮಟ್ಟದ ನಿಯೋಗವೊಂದು ಆರು ದಿನಗಳ ಭಾರತ ಪ್ರವಾಸ ಕೈಗೊಂಡಿದೆ. ಭಾರತ ಮತ್ತು ಮೊರಕ್ಕೊ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಹೆಚ್ಚಿಸುವ ಉದ್ದೇಶವನ್ನು ಇದು ಹೊಂದಿದೆ ಎಂದು ಪ್ರಕಟಣೆ ವಿವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು